ಬೆಂಗಳೂರು: ಇತ್ತೀಚಿಗೆ ಕಬ್ಬನ್ ಪಾರ್ಕ್‌ನಲ್ಲಿರುವ ಟೆನ್ನಿಸ್ ಕ್ಲಬ್ ಆವರಣದಲ್ಲಿ ವರ್ಷಾಚರಣೆ ವೇಳೆ ಮೊಬೈಲ್‌ನಲ್ಲಿ “ಸೆಲ್ಫಿ’ಗೆ ಫೋಸ್ ನೀಡುವಂತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಪತ್ನಿ ಮತ್ತು ಅವರ ಸ್ನೇಹಿತೆಯರ ಜತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇರೆಗೆ ಕಾರು ಚಾಲಕನೊಬ್ಬನನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಾಲಕ್ಷ್ಮೀ ಲೇಔಟ್ ನಿವಾಸಿ ಕ್ಯಾಬ್ ಚಾಲಕ ಶಿವರಾಜ್ ಬಂಧಿತನಾಗಿದ್ದು, ಕ್ಲಬ್ ಆವರಣದಲ್ಲಿ ಡಿ.31 ರಂದು ಶನಿವಾರ ರಾತ್ರಿ ವರ್ಷಾಚರಣೆ ನಿಮಿತ್ತ ನಡೆದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತರ ಪತ್ನಿ ಹಾಗೂ ಮಹಿಳೆಯರ ಜತೆ ಕುಡಿದ ಅಮಲಿನಲ್ಲಿ ಶಿವರಾಜ್ ಹಾಗೂ ಆತನ 14 ಮಂದಿ ಸ್ನೇಹಿತರು ದುಂಡಾವರ್ತನೆ ತೋರಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕುಡಿದ ಅಮಲಿನಲ್ಲಿ ಗಲಾಟೆ: ಟೆನ್ನಿಸ್ ಕ್ಲಬ್ ವತಿಯಿಂದ ಆಯೋಜನೆಗೊಂಡಿದ್ದ ಹೊಸ ವರ್ಷದ ಪಾರ್ಟಿಗೆ ತಮ್ಮ ಪತ್ನಿ, ಮಕ್ಕಳು ಹಾಗೂ ಸೋದರ ಸೇರಿದಂತೆ ಕುಟುಂಬದ ಜತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಭಾಗವಹಿಸಿದ್ದರು. ಆಗ ಅಧಿಕಾರಿ ಕುಟುಂಬದ ಟೇಬಲ್ ಬಳಿ ಕುಟುಂಬವೊಂದು ಕುಳಿತಿತು. ಕೆಲ ಹೊತ್ತಿನ ಬಳಿಕ ಊಟ ತೆಗೆದುಕೊಂಡು ಬರಲು ಪತಿ ತೆರೆಳಿದ್ದರಿಂದ ಆ ಟೇಬಲ್‌ನಲ್ಲಿ ಒಬ್ಬಂಟಿಯಾಗಿ ಮಹಿಳೆ ಕುಳಿತಿದ್ದರು. ಅದೇ ವೇಳೆಗೆ ಅಲ್ಲಿಗೆ ಬಂದ ಆರೋಪಿಗಳು, ತಮ್ಮ ಮೊಬೈಲ್ ತೆಗೆದು ಆ ಮಹಿಳೆ ಜತೆ “ಸೆಲ್ಫಿ’ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಈ ವರ್ತನೆಗೆ ಆಕ್ಷೇಪಿಸಿದ ಅವರು, ಆರೋಪಿಗಳಿಗೆ ದೂರ ಹೋಗುವಂತೆ ತಾಕೀತು ಮಾಡಿದ್ದಾರೆ. ಆದರೆ ಕಂಠಪೂರ್ತಿ ಮದ್ಯ ಸೇವಿಸಿದ್ದ ಕಿಡಿಗೇಡಿಗಳು, ಮಹಿಳೆ ಜತೆ ಅನುಚಿತವಾಗಿ ನಡೆದುಕೊಂಡಿದ್ದಾರೆ. ಈ ಗಲಾಟೆ ಸದ್ದಿಗೆ ಗಮನಿಸಿದ ಮತ್ತೂಂದು ಟೇಬಲ್‌ನಲ್ಲಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಪತ್ನಿ, ಕೂಡಲೇ ಆ ಮಹಿಳೆ ನೆರವಿಗೆ ಬಂದಿದ್ದಾರೆ. ಆಗ ಅವರೊಂದಿಗೂ ಪುಂಡಾಟಿಕೆ ನಡೆಸಿದ ಆರೋಪಿಗಳು, ಅಧಿಕಾರಿ ಪತ್ನಿ ಜತೆಗೂ “ಸೆಲ್ಫಿ’ ತೆಗೆದುಕೊಳ್ಳಲು ಯತ್ನಿಸಿದ್ದಾರೆ.
ಅಷ್ಟರಲ್ಲಿ ಅಧಿಕಾರಿ ಹಾಗೂ ಅವರ ಸೋದರ, ಟೇಬಲ್ ಬಳಿಗೆ ಬಂದು ಪುಂಡಾಟಿಗೆ ನಡೆಸಿದವರ ಮೇಲೆ ಜೋರು ಮಾಡಿದ್ದಾರೆ. ಇದರಿಂದ ಬೆದರಿದ ಕಿಡಿಗೇಡಿಗಳು ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕೃತ್ಯದ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಕ್ಲಬ್‌ನ ಸಿಸಿಟೀವಿ ಕ್ಯಾಮೆರಾದ ಸೆರೆಯಾಗಿದ್ದ ದೃಶ್ಯಾವಳಿಗಳನ್ನಾಧರಿಸಿ ಆರೋಪಿಗಳ ಪೈಕಿ ಶಿವರಾಜ್‌ನನ್ನು ಬಂಧಿಸಿದ್ದಾರೆ. ಈತ ಕ್ಯಾಬ್ ಚಾಲಕನಾಗಿದ್ದು, ಕುಡಿದ ಮತ್ತಿನಲ್ಲಿದ್ದ ಈ ರೀತಿ ವರ್ತಿಸಿದ್ದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.