Advertisement

ಎಗ್ಗಿಲ್ಲದೇ ಸಾಗಿದೆ ಕಳಪೆ ಮಾರಾಟ

09:39 PM Jul 01, 2019 | Team Udayavani |

ಚಾಮರಾಜನಗರ: ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆಯು ಜು.1 ರಿಂದ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸಿ ಚಾಲನೆ ಮಾಡುವುದನ್ನು ಕಡ್ಡಾಯಗೊಳಿಸಿದ್ದರಿಂದ, ಬೀದಿ ಬದಿಯಲ್ಲಿ ಕಳಪೆ ಗುಣಮಟ್ಟದ ಹೆಲ್ಮೆಟ್‌ ಮಾರಾಟ ಎಗ್ಗಿಲ್ಲದೇ ಸಾಗಿದೆ.

Advertisement

ಸರ್ವೋಚ್ಛ ನ್ಯಾಯಾಲಯವು ಸಂಚಾರ ನಿಯಮಗಳನ್ನು ಪಾಲಿಸುವ ಸಂಬಂಧ ಹಾಗೂ ಅಪಘಾತ ಪ್ರಕರಣಗಳನ್ನು ತಡೆಗಟ್ಟುವ ಸಂಬಂಧ ದ್ವಿಚಕ್ರ ವಾಹನ ಚಾಲನೆ ಮಾಡುವ ಸವಾರರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸುವಂತೆ ಆದೇಶ ನೀಡಿದೆ. ಈ ಆದೇಶ ಪಾಲನೆಯ ಸಲುವಾಗಿ ಜಿಲ್ಲೆಯಲ್ಲಿ ಹೆಲ್ಮೆಟ್‌ ಕಡ್ಡಾಯ ಮಾಡಲಾಗಿದ್ದು ಸೋಮವಾರದಿಂದ ಜಾರಿಗೆ ಬಂದಿದೆ. ಆದೇಶ ಉಲ್ಲಂ ಸಿದವರ ವಿರುದ್ಧ ದಂಡ ವಿಧಿಸುವುದಾಗಿಯೂ ಪ್ರಕಟಣೆ ಹೊರಡಿಸಿದೆ.

ಹೆಲ್ಮೆಟ್‌ ಕಡ್ಡಾಯ ಸಡಿಲಗೊಂಡಿತ್ತು: ಜಿಲ್ಲಾ ಪೊಲೀಸ್‌ ಇಲಾಖೆಯ ಆದೇಶ ಸೋಮವಾರದಿಂದ ಜಾರಿಯಾಗಿದ್ದರಿಂದಾಗಿ ಅನೇಕ ದ್ವಿಚಕ್ರ ವಾಹನ ಸವಾರರು, ಮುಂಜಾನೆಯಿಂದಲೇ ಹೆಲ್ಮೆಟ್‌ ಧರಿಸಿ ವಾಹನ ಚಾಲನೆ ನಡೆಸಿದರು. ಎರಡು ವರ್ಷಗಳ ಹಿಂದೆ ಹೀಗೆಯೇ ಹೆಲ್ಮೆಟ್‌ ಕಡ್ಡಾಯ ನಿಯಮವನ್ನು ಜಾರಿಗೊಳಿಸಿದಾಗ ಅನೇಕ ಮಂದಿ ಹೆಲ್ಮೆಟ್‌ ಖರೀದಿಸಿದ್ದರು. ಕೆಲವು ತಿಂಗಳ ನಂತರ ನಗರದಲ್ಲಿ ನಡೆಯುತ್ತಿದ್ದ ರಸ್ತೆ ದುರಸ್ತಿ ಕಾಮಗಾರಿಗಳಿಂದಾಗಿ, ವಾಹನ ಸವಾರರು ಓಡಾಡುವುದೇ ದುಸ್ತರವಾಗಿದ್ದ ಸಂದರ್ಭದಲ್ಲಿ ಹೆಲ್ಮೆಟ್‌ ಕಡ್ಡಾಯವನ್ನು ನಗರದಲ್ಲಿ ಸಡಿಲಗೊಳಿಸಲಾಗಿತ್ತು.

ಮೂಲೆಯಲ್ಲಿದ್ದ ಹೆಲ್ಮೆಟ್‌ ರಸ್ತೆಗೆ ಬಂತು: ಈಗ ಸೋಮವಾರದಿಂದ ಪೊಲೀಸ್‌ ಇಲಾಖೆ ಮತ್ತೆ ಜಿಲ್ಲೆಯಲ್ಲಿ ಹೆಲ್ಮೆಟ್‌ ಕಡ್ಡಾಯ ಜಾರಿಗೊಳಿಸಿದೆ. ಹೀಗಾಗಿ ಹಿಂದೆ ಕೊಂಡು ಮೂಲೆಗೆ ಸೇರಿ, ಧೂಳು ತಿನ್ನುತ್ತಿದ್ದ ಹೆಲ್ಮೆಟ್‌ಗಳು ಹೊರಬಂದವು. ಧೂಳು ಕೊಡವಿ, ಒರೆಸಿ ಹೆಲ್ಮೆಟ್‌ ಧರಿಸಿ ಸವಾರರು ಚಾಲನೆ ನಡೆಸಿದರು.

ಒಂದೇ ದಿನ 500ಕ್ಕೂ ಹೆಚ್ಚು ಸವಾರರಿಗೆ ದಂಡ: ವಾಹನ ಚಾಲನೆ ಮಾಡುವವರು ಮಾತ್ರವಲ್ಲದೇ ಹಿಂಬದಿ ಸವಾರರು ಸಹ ಹೆಲ್ಮೆಟ್‌ ಧರಿಸುವುದನ್ನು ಕಡ್ಡಾಯಗೊಳಿಸಿದ್ದರಿಂದ ಅನೇಕ ಸವಾರರು ಪರದಾಡಬೇಕಾಯಿತು. ನಗರದಲ್ಲಿ ಹೆಲ್ಮೆಟ್‌ ಧರಿಸಿರದ ಸವಾರರನ್ನು ನಿಲ್ಲಿಸಿ ಸಂಚಾರ ಠಾಣೆ ಪೊಲೀಸರು ತಲಾ 100 ರೂ. ದಂಡ ವಿಧಿಸಿದರು. ಜಿಲ್ಲಾ ಕೇಂದ್ರದಲ್ಲಿ ಸೋಮವಾರ ಒಂದೇ ದಿನ ಸಂಜೆಯವರೆಗೆ 500ಕ್ಕೂ ಹೆಚ್ಚು ಮಂದಿ ಹೆಲ್ಮೆಟ್‌ ಧರಿಸದ ಸವಾರರಿಗೆ ದಂಡ ವಿಧಿಸಲಾಯಿತು!

Advertisement

ಸಂದರ್ಭ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಳಪೆ ಹೆಲ್ಮೆಟ್‌ ಮಾರಾಟಗಾರರು: ನಗರದಲ್ಲಿ ಹೆಲ್ಮೆಟ್‌ ಕಡ್ಡಾಯ ಮಾಡುತ್ತಿರುವುದನ್ನು ಅರಿತ ಕಳಪೆ ಹೆಲ್ಮೆಟ್‌ ಮಾರಾಟ ಮಾಡುವ ಮಂದಿ, ಸೋಮವಾರ ಬೆಳಗ್ಗೆಯಿಂದಲೇ ನಗರದ ಮುಖ್ಯ ರಸ್ತೆಗಳ ಬದಿಯಲ್ಲಿ ಮಾರಾಟ ಆರಂಭಿಸಿದರು. ಈ ಹೆಲ್ಮೆಟ್‌ಗಳು ಕಳಪೆ ಗುಣಮಟ್ಟದ್ದಾಗಿದ್ದು, ನಕಲು ಮಾಡಿದ ಐಎಸ್‌ಐ ಮಾರ್ಕನ್ನು ಅಕ್ರಮವಾಗಿ ಅಂಟಿಸಲಾಗಿದೆ. ಇದರ ಬಗ್ಗೆ ತಿಳಿಯದ ಅನೇಕ ಮಂದಿ ಪೊಲೀಸರ ದಂಡದಿಂದ ಪಾರಾಗಲು, ಮತ್ತು ಕಡಿಮೆ ದರಕ್ಕೆ ದೊರಕುತ್ತದೆ ಎಂಬ ಕಾರಣದಿಂದ ಖರೀದಿಸುತ್ತಿದ್ದುದು ಕಂಡು ಬಂತು.

ಐಎಸ್‌ಐ ಮಾರ್ಕುಳ್ಳ ಹೆಲ್ಮೆಟ್‌ ಬಳಸಿ: ಗುಣಮಟ್ಟವಿಲ್ಲದೇ ವಾಹನದಿಂದ ಕೆಳಗೆ ಬಿದ್ದರೆ ತಲೆಗೆ ರಕ್ಷಣೆ ನೀಡದ ಇಂಥ ಹೆಲ್ಮೆಟ್‌ಗಳನ್ನು ಕೇವಲ 200-300 ರೂ. ಉಳಿಸುವ ಸಲುವಾಗಿ ವಾಹನ ಸವಾರರು ಖರೀದಿಸುತ್ತಿದ್ದಾರೆ. 600 ರೂ. ಗಳಿಂದ ಮೊದಲುಗೊಂಡು ಐಎಸ್‌ಐ ಮಾರ್ಕುಳ್ಳ ಉತ್ತಮ ಗುಣಮಟ್ಟದ ಹೆಲ್ಮೆಟ್‌ಗಳು ಆಟೋಮೊಬೈಲ್‌ ಅಂಗಡಿಗಳಲ್ಲಿ, ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂಥ ಆನ್‌ಲೈನ್‌ ಸ್ಟೋರ್‌ಗಳಲ್ಲಿ ದೊರಕುತ್ತಿವೆ.

ಕನಿ ಷ್ಠ 70 ಸಾವಿರ ರೂ. ಕೊಟ್ಟು ಬೈಕ್‌ ಕೊಂಡಿರುವ ಸವಾರರು, ತಲೆಯ ರಕ್ಷಣೆ ಮಾಡುವ ಹೆಲ್ಮೆಟ್‌ಗೆ 300-400 ರೂ. ಹೆಚ್ಚು ಕೊಡಬೇಕಾಗುತ್ತದೆಂದು ರಸ್ತೆ ಬದಿಯಲ್ಲಿ ಮಾರುವ ಹೆಲ್ಮೆಟ್‌ಗಳನ್ನು ಕೊಳ್ಳುತ್ತಿದ್ದಾರೆ. ಇಂಥ ಮನೋಭಾವ ಬಿಡಬೇಕು. ಉತ್ತಮ ಗುಣಮಟ್ಟದ ಹೆಲ್ಮೆಟ್‌ಗಳನ್ನು ಕೊಳ್ಳಬೇಕು. ಪೊಲೀಸರು ಇಂಥ ಕಳಪೆ ಹೆಲ್ಮೆಟ್‌ ಮಾರಾಟ ಮಾಡುವವರನ್ನು ಎತ್ತಂಗಡಿ ಮಾಡಿಸಬೇಕು.
-ಬಸವರಾಜು, ವಾಹನ ಸವಾರ

ರಸ್ತೆ ಬದಿಯಲ್ಲಿ ಕಳಪೆ ದರ್ಜೆಯ ಹೆಲ್ಮೆಟ್‌ ಮಾರಾಟ ಮಾಡುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ಸಿಬ್ಬಂದಿಗೆ ಸೂಚಿಸಿದ್ದೇನೆ. ಸಾರ್ವಜನಿಕರು ಸಹ ಇದರ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕು. ಗುಣಮಟ್ಟದ, ಐಎಸ್‌ಐ ಗುರುತುಳ್ಳ ಪೂರ್ತಿಯಾಗಿ ರಕ್ಷಣೆ ನೀಡುವ ಹೆಲ್ಮೆಟ್‌ಗಳನ್ನೇ ಕೊಳ್ಳಬೇಕು. ಪೊಲೀಸರು ದಂಡ ಹಾಕುತ್ತಾರೆಂದು ಅದರಿಂದ ಪಾರಾಗಲು ಕಳಪೆ ಹೆಲ್ಮೆಟ್‌ಗಳನ್ನು ಕೊಳ್ಳಬಾರದು.
-ಎಚ್‌.ಡಿ. ಆನಂದ್‌ಕುಮಾರ್‌, ಎಸ್ಪಿ, ಚಾ.ನಗರ

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next