ಬೆಂಗಳೂರು: ವಿದೇಶ ಹಾಗೂ ನೆರೆ ರಾಜ್ಯಗಳಿಂದ ಪಾರ್ಟಿ ಡ್ರಗ್ಸ್‌ಗಳನ್ನು ತರಿಸಿಕೊಂಡು ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಕೇರಳ ಮೂಲದ ಯುವಕರಿಗೆ ಮಾರಾಟ ಮಾಡುತ್ತಿದ್ದ ಮೂವರು ವಿದೇಶಿ ಪ್ರಜೆಗಳನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ನೈಜಿರಿಯಾ ದೇಶದ ಒಬಿನಾ ಪ್ರಾಮೀಸ್ ವಿಕ್ಟರ್(35), ಒಸಾಸ್ ಮೊಸೆಸ್(30) ಮತ್ತು ಯುಜೋಚುಕುವಾ ಮಾರ್ಕ್‌ಮೌರ್ಸೆ (40) ಬಂಧಿತರು. ಆರೋಪಿಗಳಿಂದ 60 ಲಕ್ಷ ರೂ. ಮೌಲ್ಯದ 561 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್, 3 ಮೊಬೈಲ್ ಜಪ್ತಿ ಮಾಡಲಾಗಿದೆ.
ಆರೋಪಿಗಳು ವ್ಯವಹಾರ ವೀಸಾ ಪಡೆದು ಬೆಂಗಳೂರಿಗೆ ಬಂದಿದ್ದು, ಇದೀಗ ವೀಸಾ ಅವಧಿ ಮುಗಿದರೂ ಅಕ್ರಮವಾಗಿ ವಾಸವಾಗಿದ್ದಾರೆ. ಅಲ್ಲದೆ, ವಿದೇಶ ಹಾಗೂ ನೆರೆ ರಾಜ್ಯಗಳಲ್ಲಿ ವಾಸವಾಗಿರುವ ತಮ್ಮ ದೇಶದ ಪ್ರಜೆಗಳ ಮೂಲಕ ಪಾರ್ಟಿ ಡ್ರಗ್ಸ್ ಎಂದೆ ಹೇಳಲಾಗದ ಎಂಡಿಎಂಎ ಕ್ರಿಸ್ಟಲ್‌ಗಳನ್ನು ತರಿಸಿಕೊಂಡು ಇಲ್ಲಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಕೇರಳ ಮೂಲದ ಯುವಕರಿಗೆ ಡ್ಸಗ್ಸ್ ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಮಾಡುವಾಗ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಲಾರಿಗೆ ಎರಡು ಬೈಕ್ ಗಳು ಢಿಕ್ಕಿಯಾಗಿ ಮೂವರು ಯುವಕರ ದುರ್ಮರಣ
ಆರೋಪಿಗಳ ಪೈಕಿ ಒಬಿನಾ ಪ್ರಾಮೀಸ್ ವಿಕ್ಟರ್ 2021ರಲ್ಲಿ ಅಮೃತಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಬಿಡುಗಡೆಯಾದ ಬಳಿಕವೂ ಮತ್ತೆ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದಾನೆ ಎಂದು ಸಿಸಿಬಿ ಪೊಲೀಸರು ಹೇಳಿದರು. ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.