ಬೆಂಗಳೂರು: ರಾಜ್ಯದಲ್ಲಿ ಈಗ ಮದ್ಯ ಮಾರಾಟ ಮಾಡುವವರಿಗೆ ಮಾತ್ರ ಮಾಫಿ? ಹೌದು, ಅಗತ್ಯ ದಿನಸಿ ವಸ್ತುಗಳ ಖರೀದಿಗಾಗಿ ಜನ ರಸ್ತೆಗಿಳಿದರೆ, ಅಂತಹವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ. ಆದರೆ, ನಿಷೇಧದ ನಡುವೆಯೂ 3 ಪಟ್ಟು ದರದಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ ಆಗುತ್ತಿದೆ.
ಒಂದೆಡೆ ನಿಯಮ ಉಲ್ಲಂಘನೆ ಮತ್ತೂಂದೆಡೆ ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಅಂತಹವರ ಬಗ್ಗೆ ಅಬಕಾರಿ -ಪೊಲೀಸ್ ಇಲಾಖೆ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
90 ರೂ. ಬೆಲೆಯ “ಪ್ರಸ್ಟೀಜ್’ ಬ್ರ್ಯಾಂಡ್ ಮದ್ಯ ಬ್ಲ್ಯಾಕ್ ಮಾರುಕಟ್ಟೆಯಲ್ಲಿ 300-400 ರೂ.ಗೆ ಮಾರಾಟ ಆಗುತ್ತಿದೆ. 670 ಮೌಲ್ಯದ “ಎಂಎಚ್’ ಫುಲ್ ಬಾಟಲಿ ಮದ್ಯ 2 ಸಾವಿರ ರೂ.ಗೆ ಬಿಕರಿಯಾಗುತ್ತಿದೆ. 1,300-1,500 ರೂ.ಗಳ ಫುಲ್ ಬಾಟಲಿ “ಬ್ಲ್ಯಾಕ್ ಡಾಗ್’ 3 ಸಾವಿರ ರೂ.ಗೆ ನೀಡಲಾಗುತ್ತಿದೆ. ಮದ್ಯಪ್ರಿಯರು ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡುವಂತಿಲ್ಲ. ಅತ್ತ ಅಧಿಕಾರಿಗಳು ದೂರು ನೀಡಿದರೆ ಕ್ರಮ ಎಂಬ ತತ್ವ ಅನುಸರಿಸುತ್ತಿದ್ದಾರೆ. ಇವರಿಬ್ಬರ ನಡುವೆ ವ್ಯಾಪಾರಿಗಳು ಭರ್ಜರಿ ಸುಲಿಗೆ ಮಾಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್ ಡೌನ್ ಆದೇಶ ಘೋಷಿಸುತ್ತಿದ್ದಂತೆ ಬೆಂಗಳೂರು ಸೇರಿ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಅದಕ್ಕೂ ಮೊದಲು ಜನತಾ ಕರ್ಫ್ಯೂ ಘೋಷಿಸಿದ ದಿನವೇ ಮದ್ಯ ಮಾರಾಟ ಮಾಲಿಕರು ಅಕ್ರಮವಾಗಿ ನೂರಾರು ಮದ್ಯದ ಬಾಕ್ಸ್ ಗಳನ್ನು ಮನೆ ಮತ್ತು ಗೋದಾಮುಗಳಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದರು. ಇದೀಗ ಅದೇ ಮದ್ಯದ ಬಾಟಲಿಗಳನ್ನು 3-4 ಪಟ್ಟು ಅಧಿಕ ಮೊತ್ತಕ್ಕೆ ಅಲ್ಲಿಂದಲೇ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, “ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಒಂದು ವೇಳೆ ಯಾರಾದರೂ ದೂರು ನೀಡಿದರೆ ಕಾನೂನು ಕ್ರಮಕೈಗೊಳ್ಳುತ್ತೇವೆ’ ಎಂಬ ಸಿದ್ಧ ಉತ್ತರ ಪೊಲೀಸ್ ಅಧಿಕಾರಿಗಳಿಂದ ಬರುತ್ತಿದೆ.
ಕೆಲವರು ಮದ್ಯದ ಅಂಗಡಿಗಳ ಹಿಂಬಾಗಿಲು ಮೂಲಕ ಮಾರಾಟ ಮಾಡುತ್ತಿದ್ದಾರೆ. ಅಂತಹ ಮಳಿಗೆಗಳ ಮೇಲೆ ದಾಳಿ ನಡೆಸಿ ಅವರ ಪರವಾನಿಗೆ ಜಪ್ತಿ ಮಾಡಲಾಗುತ್ತಿದೆ. ಇದುವರೆಗೂ 70ಕ್ಕೂ ಅಧಿಕ ಬಾರ್ ಆಂಡ್ ರೆಸ್ಟೋರೆಂಟ್, ವೈನ್ ಶಾಪ್ ಗಳ ಮೇಲೆ ದಾಳಿ ನಡೆಸಲಾಗಿದೆ. ಈ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಅಬಕಾರಿ ಅಧಿಕಾರಿಗಳು ಮಾಹಿತಿ ನೀಡಿದರು.
ಈಗ ಲಾಠಿ ಬೀಸುತ್ತಿಲ್ಲ, ವಾಹನಗಳ ಜಪ್ತಿ : ನಗರ ಪೊಲೀಸ್ ಆಯುಕ್ತರ ಸೂಚನೆಯಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಲಾಠಿ ಬಳಸುತ್ತಿಲ್ಲ. ಠಾಣೆಯಲ್ಲೇ ಇಟ್ಟು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಯಾರ ಮೇಲೂ ಲಾಠಿ ಬಿಸುತ್ತಿಲ್ಲ. ಬದಲಿಗೆ ಅನಗತ್ಯವಾಗಿ ಓಡಾಡುವವರ ವಾಹನಗಳ ಜಪ್ತಿ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಇದುವರೆಗೂ 500ಕ್ಕೂ ಅಧಿಕ ವಾಹನಗಳನ್ನು ವಶಕ್ಕೆ ಪಡೆದುಕೊಂಡು ಸಂಚಾರ ಠಾಣೆಗಳಲ್ಲಿ ಇರಿಸಲಾಗಿದೆ. ಲಾಕ್‌ಡೌನ್ ಮುಗಿಯುವವರೆಗೂ ವಾಪಸ್ ಕೊಡುವುದಿಲ್ಲ ಎಂದು ಪೊಲೀಸರು ಹೇಳಿದರು.
ಯಾರ ಮೇಲೂ ಲಾಠಿ ಬೀಸುತ್ತಿಲ್ಲ. ಬದಲಿಗೆ ಅನಗತ್ಯವಾಗಿ ಓಡಾಡುವ ವಾಹನಗಳ ಜಪ್ತಿ ಕಾರ್ಯನಡೆಯುತ್ತಿದೆ. ಹಾಗೆಯೇ ಬ್ಲ್ಯಾಕ್‌ನಲ್ಲಿ ಮದ್ಯ ಮಾರಾಟದ ಬಗ್ಗೆ ಯಾವುದೇ ಮಾಹಿತಿಯಿಲ್ಲ. –
ರೋಹಿಣಿ ಕಟೋಚ್ ಸೆಪಟ್, ದಕ್ಷಿಣ ವಿಭಾಗ ಡಿಸಿಪಿ
-ಮೋಹನ್ ಭದ್ರಾವತಿ