Advertisement

ಹಣಕ್ಕೆ ಮಾರಾಟವಾಗುತ್ತಿರುವ ಶಿಕ್ಷಣ

04:17 PM Dec 01, 2018 | Team Udayavani |

ದಾವಣಗೆರೆ: ವಿದ್ಯೆ, ಔಷಧಿ, ಅನ್ನ ಉಚಿತವಾಗಿ ಸಿಗುತ್ತಿದ್ದ ನಮ್ಮ ನಾಡಿನಲ್ಲಿ ಇಂದು ವಿದ್ಯೆ ಹಣಕ್ಕೆ ಮಾರಾಟವಾಗುತ್ತಿರುವುದು ದುರಂತದ ಸಂಗತಿ ಎಂದು ಸಾಹಿತಿ ಟಿ.ಎಸ್‌. ಶಾಂತಗಂಗಾಧರ್‌ ವಿಷಾದಿಸಿದ್ದಾರೆ. ಶುಕ್ರವಾರ, ನಗರದ ಎ.ಆರ್‌.ಜಿ. ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ 63ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ
ಅವರು, ಅನೇಕ ಹೋರಾಟಗಾರರು, ಮಹನೀಯರು ಭವ್ಯ ಕನ್ನಡ ನಾಡು ಕಟ್ಟಲು ಪ್ರಾಣತ್ಯಾಗ ಮಾಡಿದ್ದಾರೆ. ಇಂತಹ ನಾಡಿನಲ್ಲಿ ಈ ಹಿಂದೆ ಎಲ್ಲರೂ ಸ್ವಾಭಿಮಾನದಿಂದ ಬದುಕು ಸಾಗಿಸುತ್ತಿದ್ದರು ಎಂದರು.

Advertisement

ಹಸಿದವರಿಗೆ ಅನ್ನ, ಕಲಿಯುವವರಿಗೆ ವಿದ್ಯೆ, ಕಾಯಿಲೆಗೆ ತುತ್ತಾದವರಿಗೆ ಔಷಧಿಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ ಉಚಿತವಾಗಿ ನೀಡುತ್ತಿದ್ದರು. ಆದರೀಗ ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿಯಿಂದ ಬದಲಾವಣೆ ಮಾಡಿಕೊಂಡಿರುವುದು ಶೋಚನೀಯ ಎಂದರು. 

ಹುಟ್ಟಿದ ಮಣ್ಣಿನ ಋಣ ತೀರಿಸಲೆಂದೇ ಸರ್‌| ಎಂ. ವಿಶ್ವೇಶರಾಯನವರು, ಕನ್ನಂಬಾಡಿ ಕಟ್ಟೆ ಕಟ್ಟಿ ಜನರ ಬದುಕು ಹಸನಾಗಲು ಕಾರಣರಾಗಿದ್ದಾರೆ. ಆದರೆ, ಇಂದಿನ ಯುವಕರು ಕಲಿತ ವಿದ್ಯೆ ನಾಡಿಗೆ ಸಮರ್ಪಣೆ ಮಾಡದೇ, ಅಮೇರಿಕಾ, ಜಪಾನ್‌, ಲಂಡನ್‌ನಂತಹ ವಿದೇಶಗಳಿಗೆ ವಲಸೆ ಹೋಗಿ ಅಲ್ಲಿನ ಜನರ, ದೇಶದ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂಗ್ಲಿಷ್‌ ಭಾಷೆ ಇಂದು ಜಾಗತಿಕ ಭಾಷೆ ಎನ್ನುವ ಭ್ರಮೆ ಹುಟ್ಟಿಸಿದೆ. ಆದರೆ ಕನ್ನಡ ಕೇವಲ ಭಾಷೆ ಅನ್ನುವ ಉದ್ದೇಶಕ್ಕೆ ಬೆಳೆಯುತ್ತಿಲ್ಲ. ಆದರೆ, ಕನ್ನಡ ಕೇವಲ ಭಾಷೆಯಲ್ಲ. ಭಾಷೆ ಮೀರಿದ ಬದುಕಿನ ಅನೇಕ ಮಜಲುಗಳ ಸಂಗಮವಾಗಿದೆ ಎಂದು ಅಭಿಪ್ರಾಯಪಟ್ಟರು. 

ಇಂಗ್ಲಿಷ್‌ ಭಾಷೆಗೆ ಕೇವಲ 600 ವರ್ಷಗಳ ಇತಿಹಾಸವಿದ್ದು, 18 ಭಾಷೆಗಳು ಸಮ್ಮಿಶ್ರಣಗೊಂಡಿವೆ. ಆದರೆ 2 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ನಾಡಿನ ಅಖಂಡ ಭಾಷೆಯಾಗಿದೆ. ಏಕಕಾಲದಲ್ಲಿ ಭಾಷೆ ಮತ್ತು ಸಂಖ್ಯೆಗಳನ್ನು ಬಳಸಲು ಕನ್ನಡ ಅನುಕೂಲ ಆಗಿದೆ. ಪ್ರತಿಯೊಬ್ಬರ ಬದುಕನ್ನು ಅವಿಸ್ಮರಣೀಯಗೊಳಿಸುವ ಶಕ್ತಿ ಕನ್ನಡ ಭಾಷೆಗಿದೆ ಎಂದರು.

Advertisement

ಕಾಡು ದೊಡ್ಡದಿದ್ದರೆ ಮಾತ್ರ ನಾಡು ದೊಡ್ಡದಾಗಿರಲು ಸಾಧ್ಯ. ಆದರಿಂದು ನೀರು, ಗಣಿ, ನಿವೇಶನ ಎಲ್ಲವನ್ನು ಲೂಟಿ
ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ನಾಡಿನ ಜನರು ಜಾಗೃತರಾಗಬೇಕು. ಕನ್ನಡದ ನಾಡು, ನೆಲ, ಜಲ, ಸಂಸ್ಕೃತಿ ಎಲ್ಲವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
 
ಕಾಲೇಜಿನ ಪ್ರಾಂಶುಪಾಲ ಪ್ರೊ| ಕೆ.ಎಸ್‌. ಬಸವರಾಜಪ್ಪ ಮಾತನಾಡಿ, ಇಂಗ್ಲಿಷ್‌ ಭಾಷೆಗೆ ಕೇವಲ ಅಲ್ಪಾವಧಿಯ ಇತಿಹಾಸವಿದ್ದರೆ, ಕನ್ನಡಕ್ಕೆ 2 ಸಾವಿರ ವರ್ಷಗಳ ಸಮೃದ್ಧ ಇತಿಹಾಸವಿದೆ. ಆದರೂ ಕನ್ನಡ ಭಾಷೆ ಅನ್ಯಭಾಷೆಗಳ ಜೊತೆ ಸೆಣೆಸಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.

ಎ.ಆರ್‌.ಜಿ. ಪಿ.ಯು ಕಾಲೇಜಿನ ಪ್ರಾಂಶುಪಾಲ ಕೆ. ಬೊಮ್ಮಣ್ಣ ಉಪಸ್ಥಿತರಿದ್ದರು. ಉಮೇಶ್‌, ಪ್ರಿಯಾಂಕ ಪ್ರಾರ್ಥಿಸಿದರು.
ನಾಗರಾಜ್‌ ನಿರೂಪಿಸಿದರು. ಬಸವರಾಜ್‌ ಕಲಕಟ್ಟಿ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next