ಬೆಂಗಳೂರು: ಬಸವನಗುಡಿ ಠಾಣೆ ಪೊಲೀಸರು ಇತ್ತೀಚೆಗೆ ಭೇದಿಸಿದ್ದ ಮಾದಕ ವಸ್ತು ಜಾಲ ಪ್ರಕರಣದ ಆರೋಪಿಗಳು ಸಿನಿಮೀಯ ಶೈಲಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಅಲ್ಲದೆ, ಇಂಗ್ಲಿಷ್ ಡಿಕ್ಷನರಿ ಅಥವಾ ನಿಘಂಟುಗಳಂತಹ ದಪ್ಪ ಪುಸ್ತಗಳ ಒಳಭಾಗದಲ್ಲಿ ಡ್ರಗ್ಸ್‌ಗಳನ್ನು ಇಟ್ಟು ಮಾರುತ್ತಿರುವುದು ಪತ್ತೆಯಾಗಿದೆ. ಕೆಲ ದಿನಗಳ ಹಿಂದೆ ದಕ್ಷಿಣ ವಿಭಾಗದ ಪೊಲೀಸರು ಐವರು ವಿದೇಶಿ ಪ್ರಜೆಗಳನ್ನು ಬಂಧಿಸಿ 8 ಕೋಟಿ ರೂ. ಮೌಲ್ಯದ ಪಾರ್ಟಿ ಡ್ರಗ್ಸ್‌ಗಳನ್ನು ಜಪ್ತಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದಂಧೆ ಕೋರರ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರಿಸಿರುವ ಬಸವನಗುಡಿ ಪೊಲೀಸರಿಗೆ, ಏ.10 ಠಾಣೆ ವ್ಯಾಪ್ತಿಯಲ್ಲಿ ನೈಜಿರಿಯಾ ಪ್ರಜೆಯೊಬ್ಬ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.
ಈ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರು, ಆರೋಪಿಯನ್ನು ಹಿಡಿಯಲು ಮುಂದಾಗಿದ್ದಾರೆ. ಕೂಡಲೇ ಎಚ್ಚೆತ್ತ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ, ತಪ್ಪಿಸಿಕೊಳ್ಳುವ ಭರದಲ್ಲಿ ಕೈಯಲ್ಲಿದ್ದ ‘ದಿ ನ್ಯೂ ಇಂಗ್ಲಿಷ ಡಿಕ್ಷನರಿ’ ಬೀಳಿಸಿಕೊಂಡು ಹೋಗಿದ್ದಾನೆ. ಆರಂಭದಲ್ಲಿ ಇದೊಂದು ಡಿಕ್ಷನರಿ ಎಂದೇ ಪೊಲೀಸರು ಭಾವಿಸಿದ್ದರು. ಆದರೆ, ಅದು ವಿಚಿತ್ರವಾಗಿದ್ದರಿಂದ ತೆರೆದು ನೋಡಿದಾಗ ಪೊಲೀಸರೇ ನಿಬ್ಬೆರಗಾಗಿದ್ದಾರೆ.
ಆತನ ವಿರುದ್ಧ ಬಸವನಗುಡಿ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಡಿಕ್ಷನರಿಗೆ ಲಾಕರ್ ಜತೆಗೆ ಪಾಸ್‌ವರ್ಡ್ ಕೂಡ ಇತ್ತು! : ಸಾಮಾನ್ಯವಾಗಿ ಈ ಬುಕ್ ನೋಡಿದರೆ ಯಾವುದೋ ಇಂಗ್ಲಿಷ್ ಡಿಕ್ಷನರಿ ಎನ್ನುವಂತೆ ಕಾಣುತ್ತದೆ. ಆದರೆ, ಆ ಬುಕ್ ತೆರೆದಾಗ ದಂಧೆಕೋರನ ತಂತ್ರಜ್ಞಾನ ಬಯಲಾಗಿದೆ. ಬುಕ್ ಓಪನ್ ಮಾಡಿದಾಗ ಲಾಕರ್ ಇದೆ. ಅದಕ್ಕೆ ಪಾಸ್ ವರ್ಡ್ ಸಹ ಇಡಲಾಗಿದೆ. ಮಾರಾಟಕ್ಕಾಗಿ ಬಂದಿದ್ದ ಆರೋಪಿ ಭಯದಲ್ಲಿ ಪಾಸ್‌ವರ್ಡ್ ಹಾಕುವುದನ್ನು ಮರೆತು ಬಿಟ್ಟಿದ್ದಾನೆ. ಲಾಕರ್ ಓಪನ್ ಮಾಡಿದಾಗ ಅಂದಾಜು 10 ಲಕ್ಷ ರೂ. ಮೌಲ್ಯದ ಕಿಸ್ಟೆಲ್ಸ್, ಎಂಡಿಎಂಎ ಮಾತ್ರೆಗಳು ಹಾಗೂ ಕೊಕೇನ್ ಪತ್ತೆಯಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನೈಜೀರಿಯಾ ಮೂಲದ ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.