Advertisement

ರಾಜಾರೋಷವಾಗಿ ನಡೆಯುತ್ತಿದೆ ರಸ್ತೆ ಬದಿ ಹತ್ತಿ ಮಾರಾಟ

11:25 AM Nov 25, 2017 | Team Udayavani |

ಯಾದಗಿರಿ: ಜಿಎಸ್‌ಟಿ ನೋಂದಣಿಯಿಲ್ಲದೆ, ಎಪಿಎಂಸಿಯಿಂದ ಅಧಿಕೃತ ಪರವಾನಗಿ ಪಡೆಯದೇ ರಸ್ತೆ ಬದಿಯಲ್ಲಿ ಕಾನೂನು ಬಾಹಿರವಾಗಿ ರೈತರಿಂದ ಹತ್ತಿ ಖರೀದಿಸುವಂತ ಕೇಂದ್ರಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದರೂ, ರಸ್ತೆ ಬದಿಯಲ್ಲಿ ಹತ್ತಿ ಮಾರಾಟ ಸಾರಾಗವಾಗಿ ನಡೆಯುತ್ತಲೇ ಇದೆ. ರೈತರು ಹಾಗೂ ಹತ್ತಿ ಜಿನ್ನಿಂಗ್‌ ಕಾರ್ಖಾನೆ ಮಾಲೀಕರ ಜೊತೆ ಜಿಲ್ಲಾಧಿಕಾರಿಗಳು ಸುದೀರ್ಘ‌ ಸಭೆ ನಡೆಸಿ, ಹತ್ತಿಯನ್ನು ಜಿಲ್ಲೆಯಲ್ಲಿರುವ ಹತ್ತಿ ಜಿನ್ನಿಂಗ್‌ ಕಾರ್ಖಾನೆಗಳಲ್ಲಿ ಮಾರಾಟ ಮಾಡಿ ಸಕಾಲದಲ್ಲಿ ರೈತರು ಹಣ ಪಡೆಯಬೇಕು
ಎಂದು ಸೂಚಿಸಿದ್ದರು.

Advertisement

ಈಗಾಗಲೇ ರಸ್ತೆ ಬದಿ ಅನಧಿಕೃತವಾಗಿ ಹತ್ತಿ ಖರೀದಿಸುತ್ತಿದ್ದ ಎಂಟು ಕಡೆ ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡು 60 ಸಾವಿರ ರೂ. ಮೌಲ್ಯದ 450 ಕ್ವಿಂಟಾಲ್‌ ಹತ್ತಿ ವಶಪಡಿಸಿಕೊಳ್ಳಲಾಗಿದೆ. ಅನಧಿಕೃತ ಕೇಂದ್ರಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಸಿದ್ಧಯ್ಯ ಸ್ವಾಮಿ ತಿಳಿಸಿದ್ದಾರೆ.

ಯಾದಗಿರಿ, ಶಹಾಪುರ, ಸುರಪುರ ಸೇರಿದಂತೆ ಜಿಲ್ಲಾದ್ಯಂತ ಹತ್ತಿ ಬೆಳೆಯುತ್ತಿದ್ದರೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಪರಿಣಾಮ ರಾಯಚೂರಿಗೆ ತೆರಳಿ ಹತ್ತಿ ಮಾರಾಟ ಮಾಡಲಾಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಹತ್ತಿ ಬೆಳೆಯುವ ಕ್ಷೇತ್ರ ವಿಸ್ತಾರವಾಗುತ್ತಲೇ ಸಾಗಿದೆ. ಭತ್ತ, ತೊಗರಿ ಬದಲು ಹತ್ತಿ ಬೆಳೆಯಲಾಗುತ್ತಿದೆ. ಪ್ರತಿ ವರ್ಷವೂ ಹತ್ತಿ ಅಧಿಕ ಇಳುವರಿ ಬರುತ್ತಿದೆ. ಆದರೆ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಪರಿಣಾಮ ಸರಿಯಾದ ಬೆಲೆ ದೊರೆಯುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹತ್ತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಸುಲಭವಲ್ಲ. ದೊಡ್ಡ ಗೋದಾಮು ಬೇಕೆಬೇಕು. ಬೆಂಕಿಯಿಂದ ರಕ್ಷಣೆ ಸೇರಿದಂತೆ ದಾಸ್ತಾನಿಗೆ ಅವಶ್ಯ ಕ್ರಮ ಕೈಗೊಳ್ಳುವುದು ದುಬಾರಿ ಆಗುತ್ತದೆ. ಹೀಗಾಗಿ ಹತ್ತಿ ಬದಲು ಧಾನ್ಯಗಳ
ಖರೀದಿ ಮಾಡಲಾಗುತ್ತಿದೆ ಎಂದು ಎಪಿಎಂಸಿ ವರ್ತಕರು ತಿಳಿಸುತ್ತಾರೆ. ಜಿಲ್ಲೆಯ ಹತ್ತಿ ಖರೀದಿಗಾಗಿ ಪ್ರತ್ಯೇಕ ಮಾರುಕಟ್ಟೆ ಅವಶ್ಯಕತೆ ಇದೆ ಎಂದು ರೈತರು ಆಗ್ರಹಿಸಿದ್ದಾರೆ. 

Advertisement

ಅಕ್ರಮ ಖರೀದಿಗೆ ಕ್ರಮ ಖಚಿತ : ಶಹಾಪುರ ತಾಲೂಕಿನ ಆರ್‌.ಎಸ್‌. ಫೈಬರ್‌ ಕಾಟನ್‌ ಮಿಲ್‌ ಮದ್ದರಕಿಯಲ್ಲಿ ಭಾರತೀಯ ಹತ್ತಿ ನಿಗಮ ಹತ್ತಿ ಖರೀದಿ ಕೇಂದ್ರ ಸ್ಥಾಪಿಸಿದೆ. ಜತೆಗೆ ರೈತರು ಹತ್ತಿಯನ್ನು ಸಮೀಪದ ಜಿನ್ನಿಂಗ್‌ ಫ್ಯಾಕ್ಟರಿಗಳಲ್ಲಿಯೇ ಮಾರಾಟ ಮಾಡಬೇಕು. ರಸ್ತೆ ಬದಿಯಲ್ಲಿ ಹತ್ತಿ ಮಾರಾಟ ಮಾಡುವುದರಿಂದ ಲೋಪದೋಷ ಕಂಡು ಬರುತ್ತಿರುವುದು ಗಮನಕ್ಕೆ ಬಂದಿದೆ. ಅಲ್ಲಿ ಹತ್ತಿ ಮಾರಾಟ ಮಾಡಿ ರೈತರು ತೂಕದಲ್ಲಿ ಮೋಸ ಹೋಗಬಾರದು. ಜಿಎಸ್‌ಟಿ ನೋಂದಣಿ ಇಲ್ಲದೆ ಹಾಗೂ ಎಪಿಎಂಸಿಯಿಂದ ಅಧಿಕೃತ ಪರವಾನಿಗೆ ಪಡೆಯದೇ ರಸ್ತೆ ಬದಿಯಲ್ಲಿ
ಕಾನೂನು ಬಾಹಿರವಾಗಿ ರೈತರಿಂದ ಹತ್ತಿಯನ್ನು ಖರೀದಿಸುವಂತಹ ಕೇಂದ್ರಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಮಂಜುನಾಥ ಜೆ., ಜಿಲ್ಲಾಧಿಕಾರಿ

ಹತ್ತಿ ಮಾರಾಟಕ್ಕೆ ವ್ಯವಸ್ಥೆ ಇಲ್ಲದ ಪರಿಣಾಮ ಜಿಲ್ಲೆಯ ರೈತರು ಹತ್ತಿ ಮಾರಾಟಕ್ಕೆ ಸಂಕಷ್ಟ ಪಡುವಂತಾಗಿದೆ. ಕಳೆದ 10 ವರ್ಷಗಳಿಂದ ಹತ್ತಿ ಮಾರುಕಟ್ಟೆ ಸ್ಥಾಪಿಸುವಂತೆ ಹೋರಾಟ ನಡೆಸುತ್ತಿದ್ದರೂ ಇಲ್ಲಿಯವರೆಗೆ ಜನಪ್ರತಿನಿ ಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.
 ಮಲ್ಲಿಕಾರ್ಜುನ ಸತ್ಯಂಪೇಟೆ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ

ರಾಜೇಶ ಪಾಟೀಲ್‌ ಯಡ್ಡಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next