ಹಾಸನ: ಗೌರಿ-ಗಣೇಶ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಬಣ್ಣ – ಬಣ್ಣದ ಗಣೇಶ ಮೂರ್ತಿಗಳು ಈಗ ಮಾರುಕಟ್ಟೆಗೆ ಬಂದಿವೆ. ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಮತ್ತು ತೈಲ ವರ್ಣ( ಆಯಿಲ್ ಪೈಂಟ್) ಗಣೇಶ ಮೂರ್ತಿಗಳ ಬದಲು ಪರಿಸರಸ್ನೇಹಿ ಬಣ್ಣಗಳ ಗಣೇಶ ಮೂರ್ತಿ ಗಳನ್ನು ಪೂಜಿಸಿ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳು ಜಾಗೃತಿ ಮೂಡಿಸಿದರೂ ಅಲ್ಲಲ್ಲಿ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ಕದ್ದುಮುಚ್ಚಿ ನಡೆಯುವುದು ಮಾತ್ರ ನಿಂತಿಲ್ಲ.
ಜಾಗೃತಿ ಮೂಡಿಸಿದರೂ ಪರಿಸರಕ್ಕೆ ಮಾರಕವಾದ ನಿಷೇಧಿತ ವರ್ಣಗಳ ಗಣೇಶ ಮೂರ್ತಿಗಳ ಮಾರಾಟದ ಸುಳಿವು ಪಡೆದಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಪರಿಶೀಲನೆ ನಡೆಸುತ್ತಿದ್ದು ಪಿಒಪಿ ಮತ್ತು ತೈಲ ವರ್ಣದ ಗಣೇಶಮೂರ್ತೀಗಳ ಮಾರಾಟದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಜಲಚರಗಳಿಗೆ ಧಕ್ಕೆ: ಬಹುತೇಕ ವೃತಿಪರರು ಮಣ್ಣಿನ ಗಣೇಶಮೂರ್ತಿಗಳಿಗೆ ಜಲವರ್ಣ (ವಾಟರ್ ಪೈಂಟ್) ಮಾಡಿ ಮಾರಾಟ ಮಾಡುತ್ತಿದ್ದಾರೆ. ಇಂತಹ ಗಣೇಶ ಮೂರ್ತಿಗಳು ಮಾರಾಟವಾಗದೆ ಬಾಕಿ ಉಳಿದರೆ ಮುಂದಿನ ವರ್ಷದ ವೇಳೆಗೆ ಆ ಮೂರ್ತಿ ಗಳ ಬಣ್ಣ ಮಾಸುತ್ತವೆ. ಆದರೆ ಅಂತಹ ಮೂರ್ತಿ ಗಳಿಂದ ಪರಿಸರಕ್ಕೆ ಹಾನಿ ಇಲ್ಲ. ಆದರೆ ಆಕರ್ಷಕವಾಗಿ ಕಾಣಲೆಂದು ಗಣೇಶಮೂರ್ತಿಗಳಿಗೆ ತೈಲವರ್ಣ ಬಳಸಿದರೆ ಅದರಿಂದ ನೀರು ಕಲುಷಿತವಾಗಿ ಜಲಚರಗಳಿಗೆ ಧಕ್ಕೆಯಾಗುತ್ತದೆ. ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಪರಸರಸ್ನೇಹಿ ಸಂಘಟನೆಗಳು, ಹಿಂದೂ ಜನಜಾಗೃತಿ ಸಮಿತಿ ಜನ ಜಾಗೃತಿ ಮೂಡಿಸಿದ ಪರಿಣಾಮ ಮಾರುಕಟ್ಟೆಗಳಲ್ಲಿ ಈಗ ಬಹುಪಾಲು ಜಲವರ್ಣದ ಗಣೇಶ ಮೂರ್ತಿ ಗಳು ಕಾಣುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಅಲ್ಲಲ್ಲಿ ತೈಲ ವರ್ಣ ಹಾಗೂ ಪಿಒಪಿ ಗಣೇಶಮೂರ್ತಿ ಪ್ರತಿಷ್ಠಾಪನೆಯಾಗುತ್ತಿವೆ ಎಂದು ವೃತಿಪರ ಗಣೇಶ ಮೂರ್ತಿಗಳ ಮಾರಾಟಗಾರರಿಂದ ಸಾಮಾನ್ಯವಾಗಿ ಕೇಳಿಬರುತ್ತಿದೆ.
ಈ ಹಿನ್ನಲೆಯಲ್ಲಿ ಕಳೆದೊಂದು ವಾರದಿಂದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಗಳು ದೂರು ಬಂದ ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಇದುವರೆಗೂ ಪಿಒಪಿ ಗಣೇಶ ಮೂರ್ತಿಗಳ ಮಾರಾಟದ ಸುಳಿವು ಸಿಕ್ಕಿಲ್ಲ.
ಪಿಒಪಿ ಗಣೇಶಮೂರ್ತಿಗಳನ್ನೇಕೆ ಬಯಸುತ್ತಾರೆ?: ಗಣೇಶಮೂರ್ತಿಗಳ ವೃತ್ತಿಪರ ಮಾರಾಟಗಾರರು ಹೇಳುವುದೇನೆಂದರೆ, ಪಿಒಪಿ ಮೂರ್ತಿಗಳು ಗಣೇಶನ ವಿವಿಧ ಆಕೃತಿಗಳಲ್ಲಿ ಅಂದರೆ, ನಾಟ್ಯಭಂಗಿ, ಸೈನಿಕನ ಭಂಗಿ ಸೇರಿ ವಿವಿವಿಧ ರೂಪಗಳಲ್ಲಿ ಆಕರ್ಷಕವಾಗಿ ನಿರ್ಮಾಣವಾಗಿರುತ್ತವೆ. ಹಗುರವಾಗಿದ್ದು ಸಾಗಣೆ ಸುಲಭ. ಹೀಗಾಗಿ ಬೃಹತ್ ಗಾತ್ರದ, ವಿಭಿನ್ನ ರೂಪದ ಗಣಪತಿಗಳನ್ನು ಪ್ರತಿಷ್ಠಾಪಿಸಿದ್ದೇವೆ ಎಂಬ ಪ್ರತಿಷ್ಠೆ ಪ್ರದರ್ಶಿಸಲು ಗ್ರಾಮೀಣ ಜನರು ಪಿಒಪಿ ಮೂರ್ತಿ ಖರೀದಿಸುತ್ತಾರೆ. ನಗರ, ಪಟ್ಟಣ ಪ್ರದೇಶ ದಲ್ಲಿ ಪಿಒಪಿ ಗಣೇಶಮೂರ್ತಿ ಮಾರಾಟವಾಗದಿದ್ದರೂ ಬೆಂಗಳೂರು ಮತ್ತಿತರ ಕಡೆಗಳಿಂದ ಗುಟ್ಟಾಗಿ ತಂದು ಮಾರಾಟ ಮಾಡುವ ಜಾಲವೇ ಇದೆ ಎಂದು ಅಭಿಪ್ರಾಯಪಡುತ್ತಾರೆ.
ಅಧಿಕಾರಿಗಳು ಚುರುಕಾಗಬೇಕು: ನಗರಗಳಲ್ಲಿ ಪಿಒಪಿ ತೈಲವರ್ಣದ ಗಣೇಶಮೂರ್ತಿಗಳು ಮಾರಾಟವಾಗುವುದಿಲ್ಲ. ಆದರೆ, ಗ್ರಾಮೀಣ ಪ್ರದೇಶ ಗಳಲ್ಲಿ ಮಾರಾಟವಾಗುತ್ತವೆ. ಕೇಳಿದ ಸ್ಥಳಕ್ಕೆ ತಲು ಪಿಸುವ ಜಾಲವೇ ಇದೆ. ಅಧಿಕಾರಿಗಳು ಇನ್ನಷ್ಟು ಚುರುಕಾಗಿ ಪರಿಶೀಲನೆ ನಡೆಸಬೇಕು. ನಾವು ಪರಿಸರ ಸ್ನೇಹಿ ಬಣ್ಣ ಬಳಸಿ ನಿರ್ಮಿಸಿದ ಮೂರ್ತಿಗಳನ್ನು ಜನ ನೋಡಿ. ದರ ವಿಚಾರಿಸಿ ಹೋಗುತ್ತಾರೆ. ಕೊನೆಗೆ ತೈಲ ವರ್ಣದ ಆಕರ್ಷಕ ಮೂರ್ತಿ ಖರೀದಿಸುತ್ತಾರೆ. ನಿಷೇಧಿತ ವರ್ಣದ ಮೂರ್ತಿ ಮಾರಾಟ ಮಾಡು ವವರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ನಮಂತಹ ವೃತ್ತಿಪರರು ಉಳಿಯಲು ಸಾಧ್ಯ ಎನ್ನುತ್ತಾರೆ ಹಾಸನದ ಮಹಾವೀರ ಸರ್ಕಲ್ನಲ್ಲಿ ಗಣೇಶಮೂರ್ತಿ ಮಾರಾಟ ಮಾಡುತ್ತಿರುವ ಶಂಕರ್ ಅವರು.
● ಎನ್. ನಂಜುಂಡೇಗೌಡ