ಬೀದರ: ಜಿಲ್ಲೆಯ ರೈತರು ತಾವು ಬೆಳೆದ ಬೆಳೆಗಳನ್ನು ಯಾವುದೇ ಕಾರಣಕ್ಕೂ ಹೊರಗಡೆ ಮಾರಾಟ ಮಾಡದೆ, ಸರ್ಕಾರದಿಂದ ಪ್ರಾರಂಭಿಸಲಾಗುವ ಖರೀದಿ ಕೇಂದ್ರಗಳಲ್ಲಿಯೇ ಮಾರಾಟ ಮಾಡಿ ಉತ್ತಮ ಬೆಲೆ ಪಡೆಯಬೇಕು ಎಂದು ಸಂಸದ ಭಗವಂತ ಖೂಬಾ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರಸರ್ಕಾರವು ಅನೇಕ ಕ್ರಮ ಕೈಗೊಂಡಿದೆ. ಅದರಲ್ಲಿ ರೈತರ ಬೆಳೆಗೆ ಮಾರುಕಟ್ಟೆಯ ಕನಿಷ್ಟ ಬೆಂಬಲ ಬೆಲೆಯೂ ಒಂದಾಗಿದ್ದು, ಈ ಯೋಜನೆಯಡಿ ಜಿಲ್ಲೆಯ ಲಕ್ಷಾಂತರ ಜನರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಈಗಾಗಲೇ ಖರೀದಿ ಕೇಂದ್ರಗಳ ಪ್ರಾರಂಭಕ್ಕೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದ್ದು, ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕಾಗಿದೆ. ಆದಷ್ಟು ಬೇಗ ಖರೀದಿ ಕೇಂದ್ರಗಳ ಪ್ರಾರಂಭಿಸಲು ಅನುಮತಿ ನೀಡುವ ಕುರಿತು ಸಹಕಾರ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದ್ದಾರೆ.
………………………………………………………………………………………………………………………………………………..
ತುಂಡು ಗುತ್ತಿಗೆ ಸ್ಥಗಿತಕ್ಕೆ ಆಗ್ರಹ : ಬೀದರ: ಹದಿನೈದನೇ ಹಣಕಾಸು ಯೋಜನೆಯಡಿ ತುಂಡು ಗುತ್ತಿಗೆ ಪ್ರಕ್ರಿಯೆ ಸ್ಥಗಿತಗೊಳಿಸಿ ಟೆಂಡರ್ ಮೂಲಕವೇ ಕಾಮಗಾರಿ ಕೈಗೊಳ್ಳಬೇಕು ಎಂದು ಜಿಲ್ಲಾ ಎಸ್‌ಸಿ-ಎಸ್‌ಟಿ ಗುತ್ತಿಗೆದಾರರ ಸಂಘ ಆಗ್ರಹಿಸಿದೆ.ಜಿಲ್ಲಾಧ್ಯಕ್ಷ ರವೀಂದ್ರಕುಮಾರ ಹಾಸನಕರ್ ನೇತೃತ್ವದಲ್ಲಿ ಪ್ರಮುಖರ ನಿಯೋಗ ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
15ನೇ ಹಣಕಾಸು ಯೋಜನೆಯಡಿ ಜಿಪಂ ಹಾಗೂ ತಾಪಂಗೆ ಸುಮಾರು 10ರಿಂದ 15 ಕೋಟಿ ರೂ. ಅನುದಾನ ಬಂದಿರುವ ಮಾಹಿತಿ ಇದೆ. ತುಂಡು ಗುತ್ತಿಗೆ ಆದೇಶ ಸೆ.17ಕ್ಕೆ ಕೊನೆಗೊಂಡಿದ್ದು, ಹೊಸದಾಗಿ ತುಂಡು ಗುತ್ತಿಗೆ ನೀಡದಂತೆಯೂ ಆದೇಶಿಸಲಾಗಿದೆ ಎಂದು ಹೇಳಿದೆ. ಜಿಪಂನಲ್ಲಿ ಸೆ. 17ಕ್ಕೆ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಆದರೆ, ಅಂದಾಜು ಪಟ್ಟಿಗೆ ಈವರೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿಲ್ಲ. ಕಾರಣ, ಈ ಕಾಮಗಾರಿಗಳನ್ನು ನಿಯಮಾನುಸಾರ ಟೆಂಡರ್ ಮೂಲಕವೇ ಅನುಷ್ಠಾನಗೊಳಿಸಬೇಕು. 15ನೇ ಹಣಕಾಸು ಯೋಜನೆ ಕಾಮಗಾರಿಗಳಲ್ಲಿ ಶೇ. 24.10 ರಷ್ಟನ್ನು ವರ್ಗೀಕರಿಸಿ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರಿಗೆ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಕೆಲ ಅಧಿ ಕಾರಿಗಳು ಭ್ರಷ್ಟಾಚಾರ ನಡೆಸಲು ತರಾತುರಿಯಲ್ಲಿ ಹಿಂದಿನ ದಿನಾಂಕದಲ್ಲಿ ತುಂಡು ಗುತ್ತಿಗೆ ಒಪ್ಪಂದ ಮಾಡಿ ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರದ ಆದೇಶ ಪಾಲಿಸದಿದ್ದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ಹೋರಾಟವೂ ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ