ಮುಂಬಯಿ, ಜ. 30: ಎಡವಿದಾಗ ಕೈ ಹಿಡಿದು ತಪ್ಪಿದಾಗ ಬುದ್ಧಿವಾದದ ಮೂಲಕ ಎಚ್ಚರಿಸುವ ಹೃದಯ ಶ್ರೀಮಂತಿಕೆ ನಮ್ಮದಾಗಿರಲಿ. ಮನುಕುಲದ ಒಳಿತಿಗೆ ಸಂಘಟನೆಗಳು ಒಗ್ಗಟ್ಟಿನಿಂದ ದುಡಿದಾಗ ಅಹಿತಕರ ಘಟನೆಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ.
ಇದು ಆಡಳಿತದ ಪ್ರಮುಖ ಮತ್ತು ಅತ್ಯವಶ್ಯಕ ಅಂಶವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಅನೇಕ ಜನಪರ ಯೋಜನೆಯ ಮೂಲಕ ಬೆಳಕಿಗೆ ಬಾರದ ಅನೇಕ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸಿದೆ. ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸಮ್ಮಾನಿಸಿವೆ. ನಿಸ್ವಾರ್ಥ ಸೇವಾ ಮನೋಭಾವನೆ, ಸಾಮಾಜಿಕ ಚಿಂತನೆ ನಮ್ಮೆಲ್ಲರ ಮನದಾಳದ ಕರ್ತವ್ಯವಾಗಿದೆ ಎಂದು ನವತರುಣ ಮಿತ್ರ ಮಂಡಳಿ ಮತ್ತು ಭ್ರಾಮರಿ ಫ್ರೆಂಡ್ಸ್ ಮೀರಾ-ಭಾಯಂದರ್ ಇದರ ಅಧ್ಯಕ್ಷ ರವೀಂದ್ರ ಡಿ. ಶೆಟ್ಟಿ ಕೊಟ್ರಪಾಡಿಗುತ್ತು ತಿಳಿಸಿದರು.
ಜ. 26ರಂದು ಸಂಜೆ ಮೀರಾರೋಡ್ ಪೂರ್ವದ ಎಸ್. ಕೆ. ಸ್ಟೋನ್ ಸಮೀಪದ ಸೆಂಟ್ರಲ್ ಪಾರ್ಕ್ ಮೈದಾನದಲ್ಲಿ ನವತರುಣ ಮಿತ್ರ ಮಂಡಳಿ ಮತ್ತು ಭ್ರಾಮರಿ ಫ್ರೆಂಡ್ಸ್ ಮೀರಾ-ಭಾಯಂದರ್ ಇದರ 15ನೇ ವಾರ್ಷಿಕೋತ್ಸದ ಸಮರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅಭಿರುಚಿಗೆ ತಕ್ಕಂತೆ ಪಾಲಕರು ಪೂರಕ ವಾತಾವರಣ ಕಲ್ಪಿಸಬೇಕು. ಇಂತಹದೇ ಹುದ್ದೆಯಲ್ಲಿ ಮುಂದುವರಿಯುವ ಒತ್ತಡ ಹೇರುವುದು ಸರಿಯಲ್ಲ. ಎಲ್ಲ ಹುದ್ದೆಗಳಿಗೆ ಅದರದೇ ಆದ ಮಹತ್ವ ಇದೆ ಎಂದು ನುಡಿದು, ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಮಾಜಿ ಶಾಸಕ ನರೇಂದ್ರ ಮೆಹ್ತಾ ಶುಭ ಹಾರೈಸಿ ಮಾತನಾಡಿ, ಶೈಕ್ಷಣಿಕ, ವೈದ್ಯಕೀಯ ನೆರವುಗಳ ಮೂಲಕ ಕಳೆದ 15 ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಸಂಸ್ಥೆಯು ಅಧ್ಯಕ್ಷ ರವೀಂದ್ರ ಡಿ. ಶೆಟ್ಟಿ ಕೊಟ್ರಪಾಡಿಗುತ್ತು ಅವರ ನೇತ್ವತೃದಲ್ಲಿ ಸಾಧನೆಯ ಪಥದ ದಾಪುಗಾಲಿನಲ್ಲಿದೆ. ಸರ್ವರ ಕಿಂಚಿತ್ ಸಹಕಾರ ಕಾರ್ಯಕರ್ತರ ಆತ್ಮಸ್ಥೆರ್ಯ ವೃದ್ದಿಸುತ್ತದೆ. ಸ್ವಾರ್ಥವನ್ನು ಬಿಟ್ಟು ಸಂಘಟಿತರಾಗಿ ದೇಶದ ಅಭಿವೃದ್ದಿಯಲ್ಲಿ ಕೈಜೋಡಿಸಿ ಎಂದು ಹೇಳಿದ ಅವರು ಪರಿಸರ ಸ್ವಚ್ಚತೆಗೆ ಹೆಚ್ಚಿನ ಅಧ್ಯತೆ ನೀಡಬೇಕು ಎಂದು ವಿನಂತಿಸಿದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಶಶಿಧರ ಶೆಟ್ಟಿ ಇನ್ನಂಜೆ, ಮಹೇಶ್ ಶೆಟ್ಟಿ ಸುರತ್ಕಲ್, ಮಲ್ಲಿಕಾ ಯಶವಂತ ಶೆಟ್ಟಿ, ಸ್ನೇಹಾ ಸುನೀಲ್ ಶೆಟ್ಟಿ ಮತ್ತು ಮುಗ್ಧಾ ಸುನೀಲ್ ಶೆಟ್ಟಿ ಅವರನ್ನು ವೇದಿಕೆಯ ಗಣ್ಯರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಅಭಿನಂದಿಸಿದರು.
ವೇದಿಕೆಯಲ್ಲಿ ಬಂಟರ ಸಂಘ ಮೂಲ್ಕಿ ಇದರ ಕಾರ್ಯಧ್ಯಕ್ಷ ಸಂತೋಷ್ ಹೆಗ್ಡೆ ಎಳತ್ತೂರು, ಸೈಂಟ್ ಏಂಜಲ್ಸ್ ಇಂಗ್ಲೀಷ್ ಹೈಸ್ಕೂಲ್ ಭಾಯಂದರ್ ಇದರ ಕಾರ್ಯಾಧ್ಯಕ್ಷ ಡಾ| ಅರುಣೋದಯ ರೈ, ಬಂಟ್ಸ್ ಫೋರಂ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಇನ್ನ, ಬಂಟರ ಸಂಘ ಮುಂಬಯಿ ಇದರ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಕೋಶಾಧಿಕಾರಿ ಉದಯ ಶೆಟ್ಟಿ ಪೆಲತ್ತೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಮಿತಾ ಕಿಶೋರ್ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮೀರಾರೋಡ್ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಎನ್. ಪಿ. ಕೋಟ್ಯಾನ್, ಡಾ| ಕೃಷ್ಣ ಕುಮಾರ್ ಶೆಟ್ಟಿ, ಶರತ್ ಶೆಟ್ಟಿ ಕಿನ್ನಿಗೋಳಿ ಮೊದಲಾದವರು ಉಪಸ್ಥಿತರಿದ್ದರು.
ಗೌರವ ಅಧ್ಯಕ್ಷ ರಾಜೇಶ್ ಶೆಟ್ಟಿ ತೆಳ್ಳಾರ್, ಉಪಾಧ್ಯಕ್ಷರಾದ ಯೋಗೇಂದ್ರ ಗಾಣಿಗ, ಜಗದೀಶ್ ಶೆಟ್ಟಿ ಪಂಜಿನಡ್ಕ, ರವೀಂದ್ರ ಶೆಟ್ಟಿ ದೇರಳ ಕಟ್ಟೆ, ದಿನೇಶ್ ಶೆಟ್ಟಿ ಕೊಡವೂರು, ಸುರೇಶ್ ಪೂಜಾರಿ ನಿಡ್ಡೋಡಿ, ಕೋಶಾಧಿಕಾರಿ ರವಿ ಪುತ್ರನ್ ಬೈಕಾಡಿ, ಜತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ, ಜತೆ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಜತೆ ಕೋಶಾಧಿಕಾರಿ ಬಾಲಕೃಷ್ಣ ಶೆಟ್ಟಿ, ಸಾಂಸ್ಕೃತಿಕಸಮಿತಿಯ ಹರೀಶ್ ಸಾಲ್ಯಾನ್, ಸದಾನಂದ ಸಾಲ್ಯಾನ್, ಗುಣಕಾಂತ್ ಶೆಟ್ಟಿ ಕರ್ಜೆ, ರಾಜೇಶ್ ಶೆಟ್ಟಿ ಕಾಪು ಕಲ್ಯಾ, ಅರವಿಂದ ಶೆಟ್ಟಿ ಪಣಿಯೂರು ಮೊದಲಾದವರು ಗಣ್ಯರನ್ನು ಗೌರವಿಸಿದರು. ಕಾರ್ಯದರ್ಶಿ ಜಿ. ಕೆ. ಕೆಂಚನಕೆರೆ ವಂದಿಸಿದರು. ಚಲನಚಿತ್ರ ಮತ್ತು ರಂಗಭೂಮಿ ಕಲಾವಿದ ಬಾಬಾ ಪ್ರಸಾದ್ ಅರಸ ಕುತ್ಯಾರ್ ಕಾರ್ಯಕ್ರಮ ನಿರ್ವಹಿಸಿದರು.
ಚಿತ್ರ-ವರದಿ: ರಮೇಶ ಅಮೀನ್