ಹಾವೇರಿ: ಅಂಗನವಾಡಿ ಕಾರ್ಯಕರ್ತೆಯರು ಇನ್ನು ಮುಂದೆ ಅಂಗನವಾಡಿ ಕೇಂದ್ರಗಳಿಗೆ ಯಾವಾಗ ಬೇಕಾದರೂ ಹೋಗುವಂತಿಲ್ಲ. ಅನಧಿಕೃತವಾಗಿ ಗೈರಾಗುವಂತಿಲ್ಲ. ಹೌದು. ಅಂಗನವಾಡಿಗೆ ಸರಿಯಾದ ಸಮಯಕ್ಕೆ ಹೋಗದೆ ಇರುವುದು, ಹಾಗೂ ಅನಧಿಕೃತ ಗೈರಾಗುವುದನ್ನು ತಪ್ಪಿಸಲು ಹಾವೇರಿ ಜಿಲ್ಲಾ ಪಂಚಾಯಿತಿ “ಸೆಲ್ಪಿ ವಿತ್ ಅಂಗನವಾಡಿ’ ಎಂಬ ವಿನೂತನ ಕಾರ್ಯಕ್ರಮ ಅನುಷ್ಠಾನಕ್ಕೆ ಮುಂದಾಗಿದೆ.
ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಮೇಶ ದೇಸಾಯಿ ಈ ಹೊಸ ಕಾರ್ಯಕ್ರಮ ಜಾರಿಗೆ ತರಲು ಸೋಮವಾರ ಆದೇಶಿಸಿದ್ದು, ಇದರ ಪ್ರಕಾರ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಮೊಬೈಲ್‌ನಲ್ಲಿ ಜಿಪಿಎಸ್ ಆಧಾರಿತ ಕ್ಯಾಮೆರಾ ಇರುವ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಪ್ರತಿ ದಿನ ತಮ್ಮ ಅಂಗನವಾಡಿ ಕೇಂದ್ರದಲ್ಲಿ ನಿಂತು ತಮ್ಮ ಸೆಲ್ಪಿ ಫೋಟೋಗಳನ್ನು ತೆಗೆದು ತಾಲೂಕು ಮಟ್ಟದ ಶಿಶು ಅಭಿವೃದ್ಧಿ ಅಧಿಕಾರಿಗಳ ವಾಟ್ಸ್ ಆ್ಯಪ್ ಗ್ರೂಪ್‌ಗೆ ಕಳುಹಿಸುವ ಮೂಲಕ ಹಾಜರಾತಿ ಖಚಿತ ಪಡಿಸಬೇಕಿದೆ.
ಜಿಪಿಎಸ್ ಆಧಾರಿತ ಕ್ಯಾಮೆರಾದಲ್ಲಿ ಸೆಲ್ಪಿ ತೆಗೆದುಕೊಳ್ಳುವುದರಿಂದ ಪೋಟೋ ತೆಗೆದ ಸ್ಥಳ ಹಾಗೂ ಸಮಯವನ್ನು ಹಿರಿಯ ಅಧಿಕಾರಿಗಳು ನಿಖರವಾಗಿ ತಿಳಿಯಬಹುದಾಗಿದೆ. ಸೆಲ್ಪಿ ಫೋಟೋಗಳನ್ನು ತಾಲೂಕು ಮಟ್ಟದ ಶಿಶು ಅಭಿವೃದ್ಧಿ ಅಧಿಕಾರಿಗಳು ಹಾಗೂ ಮೇಲ್ವಿಚಾರಕರು ಕಡ್ಡಾಯವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲು ಜಿಪಂ ಸಿಇಒ ಸೂಚಿಸಿದ್ದಾರೆ.
ಹೇಗೆ ಬಂತು ಐಡಿಯಾ: ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಗ್ರಾಪಂ ಕಚೇರಿಗಳಿಗೆ ಭೇಟಿ ನೀಡದೆ ಇರುವುದು, ಅನಧಿಕೃತವಾಗಿ ಗೈರಾಗುವ ಬಗ್ಗೆ ಜಿಲ್ಲೆಯಲ್ಲಿ ವ್ಯಾಪಕ ದೂರುಗಳು ಕೇಳಿ ಬಂದಿದ್ದವು. ಆಗ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿಯವರು “ಸೆಲ್ಪಿ ವಿತ್ ಪಂಚಾಯಿತಿ’ ಎಂಬ ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದರು. ಆಗ ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಪ್ರತಿದಿನ ಗ್ರಾಪಂ ಕಚೇರಿಗೆ ಹೋಗಿ ಜಿಪಿಎಸ್ ಆಧಾರಿತ ಕ್ಯಾಮೆರಾದಲ್ಲಿ ಗ್ರಾಪಂನಲ್ಲಿ ಸೆಲ್ಪಿ ತೆಗೆದು ಮೇಲಧಿಕಾರಿಗಳಿಗೆ ಕಳುಹಿಸುವ ಮೂಲಕ ಹಾಜರಾತಿ ಖಚಿತಪಡಿಸುತ್ತಿದ್ದಾರೆ.ಇದರಿಂದ ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಅಂಗನವಾಡಿ ಕಾರ್ಯಕರ್ತೆಯರಿಗೂ ವಿಸ್ತರಿಸಲು ಜಿಪಂ ನಿರ್ಧರಿಸಿದೆ.
ತರಬೇತಿ-ತಿಳಿವಳಿಕೆ: ಅಂಗನವಾಡಿ ಕಾರ್ಯಕರ್ತೆಯರು ಈಗಾಗಲೇ ಮೊಬೈಲ್ ಹೊಂದಿ “ಸ್ನೇಹಾ’ ಆ್ಯಪ್ ಮೂಲಕ ಕೇಂದ್ರದ ಆಹಾರಧಾನ್ಯ, ಚಟುವಟಿಕೆ ಸೇರಿದಂತೆ ಇತರ ನಿರ್ವಹಣೆಯ ಮಾಹಿತಿಯನ್ನು ತಮ್ಮ ಮೇಲ್ವಿಚಾರಕರಿಗೆ, ಮೇಲಧಿಕಾರಿಗಳಿಗೆ ಕಳುಹಿಸುತ್ತಿದ್ದಾರೆ. ಹೀಗಾಗಿ ಈಗ ಮೊಬೈಲ್‌ನಲ್ಲಿ ಜಿಪಿಎಸ್ ಆಧಾರಿತ ಕ್ಯಾಮೆರಾ ಡೌನ್‌ಲೋಡ್ ಮಾಡಿಕೊಂಡು ಸೆಲ್ಪಿ ಕಳುಹಿಸುವ ವ್ಯವಸ್ಥೆ ರೂಢಿಸುವುದು ಕಷ್ಟ ಎನಿಸದು ಎಂಬುದು ಜಿಪಂ ಆಲೋಚನೆ. ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಹಾಗೂ ಸೆಲ್ಪಿ ತೆಗೆದು ಕಳುಹಿಸುವ ಬಗ್ಗೆ ಅಂಗನವಾಡಿ ಮೇಲ್ವಿಚಾಕರ ಮೂಲಕ ಕಾರ್ಯಕರ್ತೆಯರಿಗೆ ತರಬೇತಿ ನೀಡಲು ಸಹ ಜಿಪಂ ನಿರ್ಧರಿಸಿದೆ. ಒಟ್ಟಾರೆ ಅಂಗನವಾಡಿ ಕೇಂದ್ರಗಳಿಗೆ ನಿತ್ಯ ಸರಿಯಾದ ಸಮಯಕ್ಕೆ ಹೋಗದ ಕಾರ್ಯಕರ್ತೆಯರಿಗೆ ಈ ನಿಯಮ ಪಾಲನೆ ಕಠಿಣ ಎನಿಸಿದೆಯಾದರೂ ಪಾಲನೆ ಅನಿವಾರ್ಯ.
ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸರಿಯಾದ ಸಮಯಕ್ಕೆ ಹಾಜರಾಗದೆ ಕರ್ತವ್ಯ ನಿರ್ವಹಿಸದಿರುವ ಬಗ್ಗೆ, ಅನಧಿಕೃತ ಗೈರು ಹಾಗೂ ಸರಿಯಾದ ಸಮಯಕ್ಕೆ ಕೇಂದ್ರಕ್ಕೆ ಬಾರದೆ ಇರುವ ಬಗ್ಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಸೆಲ್ಪಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೆಲ್ಪಿ ಕಳುಹಿಸುವ ಬಗ್ಗೆ ತಾಂತ್ರಿಕ ತರಬೇತಿ ನೀಡಿ ಒಂದುವಾರದೊಳಗೆ ಇದನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗುವುದು. –
ರಮೇಶ ದೇಸಾಯಿ, ಸಿಇಒ, ಜಿಪಂ
-ಎಚ್.ಕೆ. ನಟರಾಜ