Advertisement
“ಸಾರಥಿ’ ಬಳಿಕ “ಬುಲ್ ಬುಲ್’ ಮತ್ತು “ಮದುವೆಯ ಮಮತೆಯ ಕರೆಯೋಲೆ’ ಚಿತ್ರ ನಿರ್ಮಿಸಿದರು. ಆ ಬಳಿಕ “ಚಕ್ರವರ್ತಿ’ ಚಿತ್ರದಲ್ಲಿ ನಟಿಸಿದರು. ಅದರೊಂದಿಗೆ ವಿತರಣೆ ಮಾಡುವ ಮೂಲಕ ಬಿಜಿಯಾಗಿದ್ದರು. ಇದೇ ಸಮಯದಲ್ಲಿ ಅವರ ಪತ್ನಿ ಮಾನಸ ಕಥೆ ಇಷ್ಟವಾಗಿ, ಅದನ್ನು ತೆರೆಯ ಮೇಲೆ ತಂದಿದ್ದಾರೆ. ಈ ಕುರಿತು ಮಾತನಾಡುವ ಅವರು, “ನನ್ನ ಮೊದಲ ಚಿತ್ರ “ಜೊತೆ ಜೊತೆಯಲಿ’ ಲವ್‌ಸ್ಟೋರಿ ಆಗಿತ್ತು.
Related Articles
Advertisement
“ಪ್ರಜ್ವಲ್ ಅವರ “ಸಿಕ್ಸರ್’ ನೋಡಿದಾಗಿನಿಂದಲೂ ಅವನ ಜೊತೆ ಚಿತ್ರ ಮಾಡಬೇಕು ಎಂಬ ಯೋಚನೆ ಇತ್ತು. ಅದು ಈಗ ಈಡೇರಿದೆ. ಇನ್ನು, ಪ್ರೇಮ್ ಜೊತೆ “ಜೊತೆ ಜೊತೆಯಲಿ’ ಮಾಡಿದ ನಂತರ ಇಬ್ಬರೂ ಒಂದು ಸಿನಿಮಾ ಮಾಡಬೇಕು ಅಂತ ಮಾತಾಡಿದ್ದೆವು. ಆಗಿರಲಿಲ್ಲ. ಹರಿಪ್ರಿಯಾ ಒಳ್ಳೇ ಕಲಾವಿದೆ ಅನ್ನೋದು ಅವರ ಹಿಂದಿನ “ಉಗ್ರಂ’, “ನೀರ್‌ದೋಸೆ’ ನೋಡಿ ಗೊತ್ತಾಯ್ತು. ಆ ಹುಡುಗಿಯಲ್ಲಿ ಮೆಚೂರಿಟಿ ಇದೆ.
ಮೂವರು ಪಾತ್ರಕ್ಕೆ ಸರಿಯಾದ ಆಯ್ಕೆ ಎನಿಸಿ ಸಿನಿಮಾ ಮಾಡಿದೆ. ಮೊದಲು ನಾನು ಹೊಸಬರ ಜೊತೆ ಮಾಡಬೇಕು ಅಂದುಕೊಂಡಿದ್ದೆ. ಆದರೆ, ನಿರ್ಮಾಪಕ ಸಮೃದ್ಧಿ ಮಂಜುನಾಥ್ ಅವರು, ಮೊದಲ ಚಿತ್ರ, ಸ್ಟಾರ್ ಇದ್ದರೆ ಚೆನ್ನಾಗಿರುತ್ತೆ ಅಂದರು. ಒಂದೇ ದಿನದಲ್ಲಿ ಈ ಮೂವರು ಫಿಕ್ಸ್ ಆಗಿಬಿಟ್ಟರು. ಒಟ್ಟು 55 ದಿನಗಳ ಕಾಲ ಗೋವಾ, ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣವಾಗಿದೆ’ ಎಂದು ಮಾಹಿತಿ ಕೊಡುತ್ತಾರೆ ದಿನಕರ್.
“ಮದುವೆ ಆಗಿ ಇಷ್ಟು ವರ್ಷ ಆಯ್ತು, ಏಳೆಂಟು ಸಲ ಜಗಳ ಆಡಿರಬಹುದಷ್ಟೇ. ಆದರೆ, ಈ ಸಿನಿಮಾ ಮಾಡುವಾಗ, ಸುಮಾರು 150 ಸಲ ಜಗಳ ಆಡಿದ್ದೇನೆ. ಕಾರಣ, ಕಥೆಗಾಗಿ. ಕಥೆ ಹೀಗೆ ಇರಬೇಕು, ಹೀಗೇ ಬರಬೇಕು ಎಂಬ ಆದೇಶ ಅವರದು. ನಾನು ನಿರ್ದೇಶಕ, ನನಗೂ ಗೊತ್ತಿದೆ, ಮಾಡಿ ತೋರಿಸ್ತೀನಿ ಅಂತ ಜಗಳ ಆಡಿದ್ದುಂಟು. ಪ್ರತಿ ಪಾತ್ರವನ್ನೂ ಡೀಟೆಲ್ ಆಗಿ ಡಿಸೈನ್ ಮಾಡಿದ್ದರು.
ಅದು ಇಷ್ಟ ಆಯ್ತು. ಎಡಿಟ್ ಮಾಡಿ ಸಿನಿಮಾ ತೋರಿಸಿದಾಗ ಮಾನಸ ಖುಷಿಯಾದರು. ಒಳ್ಳೆಯ ತಂಡ ಜೊತೆ ಚಿತ್ರ ಮಾಡಿದ್ದಕ್ಕೆ ನನಗೂ ಹೆಮ್ಮೆ ಇದೆ ಎಂಬುದು ದಿನಕರ್ ಮಾತು. ಈ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡಿದರೆ, ನಿರಂಜನ್‌ಬಾಬು ಛಾಯಾಗ್ರಹಣ ಮಾಡಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನವಿದೆ.