ಕುಂಬಳೆ : ತಲಪಾಡಿ-ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಹೊಂಡ ಗುಂಡಿಗಳಿಂದ ದಿನದಿಂದ ದಿನಕ್ಕೆ ಕೆಟ್ಟು ಹೋಗುತ್ತಿರುವುದನ್ನು ಸಹಿಸದ ಪ್ರಯಾಣಿಕರು ಇದೀಗ ಬೀದಿಗಿಳಿದು ಪ್ರತಿಭಟಿಸಲು ಮುಂದಾಗಿದ್ದಾರೆ. ರಾಜ್ಯ ಸರಕಾರದ ಆಡಳಿತ ಮತ್ತು ವಿಪಕ್ಷಗಳು, ಚುನಾಯಿತ ಜನಪ್ರತಿನಿಧಿಗಳು, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ರಸ್ತೆ ದುರವಸ್ಥೆಯನ್ನು ಕಡೆಗಣಿಸಿರುವುದಾಗಿ ಆರೋಪಿಸಿದ ಸಾರ್ವಜನಿಕರು ರಸ್ತೆ ಕ್ರಿಯಾ ಸಮಿತಿ ಸಂಘಟನೆಯ ಮೂಲಕ ಮೊಗ್ರಾಲ್ ಬಳಿಯ ಕೊಪ್ಪರ ಬಜಾರಿನಲ್ಲಿ ರಸ್ತೆಯಲ್ಲಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.
ಇದು ಕೇವಲ ಸೂಚನೆ ಮಾತ್ರವಾಗಿದ್ದು ನ. 8ರಂದು ಬೆಳಗ್ಗೆ 10 ರಿಂದ ಮೊಗ್ರಾಲಿನಲ್ಲಿ ಹೆದ್ದಾರಿಯಲ್ಲಿ ವಾಹನಗಳನ್ನು ಪಾರ್ಕ್ ಮಾಡಿ ಪ್ರತಿಭಟನೆ ನಡೆಸುವುದಾಗಿ ರಸ್ತೆ ಕ್ರಿಯಾ ಸಮಿತಿ ಎಚ್ಚರಿಸಿತು.
ಪ್ರತಿಭಟನೆ ಕಾರ್ಯಕ್ರಮದಲ್ಲಿ ರಸ್ತೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ.ಇಕ್ಬಾಲ್, ಪದಾಧಿಕಾರಿಗಳಾದ ಅಬ್ದುಲ್ ಲತೀಫ್ ಕುಂಬಳೆ,ಮಾಹಿನ್ ಕುನ್ನಿಲ್, ಮೂಸಾ ಮೊಗ್ರಾಲ್, ಮುಹಮ್ಮದ್ ಸ್ಮಾರ್ಟ್, ಉಮ್ಮರ್ ಪಡಲಡ್ಕ,ಅಶ್ರಫ್ ಬಾಯಾರ್,ರಾಮಕೃಷ್ಣ ಕುಂಬಳೆ,ಮಹಮ್ಮದ್ ಕೈಕಂಬ,ಹಬೀಬ್ ಕೋಟ, ಮಹಮ್ಮದ್ ಸೀಗಂದಡಿ, ಹಮೀದ್ ಕಾವಿಲ್, ಬಿ.ಎ. ಮಹಮ್ಮದ್ ಕುಂಞಿ, ಸಿದ್ಧಿಖ್ ರಹಿಮಾನ್, ರಿಯಾಸ್ ಮೊಗ್ರಾಲ್, ವಿಜಯ ಕುಮಾರ್, ಮನ್ಸೂರ್, ಅಫಲ್, ಅನ್ಸಾರ್, ಇಸ್ಮಾಯಿಲ್ ಮೂಸಾ, ಎಲ್. ಟಿ. ಮನಾಫ್, ಅನ್ವರ್ ಮೊಗ್ರಾಲ್, ಅಬ್ದುಲ್ಲ ಮೊಗ್ರಾಲ್, ಬಶೀರ್ ಕುಂಬಳೆ, ಆರೀಫ್, ಇಬ್ರಾಹಿಂ ಕೊಡ್ಯಮ್ಮೆ ಮತ್ತು ಮಮ್ಮುಟ್ಟಿ ಪ್ರತಿಭಟನೆಗೆ ನೇತೃತ್ವ ನೀಡಿದರು.
ರಸ್ತೆಯಿಂದ ಜಾಲತಾಣಕ್ಕೆ
ಹೆದ್ದಾರಿಯಲ್ಲಿ ಸೃಷ್ಟಿಯಾದ ಹೊಂಡಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಸೆಲ್ಫಿ ಮೂಲಕ ಚಿತ್ರೀಕರಿಸಿ ಸಾರ್ವಜನಿಕರಿಗೆ ಇದನ್ನು ಜಾಲತಾಣದ ಮೂಲಕ ರವಾನಿಸಲಾಯಿತು. ಸ್ಥಳೀಯ ವಾಹನ ಚಾಲಕರು ತಮ್ಮ ವಾಹನಗಳಿಗೆ ಪ್ರತಿಭಟನೆಯ ಪೋಸ್ಟರ್ ಹಚ್ಚಿ, ಹೆಲ್ಮೆಟ್ ಧರಿಸಿ, ಪ್ಲಕಾರ್ಡ್ ಪ್ರದರ್ಶಿಸಿ, ಸಂಭಾವ್ಯ ರಸ್ತೆ ಅಪಘಾತದಿಂದ ಗಾಯಗೊಂಡು ರಕ್ತ ಹರಿಯುವ ಏಕಪಾತ್ರಾಭಿನಯವನ್ನು ರಸ್ತೆಯಲ್ಲಿ ಪ್ರದರ್ಶಿಸಿ ರಸ್ತೆ ಪ್ರಯಾಣಿಕರ ಗಮನ ಸೆಳೆದರು.