Advertisement

Independence Day:ಸೆಲ್ಫಿ ಪಾಯಿಂಟ್‌,1,800 ಸ್ಪೆಷಲ್‌ ಗೆಸ್ಟ್‌-ಸ್ವಾತಂತ್ರ್ಯ ದಿನದ ವಿಶೇಷ

09:43 AM Aug 14, 2023 | Pranav MS |

ನವದೆಹಲಿ: 1, 800 ವಿಶೇಷ ಅತಿಥಿಗಳು, 12 ಸೆಲ್ಫಿ ಪಾಯಿಂಟ್‌ಗಳು, ಅವರಿಗೆ ವಿಶೇಷ ಬಹುಮಾನ… 77ನೇ ಸ್ವಾತಂತ್ರ್ಯ ದಿನದ ವಿಶೇಷತೆಗಳು. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈಗ 77ನೇ ಸ್ವಾತಂತ್ರ್ಯ ದಿನದ ಸಿದ್ಧತೆಯ ಸಂಭ್ರಮ. ಆ.15ರಂದು ಪ್ರಧಾನಿ ನರೇಂದ್ರ ಮೋದಿಯವರು ಐತಿಹಾಸಿಕ ಕೆಂಪು ಕೋಟೆಯಿಂದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಲಿದ್ದಾರೆ.

Advertisement

ಬ್ರಿಟೀಷರ ದಾಸ್ಯ ಶೃಂಖಲೆಯಿಂದ ಮುಕ್ತಗೊಂಡ ಸಂಭ್ರಮದ ದಿನದಲ್ಲಿ ದೇಶದ ಸಾಮಾನ್ಯ ಜನರೂ ಭಾಗವಹಿಸುವಂತಾಗಲು ಕೇಂದ್ರ ಸರ್ಕಾರ “ಜನ ಭಾಗೀದಾರಿ’ ಎಂಬ ಶೀರ್ಷಿಕೆಯಡಿ 1,800 ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ 17 ಸಾವಿರ ಇ- ಆಹ್ವಾನ ಪತ್ರಿಕೆಯನ್ನು ಸಿದ್ಧಪಡಿಸಲಾಗಿದೆ.

ಯಾರೆಲ್ಲ ಭಾಗಿ?
660 ವೈಬ್ರಂಟ್‌ ವಿಲೇಜ್‌ನ 400 ಪಂಚಾಯಿತಿ ಅಧ್ಯಕ್ಷರು,
250 ರೈತ ಉತ್ಪಾದನಾ ಸಂಘಟನೆಯ ಫ‌ಲಾನುಭವಿಗಳು
ತಲಾ 50 ಫ‌ಲಾನುಭವಿಗಳು ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ಮತ್ತು ಪ್ರಧಾನಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆ
50 ಮಂದಿ- ಸೆಂಟ್ರಲ್‌ ವಿಸ್ತಾ ಯೋಜನೆಯಲ್ಲಿ ದುಡಿದ ಕಾರ್ಮಿಕರು
ತಲಾ 50 ಮಂದಿ- ಖಾದಿ ಕೆಲಸಗಾರರು, ಗಡಿ ಪ್ರದೇಶಗಳ ರಸ್ತೆ ಯೋಜನೆಗಳಲ್ಲಿ ಕೆಲಸ ಮಾಡಿದವರು, ಅಮೃತ ಸರೋವರ ಮತ್ತು ಹರ್‌ ಘರ್‌ ಜಲ ಯೋಜನೆ

12 ಸೆಲ್ಫಿ ಪಾಯಿಂಟ್‌ಗಳು
ರಾಷ್ಟ್ರ ರಾಜಧಾನಿಯ ವಿವಿಧ ಪ್ರದೇಶಗಳಲ್ಲಿ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ ಕೇಂದ್ರ ಸರ್ಕಾರದ ವಿಶೇಷ ಯೋಜನೆಗಳ ವಿವರಗಳನ್ನು ಹಾಕಲಾಗಿದೆ. ಆ.15ರಿಂದ 20ರ ನಡುವೆ ಈ ಕೇಂದ್ರಗಳಲ್ಲಿ ಸೆಲ್ಫಿ ತೆಗೆದುಕೊಂಡು ಮೈಗವ್‌ ಡಾಟ್‌ ಇನ್‌ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಬೇಕು. ಕೇಂದ್ರ ರಕ್ಷಣಾ ಸಚಿವಾಲಯದ ವತಿಯಿಂದ ಈ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ಜಯ ಗಳಿಸಿದ 12 ಮಂದಿಗೆ 10 ಸಾವಿರ ರೂ. ಬಹುಮಾನ ನೀಡಲಾಗುತ್ತದೆ.

ಚಟ್ನಿ ಮಾಡಿ ಕಳುಹಿಸಿದ ಮಹಿಳೆಗೆ ಆಹ್ವಾನ
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ 1,700 ಫ‌ಲಾನುಭವಿಗಳಿಗೆ ಸ್ವಾತಂತ್ರ್ಯ ದಿನದಲ್ಲಿ ಭಾಗವಹಿಸುವಂತೆ ಆಹ್ವಾನ ರವಾನೆಯಾಗಿದೆ. ಈ ಪೈಕಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಚಟ್ನಿ ಸಿದ್ಧಪಡಿಸಿ ಕಳುಹಿಸಿಕೊಟ್ಟಿದ್ದ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಭರತ್‌ ಸಿಂಗ್‌ ರುಟೆಲಾ ಎಂಬುವರ ಪತ್ನಿ ಸುನೀತಾ ರುಟೇಲಾ ಅವರಿಗೆ ಆಹ್ವಾನ ಲಭಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು “ಗ್ರಾ.ಪಂ. ಅಧ್ಯಕ್ಷರಿಗೆ ಈ ಬಗ್ಗೆ ಪತ್ರ ಲಭಿಸಿತ್ತು. ಅದರಲ್ಲಿ ಪ್ರಧಾನಿಯವರಿಗೆ ನಾನು ನೀಡಿದ್ದ ಚಟ್ನಿಯ ಬಗ್ಗೆಯೂ ಪತ್ರದಲ್ಲಿ ಬರೆದಿದ್ದಾರೆ. ಸ್ವಾತಂತ್ರ್ಯ ದಿನಕ್ಕೆ ರಾಷ್ಟ್ರ ರಾಜಧಾನಿಗೆ ತೆರಳುವ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದೆ’ ಎಂದು ಅವರು ಹೇಳಿದ್ದಾರೆ. ಸುಶೀಲಾ ರೈತ ಉತ್ಪಾದನಾ ಸಂಘಟನೆಯ ಫ‌ಲಾನುಭವಿಯೂ ಆಗಿದ್ದಾರೆ.

Advertisement

ದೇಶಿಯ ಗನ್‌ಗಳಿಂದಲೇ ಸೆಲ್ಯೂಟ್‌
ಪ್ರಸಕ್ತ ಸಾಲಿನ ಸ್ವಾತಂತ್ರ್ಯ ದಿನದಂದು 21 ಗನ್‌ಗಳಿಂದ ಸೆಲ್ಯೂಟ್‌ ನೀಡುವ ನಿಟ್ಟಿನಲ್ಲಿ ದೇಶಿಯವಾಗಿ ನಿರ್ಮಿಸಿದ 105 ಎಂಎಂ ಇಂಡಿಯನ್‌ ಫೀಲ್ಡ್‌ ಗನ್‌ಗಳನ್ನು ಬಳಕೆ ಮಾಡಲಾಗುತ್ತದೆ. ಈ ಮೂಲಕ ಆತ್ಮನಿರ್ಭರ ಭಾರತದ ಸಂಕಲ್ಪಕ್ಕೆ ಆದ್ಯತೆ ನೀಡಿದಂತಾಗಿದೆ. ಕಳೆದ ವರ್ಷದ ಸ್ವಾತಂತ್ರ್ಯ ದಿನದಂದು ಸ್ವದೇಶೀಯವಾಗಿ ನಿರ್ಮಿಸಿದ ಅಡ್ವಾನ್ಸ್ಡ್‌ ಟೋವ್ಡ್‌ ಆರ್ಟಿಲಿಯರಿ ಗನ್‌ ಸಿಸ್ಟಮ್‌ (ಎಟಿಎಜಿ) ಅನ್ನು ಬಳಕೆ ಮಾಡಲಾಗಿತ್ತು. ಅದಕ್ಕಿಂತ ಮೊದಲು ಬ್ರಿಟಿಷ್‌ ಕಾಲದ ಅವಧಿಯ 25 ಪಾಂಡರ್‌ ಗನ್‌ಗಳ ಮೂಲಕ ಸೆಲ್ಯೂಟ್‌ ನೀಡಲಾಗುತ್ತಿತ್ತು.

ಇಂದು ರಾಷ್ಟ್ರಪತಿ ಭಾಷಣ
77ನೇ ಸ್ವಾತಂತ್ರ್ಯ ದಿನ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ರಾತ್ರಿ 7 ಗಂಟೆಗೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಅವರ ಭಾಷಣ ಪ್ರಸಾರವಾಗಲಿದೆ.

ತಿರಂಗಾವೇ ಪ್ರೊಫೈಲ್‌
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖರು ತಿರಂಗಾ ಅಭಿಯಾನ ಪ್ರಯುಕ್ತ ಎಲ್ಲರೂ ಜಾಲತಾಣಗಳಲ್ಲಿ ರಾಷ್ಟ್ರ ಧ್ವಜವನ್ನು ತಮ್ಮ ಪ್ರೊಫೈಲ್‌ ಪಿಕ್ಚರ್‌ ಆಗಿ ಬದಲಿಸಿಕೊಂಡಿದ್ದಾರೆ. ದೇಶವಾಸಿಗಳೂ ಇದೇ ಕ್ರಮ ಅನುಸರಿಸಬೇಕು ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next