Advertisement

ಸೆಲ್ಫಿ ವಿಥ್‌ ಇಂದಿರಾ ಕ್ಯಾಂಟೀನ್‌

10:23 AM Aug 10, 2017 | Team Udayavani |

ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿ “ಇಂದಿರಾ ಕ್ಯಾಂಟೀನ್‌’ ಯೋಜನೆ ಜನಪ್ರಿಯಗೊಳಿಸಲು “ಸೆಲ್ಫಿ ವಿಥ್‌ ಇಂದಿರಾ ಕ್ಯಾಂಟೀನ್‌’ ಸ್ಪರ್ಧೆಯನ್ನು ಬಿಬಿಎಂಪಿ ಆಯೋಜಿಸಿದೆ. ಸ್ಪರ್ಧೆಯಲ್ಲಿ ಭಾಗಿವಹಿಸಿ ಕ್ಯಾಂಟೀನ್‌ ಕುರಿತು ನೀಡುವ ಉತ್ತಮ ಉಪಶೀರ್ಷಿಕೆಗೆ ಒಂದು ಲಕ್ಷ ರೂ. ಬಹುಮಾನ ದೊರೆಯಲಿದೆ. ನಗರದಲ್ಲಿ ಬಡವರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಸಲು ಸರ್ಕಾರ ಇಂದಿರಾ ಕ್ಯಾಂಟೀನ್‌ ಯೋಜನೆ ಜಾರಿಗೊಳಿಸಲು ಪಾಲಿಕೆಗೆ 100 ಕೋಟಿ ಅನುದಾನ ನೀಡಿದೆ. ಅದರ ಹಿನ್ನೆಲೆಯಲ್ಲಿ
ಈಗಾಗಲೇ ನಗರದ ಹಲವಾರು ಭಾಗಗಳಲ್ಲಿ ಕ್ಯಾಂಟೀನ್‌ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಕ್ಯಾಂಟೀನ್‌ಗಳು ಹಾಗೂ ಇಂದಿರಾ ಕ್ಯಾಂಟೀನ್‌ ಆ್ಯಪ್‌ಗೆ ಆಗಸ್ಟ್‌ 16ರಂದು ಚಾಲನೆ ದೊರೆಯಲಿದೆ. ಆ ಹಿನ್ನೆಲೆಯಲ್ಲಿ ವಿನೂತನ ಸ್ಪರ್ಧೆ ಆಯೋಜನೆಗೆ ಅಧಿಕಾರಿಗಳು
ಮುಂದಾಗಿದ್ದಾರೆ. ನಮ್ಮ ಸುತ್ತಮುತ್ತಲಿನ ಇಂದಿರಾ ಕ್ಯಾಂಟೀನ್‌ಗಳ ಮಾಹಿತಿ ಹಾಗೂ ಆ ದಿನದ ಊಟ-ತಿಂಡಿಯ ಮಾಹಿತಿ ತಿಳಿಯಲು ಪಾಲಿಕೆಯಿಂದ ಆ್ಯಪ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಸಾರ್ವಜನಿಕರು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಸಮೀಪದ
ಇಂದಿರಾ ಕ್ಯಾಂಟೀನ್‌ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿ, ಉಪ ಶೀರ್ಷಿಕೆ ನೀಡಬೇಕು. ಹೀಗೆ ಪಾಲಿಕೆಗೆಬರುವ ಶೀರ್ಷಿಕೆಗಳಲ್ಲಿ ಉತ್ತಮವಾದ ಶೀರ್ಷಿಕೆಯನ್ನು ಅಧಿಕಾರಿಗಳು ಆಯ್ಕೆ ಮಾಡಲಿದ್ದು, ವಿಜೇತರಿಗೆ ಪಾಲಿಕೆಯಿಂದ 1 ಲಕ್ಷ ರೂ. ಬಹುಮಾನ ದೊರೆಯಲಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಪಾಲಿಕೆಯಿಂದ ಇಂದಿರಾ ಕ್ಯಾಂಟೀನ್‌ಗಳ ಮಾಹಿತಿ ನೀಡುವ ಉದ್ದೇಶದಿಂದ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಆ ಮೂಲಕ ಸಾರ್ವಜನಿಕರು ತಮ್ಮಸುತ್ತಮುತ್ತಲಿನ ಐದು ಇಂದಿರಾ ಕ್ಯಾಂಟೀನ್‌ಗಳು ಎಲ್ಲಿವೆ ಎಂಬ ಮಾಹಿತಿ ಪಡೆಯಬಹುದು. ಇದರೊಂದಿಗೆ ಜನರಿಗೆ ಕ್ಯಾಂಟೀನ್‌ ಕುರಿತು ಮಾಹಿತಿ ನೀಡಲು ಹಾಗೂ ಜನಪ್ರಿಯಗೊಳಿಸಲು ಸೆಲ್ಫಿ ವಿಥ್‌ ಇಂದಿರಾ ಕ್ಯಾಂಟೀನ್‌ ಯೋಜನೆ ಸ್ಪರ್ಧೆ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

ಯುವಕರನ್ನು ಸೆಳೆಯುವ ಯತ್ನ: ಇಂದಿರಾ ಕ್ಯಾಂಟೀನ್‌ ಯೋಜನೆಗೆ ಹೆಚ್ಚಿನ ಪ್ರಚಾರ ನೀಡುವ ಉದ್ದೇಶದಿಂದ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರು ಪಾಲಿಕೆಯು, ಇದೀಗ ಯುವಕರನ್ನು ಕ್ಯಾಂಟೀನ್‌ ಕಡೆಗೆ ಸೆಳೆಯಲು ಸೆಲ್ಫಿ ವಿಥ್‌ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಮುಂದಾಗಿದೆ. ಆ ಮೂಲಕ ಯುವಕರಿಗೆ ಇಂದಿರಾ ಕ್ಯಾಂಟೀನ್‌ ಯೋಜನೆಯ ಕುರಿತು ಮಾಹಿತಿ ನೀಡುವುದು ಹಾಗೂ ಕ್ಯಾಂಟೀನ್‌ಗಳಿಗೆ ಯುವಕರು ಬರುವಂತೆ ಮಾಡುವುದುಸ್ಪರ್ಧೆಯ ಉದ್ದೇಶವಾಗಿದೆ. ಈ ಹಿಂದೆಯೂ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಲಾಂಛನ ಹಾಗೂ ವಿನ್ಯಾಸ ನೀಡುವವರಿಗೆ ಪಾಲಿಕೆಯಿಂದ ಬಹುಮಾನ ಘೋಷಣೆ ಮಾಡಲಾಗಿತ್ತು.

ಉದ್ಘಾಟನೆಗೆ ರಾಹುಲ್‌?
ಇಂದಿರಾ ಕ್ಯಾಂಟೀನ್‌ ಉದ್ಘಾಟನೆಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಆಗಮಿಸಲಿದ್ದಾರೆ ಎಂದು ಸಿಎಂ ಸಿದ್ದ ರಾಮಯ್ಯ
ಹೇಳಿದ್ದಾರೆ. ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ನಗರ ಶಾಸಕರು, ಸಚಿವರು ಪೂರ್ವ ಭಾವಿ ಸಭೆ ನಡೆಸಿದ್ದು, ಆಗಸ್ಟ್‌ 16 ರಂದು
ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆಯುವ ಬೃಹತ್‌ ಸಮಾವೇಶಕ್ಕೆ 50 ಸಾವಿರ ಜನರನ್ನು ಸೇರಿಸಲು ಕಾಂಗ್ರೆಸ್‌ ನಿರ್ಧರಿಸಿದೆ.
ಅದಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಉಸ್ತುವಾರಿಗಳನ್ನು ನೇಮಿಸಿಸಲಾಗಿದೆ. ಜನರನ್ನು ಕರೆತರುವ ಜವಾಬ್ದಾರಿ ವಹಿಸಲಾಗಿದೆ. ಈ ಕಾರ್ಯ ಕ್ರಮದ ಮೂಲಕ ಬೆಂಗಳೂರಿನಲ್ಲಿ ಚುನಾವಣೆಯ ರಣಕಹಳೆ ಮೊಳಗಿಸಲು ಆಡಳಿತ ಪಕ್ಷ ಸಜ್ಜಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next