ಶಹಾಬಾದ: ಸಾಮಾಜಿಕ, ಆರ್ಥಿಕ, ರಾಜಕೀಯ ಪ್ರತಿಯೊಂದು ಕ್ಷೇತ್ರಗಳಲ್ಲಿ ಸಹಭಾಗಿತ್ವ ಪಡೆದು ಮಹಿಳೆಯರು ಸ್ವಾಲಂಬಿಗಳಾಬೇಕು. ಸ್ಥಾನ ಕೊಡುವುದಲ್ಲ ಅದನ್ನು ಪಡೆಯುವ ಕೆಲಸ ನಮ್ಮದಾಗಬೇಕು ಎಂದು ನಗರಸಭೆ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.
ಬುಧವಾರ ನಗರಸಭೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಚುನಾಯಿತ ಮಹಿಳಾ ಸದಸ್ಯರಿಗೆ, ನಾಮನಿರ್ದೇಶಿತ ಸದಸ್ಯರಿಗೆ, ಮಹಿಳಾ ಪೌರಕಾರ್ಮಿಕರಿಗೆ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರಿಗೆ ಸರ್ಕಾರ ಶೇ. 33ರಷ್ಟು ವಿವಿಧ ಕ್ಷೇತ್ರಗಳಲ್ಲಿ ಅವಕಾಶಗಳನ್ನು ನೀಡಿದೆ. ಇದರ ಸರಿಯಾದ ಸದುಪಯೋಗ ಪಡೆದುಕೊಳ್ಳಬೇಕು. ಪ್ರತಿಯೊಂದನ್ನು ಎದುರಿಸುವ ಶಕ್ತಿ ನಮ್ಮಲ್ಲಿದೆ. ಇದಕ್ಕಾಗಿ ಗುರಿಯೊಂದಿಗೆ ಪ್ರಯತ್ನ ಮಾಡಬೇಕು. ಲಿಂಗ ತಾರತಮ್ಯ ದೂರ ಮಾಡಿ ಮಹಿಳೆಯರಿಗೆ ಹೆಚ್ಚಿನ ಮಹತ್ವ ನೀಡಿದಾಗ ಅವರು ಸಬಲರಾಗುತ್ತಾರೆ ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ಡಾ| ಕೆ.ಗುರಲಿಂಗಪ್ಪ ಮಾತನಾಡಿ, ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಾಗಿರದೇ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಅದ್ಭುತವಾದ ಛಾಪು ಮೂಡಿಸಿದ್ದಾರೆ. ಮಹಿಳೆಯರು ಸಮಾಜದ ನಿಜವಾದ ಸೃಷ್ಟಿಕರ್ತರು. ಈ ಸೃಷ್ಟಿಯಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ ಎಂದರು.
ನಗರಸಭೆ ಉಪಾಧ್ಯಕ್ಷೆ ಸಲೀಮಾಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ, ಎಇಇ ಶರಣು ಪೂಜಾರಿ, ವಾಡಿ-ಶಹಾಬಾದ ಯೋಜನಾ ಪ್ರಾಧಿಕಾರದ ಸದಸ್ಯೆ ಲತಾ ಸಂಜೀವಕುಮಾರ, ಎಇಇ ಮುಜಾಮಿಲ್ ಅಲಂ, ನಾರಾಯಣರೆಡ್ಡಿ, ರಘುನಾಥ ನರಸಾಳೆ, ಶಿವರಾಜಕುಮಾರ ಜಟ್ಟೂರ್, ಮುತ್ತಣ್ಣ ಭಂಡಾರಿ, ಶಬಾನಾಬೇಗಂ, ಮಮತಾ ಗುತ್ತೇದಾರ, ಶಂಕರ ವಾಗ್ಮೋರೆ, ಶಾಂತಪ್ಪ ಹಡಪದ, ಮಹಾನಂದ, ಭಾಗ್ಯಶ್ರೀ ಹಾಗೂ ನಗರಸಭೆ ಸದಸ್ಯರು ಇದ್ದರು.