Advertisement

ಸ್ವಂತ ಖರ್ಚಿನಲ್ಲಿ ಹೊಲಿಗೆ ತರಬೇತಿ

01:45 PM Nov 10, 2018 | Team Udayavani |

ದೇವದುರ್ಗ: ಗ್ರಾಮೀಣ ಭಾಗದಲ್ಲಿ ಸರಕಾರದ ಯೋಜನೆಗಳು ತಲುಪದೇ ಜನರು ಗೋಳಿಡುತ್ತಿರುವ ಈ ಕಾಲದಲ್ಲಿ ಸದ್ದಿಲ್ಲದೇ ಹಳ್ಳಿಯೊಂದರಲ್ಲಿ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಕಾರ್ಯ ನಡೆಯುತ್ತಿದೆ. ಯಾವುದೇ ಅಕ್ಷರ ಕಲಿಯದ ವ್ಯಕ್ತಿ ಅನೇಕ ಗ್ರಾಮೀಣ ಮಹಿಳೆಯರ ಜೀವನ ಬದಲಿಸಿದ್ದು, ಹಳ್ಳಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಹೌದು ಅರಕೇರಾ ಸಮೀಪದ ಬಿ.ಗಣೇಕಲ್‌ ಗ್ರಾಮದ ವಿದ್ಯಾಭಾರತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಂಪಣ್ಣ ಪಲ್ಲೇದ ಅವರೇ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಕಟಿಬದ್ಧರಾಗಿ ನಿಂತಿರುವ ವ್ಯಕ್ತಿ.

Advertisement

ಪಲ್ಲೇದ ಅವರು ಕಳೆದ ಒಂದು ವರ್ಷದಿಂದ ಬಿ.ಗಣೇಕಲ್‌ ಗ್ರಾಮದಲ್ಲಿ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ನೀಡುತ್ತಿದ್ದು, ಅನೇಕ ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಮೂಲತಃ ಕೃಷಿ ಕುಟುಂಬದಿಂದ ಬಂದಿರುವ ಪಲ್ಲೇದ ಅವರು ಮೊದಲಿನಿಂದಲೂ ಶಿಕ್ಷಣ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡುವ ಕನಸು ಹೊತ್ತಿದ್ದರು. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ತಮ್ಮದೇ ಶಿಕ್ಷಣ ಸಂಸ್ಥೆ ಆರಂಭಿಸಿ, ಗ್ರಾಮದಲ್ಲಿ ಪಟ್ಟಣಗಳ ರೀತಿ ಉತ್ತಮ ಶಿಕ್ಷಣ ನೀಡಲು ಸಾಧ್ಯವಿದೆ ಎನ್ನುವುದನ್ನು ಸಾಬೀತುಪಡಿಸಿದವರು.

ಗ್ರಾಮೀಣ ಪ್ರದೇಶದಲ್ಲಿ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿರುವುದನ್ನು ಮನಗಂಡು ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಕೇಂದ್ರ ಆರಂಭಿಸಿದ್ದಾರೆ. ಸ್ವಂತ ಖರ್ಚಿನಲ್ಲಿ ಅನೇಕ ಹೊಲಿಗೆ ಯಂತ್ರಗಳನ್ನು ತಂದು ದಿನಕ್ಕೆ ವಿವಿಧ ಬ್ಯಾಚ್‌ಗಳಲ್ಲಿ ತರಬೇತಿ  ನೀಡಲಾಗುತ್ತಿದೆ. ಹೊಲಿಗೆ ತರಬೇತಿ ನೀಡಲು ಮಹಿಳೆಯರನ್ನು ನೇಮಿಸಿದ್ದಾರೆ. ಅವರಿಗೆ ಪಲ್ಲೇದ ಅವರೇ ಸ್ವಂತ ಹಣದಿಂದ ಸಂಬಳ ನೀಡುತ್ತಿದ್ದಾರೆ.

ಸದ್ಯ 103 ಮಹಿಳೆಯರು ಉಚಿತ ತರಬೇತಿ ಪಡೆಯುತ್ತಿರುವ ಈ ಕೇಂದ್ರ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಸರಕಾರದ ಯಾವ ನೆರವಿಲ್ಲದೇ ತಮ್ಮ ಸ್ವಂತ ಖರ್ಚಿನಲ್ಲಿಯೇ ಈ ಕೇಂದ್ರ ಮುನ್ನಡೆಸುತ್ತಿರುವ ಹಂಪಣ್ಣ ಪಲ್ಲೇದ ಅವರ ಕಾರ್ಯವನ್ನು ಸರಕಾರ ಗುರುತಿಸಬೇಕಿದೆ. ಆ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಕಟಿಬದ್ದರಾಗಿರುವ ಪಲ್ಲೇದ ಅವರ ಸಾಮಾಜಿಕ ಕಾರ್ಯಕ್ಕೆ ಸಾಥ್‌ ನೀಡಬೇಕಿದೆ ಎನ್ನುವುದು ಸ್ಥಳೀಯ ಶಿಕ್ಷಣ ಪ್ರೇಮಿ ಅಮರೇಶ ಒತ್ತಾಸೆಯಾಗಿದೆ.

ಪುರುಷ ಪ್ರಧಾನ ಸಮಾಜದಲ್ಲಿ ಕೌಟುಂಬಿಕ ಬಲವರ್ಧನೆಗೆ ಮಹಿಳೆಯರ ಕೊಡುಗೆ ಮಹತ್ವದ್ದಾಗಿದೆ. ಹೀಗಾಗಿ ಹೊಲಿಗೆ ತರಬೇತಿ ಪಡೆದು ಸ್ವಾವಲಂಬಿತರಾಗಲಿ ಎನ್ನುವ ಸದುದ್ದೇಶದಿಂದ ಉಚಿತ ತರಬೇತಿ ಕೇಂದ್ರ ಆರಂಭಿಸಿದ್ದೇನೆ.
 ಹಂಪಣ್ಣ ಪಲ್ಲೇದ, ಉಚಿತ ಹೊಲಿಗೆ ತರಬೇತಿ ಕೇಂದ್ರದ ಸ್ಥಾಪಕ.

Advertisement
Advertisement

Udayavani is now on Telegram. Click here to join our channel and stay updated with the latest news.

Next