ತುಮಕೂರು: ಕೋವಿಡ್ 19 ಮಹಾ ಮಾರಿಗೆ ಜಿಲ್ಲೆಯಲ್ಲಿ ಮೊದಲ ಬಲಿ ಆಗುತ್ತಲೇ ಜನರಲ್ಲಿ ಕೊರೊನಾ ವೈರಸ್ ಬಗ್ಗೆ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಭಯಾನಕ ವೈರಸ್ ಇನ್ಯಾರಲ್ಲಿ ಇದೆಯೋ ಎನ್ನುವ ಆತಂಕ ಕಲ್ಪತರು ನಾಡಿನ ಜನರಲ್ಲಿ ಮನೆ ಮಾಡಿದೆ.
ಈ ನಡುವೆ ಕೋವಿಡ್ 19 ಬಗ್ಗೆ ಜಾಗೃತಿ ಉಂಟು ಮಾಡುವ ಕಾರ್ಯ ನಗರದಲ್ಲಿ ನಡೆಯುತ್ತಿದ್ದು ಜನರು ವೈರಸ್ ಬಗ್ಗೆ ಆತಂಕ ಬೇಡ ಜವಾಬ್ದಾರಿಯಿಂದ ಇರಬೇಕು ಎನ್ನುವ ಜಾಗೃತಿ ಮೂಡಿಸಿಕೊಂಡು ಇಲ್ಲಿಯ ಶ್ರೀನಗರ – ಬಂಡೇ ಪಾಳ್ಯ ನಾಗರಿಕರು ಅಂತರವನ್ನು ಕಾಯ್ದು ಕೊಂಡು ಈ ಮಹಾ ಮಾರಿ ರೋಗವನ್ನು ತೊಲಗಿಸಬಹು ದೆಂದು ಸ್ಥಳೀಯರೆಲ್ಲ ತಮಗೆ ತಾವೇ ನಿರ್ಬಂಧಗಳನ್ನು ಹಾಕಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ನಾಳೆ ಬನ್ನಿ: ಕೋವಿಡ್ 19 ವೈರಸ್‌ನಿಂದ ಪಾರಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳವುದೇ ಉತ್ತಮ ಮಾರ್ಗೋಪಾಯವೆಂದು ಪ್ರಧಾನಿಗಳು ಮಾ.24ರ ಮಧ್ಯರಾತ್ರಿಯಿಂದ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಎಷ್ಟೇ ಹತ್ತಿರದ ಸಂಬಂಧಿಕರಾಗಲೀ, ಆಪ್ತ ಸ್ನೇಹಿತರಾಗಲೀ ಮನೆಗೆ ಬರದ ಹಾಗೆ ಶ್ರೀನಗರ ಬಡಾವಣೆಯ ಪ್ರತಿ ಮನೆಯ ಮುಂದೆ ನಾಳೆ ಬನ್ನಿ ಎಂಬ ಭಿತ್ತಿ ಪತ್ರವನ್ನು ಅಂಟಿಸಲಾಗಿದೆಯಲ್ಲದೆ ಅಕ್ಕ- ಪಕ್ಕದ ಮನೆಯವರಿಗೂ ಪ್ರವೇಶ ನಿಷೇಧಿಸಿದ್ದಾರೆ.
ಸರದಿಯನುಸಾರ ಅಗತ್ಯ ಸಾಮಗ್ರಿ ತರಲು ಅವಕಾಶ: ಈ ಬಡಾವಣೆಯಲ್ಲಿ 800 ಮನೆಗಳಿದ್ದು, ಇದನ್ನು 20 ಭಾಗಗಳಾಗಿ ವಿಂಗಡಿಸಿ ಕೇವಲ 40 ಮನೆಗಳ ಸದಸ್ಯರು ಸರದಿಯಂತೆ 2 ಗಂಟೆಗಳ ಕಾಲ ಹೊರ ಹೋಗಿ ದಿನಸಿ, ಹಣ್ಣು, ತರಕಾರಿ ತರಲು ಅವಕಾಶ ಮಾಡಿಕೊಡಲಾಗಿದೆ. ಮೂರು ದಿನಗಳ ನಂತರ ಇವರಿಗೆ ಮತ್ತೂಮ್ಮೆ ತಮ್ಮ ಸರದಿ ಬರುತ್ತದೆ. ಸರದಿ ಬರುವವರೆಗೂ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರುವಂತಿಲ್ಲ.
ಸ್ವಯಂ ಸೇವಕರ ನೇಮಕ: ಪ್ರತಿ 2 ಬೀದಿಗೆ ಸ್ವಯಂ ಸೇವಕ ಯುವಕರನ್ನು ನೇಮಿಸಲಾಗಿದ್ದು, ನಾಗರಿಕರು ತಮ್ಮ ಅಗತ್ಯತೆಯನ್ನು ಸ್ವಯಂ ಸೇವಕರ ಮುಖೇನ ಪೂರೈಸಿಕೊಳ್ಳುತ್ತಿದ್ದಾರೆ. ಬಡಾವಣೆಯಲ್ಲಿರುವ 4 ದಿನಸಿ ಅಂಗಡಿ, 1 ಮೆಡಿಕಲ್ ಸ್ಟೋರ್‌ನವರನ್ನು ಹೊರತುಪಡಿಸಿ ಉಳಿದಂತೆ ಯಾವ ನಾಗರಿಕರು ಬಡಾವಣೆಯಿಂದ ಹೊರ ಹೋಗುತ್ತಿಲ್ಲ. ಪ್ರತಿ ಬೀದಿಗೆ ಒಂದರಂತೆ ವಾಟ್ಸ್ ಆ್ಯಪ್ ಗ್ರೂಪ್‌ನ್ನು ರಚಿಸಲಾಗಿದ್ದು, ಆ ಮೂಲಕ ತಮಗೆ ಬೇಕಾದ ಸಾಮಗ್ರಿಯ ಬಗ್ಗೆ ಒಂದು ದಿನ ಮುಂಚೆಯೇ ತಿಳಿಸಿ ಅಂಗಡಿಗಳಿಂದ ತರಿಸಿಕೊಳ್ಳುತ್ತಿದ್ದಾರೆ.
ಕೋವಿಡ್ 19 ವೈರಸ್ ರೋಗವನ್ನು ದೂರವಿಡಲು ಸಾಮಾಜಿಕ ಅಂತರ ಕಾಪಾಡಿಕೊಂಡು ಶ್ರೀನಗರ-ಬಂಡೇಪಾಳ್ಯ ಬಡಾವಣೆಯ ಜನತೆ ತಮಗೆ ತಾವೇ ಹಾಕಿಕೊಂಡಿರುವ ಈ ನಿರ್ಬಂಧಗಳು ನಿಜವಾಗಿಯೂ ಇತರರಿಗೆ ಮಾದರಿ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗಮಹಾಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಯಂ ಸೇವಕರಾಗಿ ಮಹೇಶ್, ಹರೀಶ್, ರೇಣುಕ, ಚೇತನ್, ನಾಗೇಶ್, ನಾರಾಯಣಗೌಡ ಸೇರಿದಂತೆ 40 ಯುವಕರು ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿ ದ್ದಾರೆ. ಇದೇ ಬಡಾವಣೆಯ ಸಿಎಫ್ಟಿಆರ್‌ಐ.ನ ಬಯೋಟೆಕ್ನಾಲಜಿ ಎಂಜಿನಿಯರ್ ಮತ್ತು ರೀಸರ್ಚರ್ ಆರ್.ವಿ. ಮಹೇಶ್ ಸಲಹೆ ಸೂಚನೆಯನ್ವಯ ಈ ಮಹತ್ವದ ನಿರ್ಧಾರ ದಿಂದ ಮಾಡಿದ್ದೇವೆ ಎಂದು ಶ್ರೀನಗರ ನಾಗರಿಕ ಕ್ಷೇಮಾಭಿವೃದ್ಧಿ ಸಮಿತಿ ಸದಸ್ಯರು ತಿಳಿಸಿದ್ದಾರೆ.