ಇಡ್ಕಿದು: ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಮಿತ್ತೂರು ಸರಕಾರಿ ಹಿ.ಪ್ರಾ. ಶಾಲೆ ಸ್ವಾವಲಂಬಿ ಹೆಜ್ಜೆಗಳ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ. ಜನಪ್ರತಿನಿಧಿಗಳು, ಎಸ್‌ಡಿಎಂಸಿ ಹಾಗೂ ಶಿಕ್ಷಕರ ಒಮ್ಮತದ ಪರಿಕಲ್ಪನೆಯಿಂದಾಗಿ ಇಲ್ಲಿ ಸಮೃದ್ಧ ಶಾಲಾ ತೋಟ ಅರಳಿ ನಿಂತಿದೆ.
ಮೂರುವರೆ ಎಕ್ರೆ ಜಾಗ ಹೊಂದಿರುವ ಮಿತ್ತೂರು ಶಾಲೆಯ ಮಕ್ಕಳ ಪೋಷಕರು ರೈತರೇ ಆಗಿರುವುದರಿಂದ, ಶಾಲೆಯಲ್ಲೂ ತೋಟ ನಿರ್ಮಿಸಲು ಶಾಲಾಭಿವೃದ್ಧಿ ಸಮಿತಿ ನಿರ್ಧರಿಸಿತು. ಗ್ರಾ.ಪಂ. ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಅದು ಸಾಕಾರಗೊಂಡಿತು. ಮಕ್ಕಳಲ್ಲಿ
ಪ್ರಾಥಮಿಕ ಹಂತದಲ್ಲೇ ಹಸಿರು ಕ್ರಾಂತಿಯ ಅರಿವು ಮೂಡಿತು. ಶಾಲೆ ಯಲ್ಲಿ ಬಿಸಿಯೂಟಕ್ಕೆ ಬೇಕಾದ ತರಕಾರಿ ಬೆಳೆಸುವ ಕೈತೋಟದಲ್ಲೀಗ 600 ಮಂಗಳ ಕಂಗಿನ ಗಿಡ, 30 ತೆಂಗಿನ ಗಿಡ, 350 ನೇಂದ್ರ, ಕದಳಿ ಬಾಳೆ, ಬದನೆ, ಬಸಳೆ, ಪಪ್ಪಾಯಿ, ಸೌತೆಕಾಯಿ, ಬೆಂಡೆ, ತೊಂಡೆ ಗಿಡ-ಬಳ್ಳಿಗಳಿವೆ. ತೋಟಗಾರಿಕೆ ಆರಂಭಿಸಿ 10 ತಿಂಗಳಾಗಿದ್ದು, ತರಕಾರಿ ಸಿಗುತ್ತಿದೆ. ಬಿಸಿಯೂಟಕ್ಕೆ ಬಳಸಿ, ಉಳಿದುದನ್ನು ಮಾರಾಟ ಮಾಡಲಾಗುತ್ತಿದೆ. ಸ್ಥಳೀಯ ರೈತ ಸುಧಾಕರ ಎಂಬವರು ತೋಟದ ಉಸ್ತುವಾರಿ ನೋಡಿಕೊಳ್ಳಲು ಎರಡು ವರ್ಷಗಳ ಅವಧಿಗೆ ನಿಯೋಜಿತರಾಗಿದ್ದಾರೆ.
ತೆಂಗು-ಕಂಗಿಗೆ ನೀರುಣಿಸುವ ಕೆಲಸವೂ ಅವರದೇ. 3 ವರ್ಷಗಳಲ್ಲಿ ಇವು ಫಲ ಬಿಡುವ ನಿರೀಕ್ಷೆಯಿದ್ದು, ಶಾಲೆಗೆ ವರ್ಷಕ್ಕೆ ಕನಿಷ್ಠ 2 ಲಕ್ಷ ರೂ. ಆದಾಯ ಬರಲಿದೆ ಎಂದು ಗ್ರಾ.ಪಂ. ಉಪಾಧ್ಯಕ್ಷ ಹಾಗೂ ಎಸ್‌ಡಿಎಂಸಿ ನಾಮ ನಿರ್ದೇಶಿತ ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ ಮಿತ್ತೂರು ಹೇಳುತ್ತಾರೆ.
ಇಲ್ಲಿನ ಕೊಳವೆ ಬಾವಿಯಲ್ಲಿ 3 ಇಂಚು ನೀರಿದ್ದು, 5 ಎಚ್‌ಪಿ ಮೋಟರ್ ಪಂಪ್ ಮೂಲಕ ಮೇಲೆತ್ತಿ, ಎಂಟು ಸ್ಪ್ರಿಂಕ್ಲರ್‌ಗಳ ಮೂಲಕ ತೋಟಕ್ಕೆ ಹಾಯಿಸಲಾಗುತ್ತದೆ. ಶಿಕ್ಷಕರು, ಮಕ್ಕಳ ಪೋಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಶ್ರಮದಾನದ ಮೂಲಕ ತೋಟ ಅಭಿವೃದ್ಧಿಪಡಿಸಿದ್ದಾರೆ. ಉದ್ಯೋಗ ಖಾತರಿ ಯೋಜನೆಯ ಅನುದಾನವನ್ನು ಬಳಸಲಾಗಿದೆ. ಸಹಶಿಕ್ಷಕ ಸುಬ್ರಾಯ ಅವರು ಈ ತೋಟದ ಕುರಿತಾಗಿ ಹೆಚ್ಚು ಆಸಕ್ತಿಯಿಂದ ತೊಡಗಿಸಿಕೊಂಡಿದ್ದು, ಮುಖ್ಯಶಿಕ್ಷಕ ಮೋಹನ್ ಹಾಗೂ ಸಹ ಶಿಕ್ಷಕರು ಸಹಕಾರ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ನಿತ್ಯ ಪ್ರೀತಿಯಿಂದ ತೋಟದ ಆರೈಕೆ ಮಾಡುತ್ತಿದ್ದಾರೆ. ಜತೆಗೆ, ಪರಿಸರದ ಪಾಠವೂ ಆಗುತ್ತಿದೆ.
ಇಲ್ಲಿ ಒಂದರಿಂದ 8ನೇ ತರಗತಿ ವರೆಗೆ 112 ವಿದ್ಯಾರ್ಥಿಗಳಿದ್ದು, 7 ಕಾಯಂ ಅಧ್ಯಾಪಕರು ಹಾಗೂ ಒಬ್ಬರು ಗೌರವ ಶಿಕ್ಷಕರಿದ್ದಾರೆ. ಪರಿಸರ ಮಿತ್ರ ಶಾಲೆ ಹಾಗೂ ಸ್ವತ್ಛತೆಯಲ್ಲಿ ಈ ಶಾಲೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ. ಈ ಶಾಲೆಗೆ ಇತ್ತೀಚೆಗೆ ಭೇಟಿ ನೀಡಿದ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಶಾಲೆ ನನ್ನ ಕ್ಷೇತ್ರದಲ್ಲಿರುವುದು ಅಭಿಮಾನದ ಸಂಗತಿ ಎಂದಿದ್ದಾರೆ.
ಉಮರ್ ಕಬಕ