Advertisement

Mangaluru: ಪಿಎಂ ವಿಶ್ವಕರ್ಮ ಯೋಜನೆಯಿಂದ ಸ್ವಾವಲಂಬಿ ಜೀವನ- ಸಚಿವ ರೂಪಾಲಾ

10:44 AM Sep 18, 2023 | Team Udayavani |

ಮಂಗಳೂರು: ದೇಶದಲ್ಲಿ ಕರಕುಶಲಕರ್ಮಿಗಳು ಸ್ವಾವಲಂಬಿ ಜೀವನ ನಡೆಸಬೇಕೆಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು “ಪಿಎಂ ವಿಶ್ವಕರ್ಮ’ ಯೋಜನೆ ಜಾರಿಗೆ ತಂದಿದ್ದಾರೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ಕುಶಲಕರ್ಮಿ ವರ್ಗವನ್ನೂ ಜೋಡಿಸುವ ಕೆಲಸ ಈ ಮೂಲಕ ನಡೆದಿದೆ ಎಂದು ಕೇಂದ್ರ ಮೀನುಗಾರಿಕೆ ಸಚಿವ ಪರಷೋತ್ತಮ್‌ ರೂಪಾಲಾ ಹೇಳಿದರು.

Advertisement

ನಗರದಲ್ಲಿ ಈ ಯೋಜನೆಗೆ ರವಿವಾರ ಚಾಲನೆ ನೀಡಿ ಅವರು ಮಾತನಾಡಿ, ಯೋಜನೆಯ ಮೂಲಕ ಅಕ್ಕಸಾಲಿಗರು, ಬಡಗಿ, ಕಮ್ಮಾರ, ಚಮ್ಮಾರರು, ಮೀನಿನ ಬಲೆ ತಯಾರಕರು ಸೇರಿದಂತೆ 18 ವಿವಿಧ ಸಾಂಪ್ರದಾಯಿಕ ಕಲೆಗಳಲ್ಲಿ ತೊಡಗಿಕೊಂಡಿರುವ ಕರಕುಶಲಕರ್ಮಿಗಳಿಗೆ ಸರಕಾರ ನೆರವಾಗಿದೆ. ದೇಶದ ಕೋಟ್ಯಂತರ ಕಲಾವಿದರಿಗೆ ಇದರಿಂದ ಪ್ರಯೋಜನ ದೊರೆಯಲಿದೆ ಎಂದರು.

13 ಸಾವಿರ ಕೋ.ರೂ. ಮೀಸಲು
ಯೋಜನೆಯಡಿ ಎರಡು ಹಂತದ ತರಬೇತಿ ದೊರೆಯಲಿದ್ದು, ಮೊದಲ ಹಂತದಲ್ಲಿ ತರಬೇತಿ ಪಡೆದವರಿಗೆ 1ಲಕ್ಷ ರೂ., ಎರಡನೇ ಹಂತವನ್ನು ಪೂರ್ಣಗೊಳಿಸಿದವರಿಗೆ 2 ಲಕ್ಷ ರೂ. ಸಾಲ ಸೌಲಭ್ಯ ದೊರೆಯಲಿದೆ. ತರಬೇತಿ ವೇಳೆಯಲ್ಲಿ ಸ್ಟೈಫಂಡ್‌ ಕೂಡ ದೊರೆಯಲಿದೆ. ಯೋಜನೆಗಾಗಿ ಸರಕಾರ ಈಗಾಗಲೇ 13 ಸಾವಿರ ಕೋ.ರೂ. ಮೀಸಲಿಟ್ಟಿದೆ ಎಂದರು.

7 ಅದ್ಭುತಗಳ ಹಿಂದಿನ ಶಕ್ತಿ ವಿಶ್ವ ಕರ್ಮ
ವಿಶ್ವದಲ್ಲಿ ಏಳು ಅದ್ಭುತಗಳಿವೆ ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ ಇವುಗಳು ಅದ್ಭುತವಾಗಬೇಕಿದ್ದರೆ ಅದರ ಹಿಂದಿನ ಶಕ್ತಿಯೇ ವಿಶ್ವಕರ್ಮ. ಅವರ ಆಶೀರ್ವಾದವೂ ಮೋದಿಯವರ ಮೇಲಿದೆ ಎಂದರು.

ಶಾಸಕ ಡಿ. ವೇದವ್ಯಾಸ ಕಾಮತ್‌ ಮಾತನಾಡಿ, ಕೌಶಲಾಭಿವೃದ್ಧಿಯ ಹೊಸ, ಬಹು ದೊಡ್ಡ ಯೋಜನೆ ವಿಶ್ವಕರ್ಮರ ಹೆಸರಿನಲ್ಲಿ ಮೋದಿಯವರು ಜಾರಿಗೊಳಿಸಿದ್ದಾರೆ. ಇದರಿಂದ ಅವರ ಬದುಕಿನಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಕರಾವಳಿಯ ವಿಶ್ವಕರ್ಮ, ಮೀನುಗಾರಿಕೆ ಸೇರಿದಂತೆ ವಿವಿಧ ವರ್ಗಗಳು ಲಾಭ ಪಡೆಯಲಿದೆ ಎಂದರು.

Advertisement

ಮೀನುಗಾರಿಕಾ ವಿವಿ ಬೇಡಿಕೆ
ಎಕ್ಕೂರಿನ ಮೀನುಗಾರಿಕಾ ಕಾಲೇಜನ್ನು ಮೀನುಗಾರಿಕಾ ವಿಶ್ವ  ವಿದ್ಯಾನಿಲಯವನ್ನಾಗಿ ಮೇಲ್ದರ್ಜೆ ಗೇರಿಸಬೇಕಿದೆ. ಮೀನು ಗಾರಿಕಾ ಬಂದರಿನ ಅಭಿವೃದ್ಧಿಗೆ ಈಗಾಗಲೇ ಕೇಂದ್ರಕ್ಕೆ 37.50 ಕೋ.ರೂ. ವೆಚ್ಚದ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಶಾಸಕ ಕಾಮತ್‌ ಹೇಳಿದರು.

ಮೀನುಗಾರಿಕಾ ಸಚಿವ ಮಂಕಾಳ ಎಸ್‌. ವೈದ್ಯ ಮುಖ್ಯ ಅತಿಥಿಯಾಗಿದ್ದರು. ಶಾಸಕ ಡಾ| ಭರತ್‌ ಶೆಟ್ಟಿ ವೈ, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮೇಯರ್‌ ಸುಧೀರ್‌ ಶೆಟ್ಟಿ, ರಾಜ್ಯ ಮೀನುಗಾರಿಕಾ ಇಲಾಖೆ ನಿರ್ದೇಶಕ ದಿನೇಶ್‌ ಕುಮಾರ್‌ ಕಲ್ಲೇರ್‌, ನ್ಯಾಷನಲ್‌ ಫಿಶರೀಸ್‌ ಡೆವಲಪ್ಮೆಂಟ್ ಬೋರ್ಡ್‌ (ಹೈದರಾಬಾದ್‌)ನ ಸಿಇಒ (ಪ್ರಭಾರ) ಎಲ್‌. ನರಸಿಂಹ ಮೂರ್ತಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಉಪಸ್ಥಿತರಿದ್ದರು. ಮಂಜುಳಾ ಶೆಟ್ಟಿ ಮತ್ತು ಅನುರಾಗ್‌ ನಿರೂಪಿಸಿದರು.

ಫಲಾನುಭವಿಗಳೊಂದಿಗೆ ಸಂವಾದ:
ಕುಶಲಕರ್ಮಿ ಫಲಾನುಭವಿಗಳೊಂದಿಗೆ ಸಚಿವ ರೂಪಾಲಾ ಸಂವಾದ ನಡೆಸಿದರು. ಚಿನ್ನದ ಕೆಲಸಗಾರ ಪ್ರಕಾಶ್‌ ಆಚಾರ್ಯ ಮಾತನಾಡಿ, ಕುಲಕಸುಬು ನಶಿಸುವ ಹಂತದಲ್ಲಿದ್ದು, ಆದರೆ ಕೇಂದ್ರ ಸರಕಾರ ವಿಶ್ವಕರ್ಮ ಜಯಂತಿಯ ದಿನವೇ ಈ ಯೋಜನೆ ಜಾರಿಗೊಳಿಸಲು ಆಯ್ಕೆ ಮಾಡಿರುವುದು ಅಭಿನಂದನೀಯ ಎಂದರು.
ಮೀನುಗಾರಿಕಾ ಬೋಟ್‌ ತಯಾರಕ ನವೀನ್‌ ಬಂಗೇರ ಮಾತನಾಡಿ, ಮನೆ ಅಡವಿಟ್ಟು ಸಾಲ ಪಡೆಯಬೇಕಾದ ಪರಿಸ್ಥಿತಿ ಇತ್ತು. ಆದರೆ ಈ ಯೋಜನೆಯಿಂದಾಗಿ ಅಂತಹ ಪರಿಸ್ಥಿತಿ ದೂರವಾಗಿದೆ ಎಂದರು. ಟೈಲರಿಂಗ್‌ ವೃತ್ತಿಯ ವಾಣಿಶ್ರೀ ಶೆಟ್ಟಿ, ಮೀನುಗಾರಿಕಾ ಬಲೆ ತಯಾರಕ ಗಂಗಾಧರ ಪುತ್ರನ್‌, ಬೋಟ್‌ ತಯಾರಕ ನಂದ ಕಿಶೋರ್‌ ಸಂವಾದದಲ್ಲಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next