ತೆಲಸಂಗ: ಓದು ಮುಗಿದ ಮೇಲೆ ಮದುವೆ ಮಾಡಿಕೊಂಡು ಗಂಡನ ಮನೆ ಸೇರಿ ಕುಟುಂಬ ನಿರ್ವಹಣೆ ಮಾಡಿಕೊಂಡು ಇದ್ದರೆ ಮುಗಿಯಿತೆನ್ನುವ ಇಂದಿನ ದಿನಗಳಲ್ಲಿ ಸ್ವಾವಲಂಬಿ ಜೀವನ ನಡೆಸುವವರಿಗೆ ಮಾದರಿಯಾಗಿ ನಿಂತು ಮಹಿಳೆಯರ ಏಳ್ಗೆಗೆ ದುಡಿಯುತ್ತಿದ್ದಾರೆ ಅಥಣಿಯ ಶೃತಿ ಜಗದೀಶ ಕಿವಡಿ.
ಹೊಲಿಗೆ ತರಬೇತಿ, ಬಳೆ ತಯಾರಿಕೆ, ಕಿವಿಯೋಲೆ, ಉಪ್ಪಿನಕಾಯಿ, ಹಪ್ಪಳ, ಊದುಬತ್ತಿ, ಕುರುಕುಲ ತಿಂಡಿ, ಕಂಪ್ಯೂಟರ್ ತರಬೇತಿ ಕೊಡುವ ಮೂಲಕ ತನ್ನ ಬದುಕನ್ನು ಸೇವಾರೂಪದಲ್ಲಿಯೇ ಕಟ್ಟಿಕೊಂಡಿರುವ ಶೃತಿ, ಮನೆಯಲ್ಲಿಯೇ ಕುಳಿತು ಉದ್ಯೋಗ ನಡೆಸುವ ಮಹಿಳೆಯರಿಗೆ ಆಸರೆಯಾಗಿದ್ದಾರೆ. ಕಳೆದ 4 ವರ್ಷಗಳಿಂದ ಮಹಿಳೆಯರಿಗೆ ಸ್ವ ಉದ್ಯೋಗದ ತರಬೇತಿ ನೀಡಿ ಮಹಿಳೆಯರಿಗೆ ಸ್ವಾವಲಂಬಿ ಬದುಕಿಗೆ ದಾರಿ ಆಗಿದ್ದಾರೆ.ಸಮಾಜದಲ್ಲಿ ತುಳಿತಕ್ಕೊಳಗಾದ, ನೊಂದ-ನಿರ್ಗತಿಕ ಬಡ ಮಹಿಳೆಯರಿಗೆ ಉಚಿತ ತರಬೇತಿ ನೀಡುತ್ತಿದಾರೆ.
ಮಹಿಳೆಯರು ಮನೆಯಲ್ಲಿಯೇ ಕುಳಿತು ಗುಡಿ ಕೈಗಾರಿಕೆ ಮೂಲಕ ಕುಟುಂಬ ನಿರ್ವಹಣೆ ಮಾಡಬಹುದು. ಆದರೆ ಮಾಡುವ ಛಲ ಬೇಕು. ನಾನು ನನ್ನ ಭವಿಷ್ಯ ಕಟ್ಟಿಕೊಳ್ಳುವುದರೊಂದಿಗೆ ಮಹಿಳೆಯರಿಗೆ ತರಬೇತಿ ನೀಡುವ ಮೂಲಕ ಸ್ವಾವಲಂಬಿ ಜೀವನಕ್ಕೆ ಶಕ್ತಿ ನೀಡುವ ಕೆಲಸ ಮಾಡುತ್ತಿದ್ದೇನೆ. ಕುಟುಂಬ ನಿರ್ವಹಣೆ ಜತೆಗೆ ಸಮಾಜಸೇವೆ ನನಗೆ ತೃಪ್ತಿ ತಂದಿದೆ.
-ಶೃತಿ ಜಗದೀಶ ಕಿವಡಿ, ಸಮಾಜ ಸೇವಕಿ, ಅಥಣಿ
-ಜಗದೀಶ ಎಂ. ಖೊಬ್ರಿ