Advertisement

ಭಾರತದ ಔಷಧೋದ್ಯಮ ಮುಂದಿನ 3 ವರ್ಷದಲ್ಲಿ ಸ್ವಾವಲಂಬಿ : ಸದಾನಂದ ಗೌಡ

08:33 PM Feb 27, 2021 | Team Udayavani |

ಬೆಂಗಳೂರು : ಎಲ್ಲ ನಮೂನೆಯ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಸಂಬಂಧಿಸಿ ಮುಂದಿನ 3 ವರ್ಷಗಳಲ್ಲಿ ದೇಶವನ್ನು ಸಂಪೂರ್ಣ ಸ್ವಾವಲಂಬಿ ಮಾಡಬೇಕು ಎಂಬ ಗುರಿಯೊಂದಿಗೆ ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ. ವಿ ಸದಾನಂದ ಗೌಡ ಅವರು ಹೇಳಿದ್ದಾರೆ.

Advertisement

ಬೆಂಗಳೂರಿನ ಆರ್ ಆರ್ ಇನ್ಸ್ಟಿಟ್ಯೂಟ್ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಭಾರತವು ಜನರಿಕ್ ಮೆಡಿಸಿನ್ ಉತ್ಪಾದನೆಯಲ್ಲಿ ಜಾಗತಿಕವಾಗಿ ಮೂರನೇ ಸ್ಥಾನವನ್ನು ಹೊಂದಿದೆ. ಕೋವಿಡ್ ಸಂದರ್ಭದಲ್ಲಿ ಕೂಡಾ ಜಗತ್ತಿನ 120 ದೇಶಗಳಿಗೆ ಹೈಡ್ರೋಕ್ಸಿಕ್ಲೋರೋಕ್ವಿನ್, ಪ್ಯಾರಾಸಟಮಾಲ್ ಮುಂತಾದ ಮಾತ್ರೆಗಳನ್ನು ಪೂರೈಸಿದೆವು. ಆದರೆ ಬಹುತೇಕ ಔಷಧ ಉತ್ಪಾದನೆಗೆ ಬೇಕಾಗುವ ಮೂಲ ರಾಸಾಯನಿಕಗಳಿಗಾಗಿ (ಎಪಿಐ, ಕೆಎಸ್ಎಂ ಮುಂತಾದವು) ನಾವು ಚೀನಾ ಮತ್ತಿತರ ದೇಶಗಳ ಮೇಲೆ ಅವಲಂಬಿತವಾಗಿದ್ದೇವೆ. ಇದರಲ್ಲಿ ಸ್ವಾವಲಂಬನೆ ಸಾಧಿಸಲು ದೇಶದ ಬೇರೆ ಬೇರೆ ಭಾಗಗಳಲ್ಲಿ ಮೂರು ಬಲ್ಕ್ ಡ್ರಗ್ ಕೈಗಾರಿಕಾ ಕ್ಲಸ್ಟರ್ ಗಳನ್ನು ಸ್ಥಾಪಿಸಲಾಗುತ್ತಿದೆ. ಅದೇ ರೀತಿ ಶೇಕಡಾ 85ರಷ್ಟು ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶದಲ್ಲಿಯೇ ಇವನ್ನು ತಯಾರಿಸುವ ಉದ್ದೇಶದಿಂದ ನಾಲ್ಕು ಮೆಡಿಕಲ್ ಡಿವೈಸ್ ಪಾರ್ಕುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇವೆಲ್ಲ ಪೂರ್ಣಪ್ರಮಾಣದಲ್ಲಿ ಫಲ ನೀಡಲು ಇನ್ನೂ ಮೂರು ವರ್ಷ ಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ :ಹೊನ್ನಾವರದ ಪರೇಶ್ ಮೇಸ್ತ ಸಾವಿನ ಹಿಂದೆ ಬಿಜೆಪಿಯವರೇ ಭಾಗಿ : ಡಿಕೆಶಿ ಅನುಮಾನ

ಈಚೆಗೆ ಮಂಡಿಸಿದ ಬಜೆಟ್ಟಿನಲ್ಲಿ ವಿವಿಧ ವಲಯಗಳ ಉತ್ತೇಜನಕ್ಕಾಗಿ 1.9 ಲಕ್ಷ ಕೋಟಿ ರೂಪಾಯಿ ಒದಗಿಸಲಾಗಿದೆ. ಇದರಲ್ಲಿ ತಾವು ನಿರ್ವಹಿಸುವ ಔಷಧ ಇಲಾಖೆಗೆ 50 ಸಾವಿರ ಕೋಟಿ ರೂಪಾಯಿ ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2015ರಲ್ಲಿ ಕೈಗೊಂಡ ಸಮೀಕ್ಷೆಯೊಂದರಲ್ಲಿ ಶ್ರೀಸಾಮಾನ್ಯರು ತಮ್ಮ ಆದಾಯದಲ್ಲಿ ಶೇಕಡಾ 15ರಿಂದ ಶೇಕಡಾ 30ರವರೆಗೂ ಔಷಧೋಪಚಾರಕ್ಕಾಗಿ ಕರ್ಚು ಮಾಡುತ್ತಿದ್ದಾರೆ ಎಂಬ ಕಳವಳಕಾರಿ ಅಂಶ ಹೊರಬಿದ್ದಿತ್ತು.

ಅದಕ್ಕಾಗಿ ಪ್ರತಿಯೊಬ್ಬ ಬಡವರಿಗೂ ಕೈಗೆಟಕುವ ದರದಲ್ಲಿ ಔಷಧೋಪಚಾರ ದೊರೆಯುವಂತೆ ಮಾಡಲು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಹಾಗೂ ಆಯುಷ್ಮಾನ್ ಭಾರತದಂತಹ ಯೋಜನೆಗಳನ್ನು ರೂಪಿಲಾಯಿತು. ಜನೌಷಧಿ ಮೆಡಿಸಿನ್ ಬಾಸ್ಕೆಟ್ ನಲ್ಲಿ 1439 ನಮೂನೆಯ ಔಷಧಗಳು ಹಾಗೂ 235 ಬಗೆಯ ವೈದ್ಯಕೀಯ ಉಪಕರಣಗಳು ಲಭ್ಯವಿವೆ. ಇದುವರೆಗೆ ದೇಶದ 734 ಜಿಲ್ಲೆಗಳಲ್ಲಿ 7500 ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಹಾಗೆಯೇ ದೇಶದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಬಡವರ ಅನುಕೂಲಕ್ಕಾಗಿ ಜನೌಷಧಿ ಕೆಂದ್ರಗಳು ಇರಬೇಕು ಎಂಬುದು ಕೇಂದ್ರ ಸರ್ಕಾರದ ಇಚ್ಛೆಯಾಗಿದೆ.

Advertisement

ಕರ್ನಾಟಕದಲ್ಲೂ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರ ತೆರೆಯಲು ಸ್ಥಳಾವಕಾಶ ಕಲ್ಪಿಸಬೇಕು ಎಂದು ಕೋರಲಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ ಎಂದು ಸದಾನಂದ ಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next