Advertisement

ವಿದೇಶಗಳಿಂದ ಆಗಮಿಸಿದವರು ಸ್ವಯಂ ಘೋಷಣೆ ಮಾಡಿಕೊಳ್ಳಿ

02:10 AM Mar 13, 2020 | mahesh |

ಉಡುಪಿ: ಜಿಲ್ಲೆಗೆ ವಿದೇಶದಿಂದ ಬಂದ ವ್ಯಕ್ತಿಗಳು, ಆರೋಗ್ಯ ಇಲಾಖೆಯ ಸ್ಥಳೀಯ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರ ಬಳಿ ತಾವು ವಿದೇಶದಿಂದ ಬಂದಿರುವ ಬಗ್ಗೆ ಸ್ವಯಂ ಘೋಷಣೆ ಮಾಡಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಕುರಿತ ಕಾರ್ಯದಲ್ಲಿ ಸಹಕರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸುಧೀರ್‌ ಚಂದ್ರ ಸೂಡ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಗುರುವಾರ ನಡೆದ ಕೊರೊನಾ ಮುನ್ನೆಚ್ಚರಿಕೆ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಫೆ. 25ರ ಬಳಿಕ ವಿದೇಶಗಳಿಂದ ಆಗಮಿಸುವ ಸಾರ್ವಜನಿಕರು ಸ್ವಯಂ ಘೋಷಣೆ ಮಾಡಿಕೊಳ್ಳ ಬೇಕು. ಸಾರ್ವಜನಿಕರು ಕೂಡ ಅಂತಹ ವ್ಯಕ್ತಿಗಳ ಬಗೆಗಿನ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ತಿಳಿಸುವ ಮೂಲಕ ಸಹಕರಿಸಬೇಕು. ಮಾಹಿತಿ ನೀಡಿದವರ, ಶಂಕಿತ ವ್ಯಕ್ತಿಯ ಗುರುತನ್ನು ಗೌಪ್ಯವಾಗಿ
ಇಡಲಾಗುವುದು ಎಂದರು.

ಹೆಚ್ಚುವರಿ ಲ್ಯಾಬ್‌
ವಿದೇಶಗಳಿಂದ ಬಂದವರು 14 ದಿನಗಳ ವರೆಗೆ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು, ರೋಗ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಸಹಕರಿಸ ಬೇಕು. ಕೊರೊನಾ ಸೋಂಕಿನ ಸ್ಯಾಂಪಲ್‌ ಪರೀಕ್ಷೆಗಾಗಿ ಬೆಂಗಳೂರಿನಲ್ಲಿರುವ 2 ಲ್ಯಾಬ್‌ಗಳ ಜತೆಗೆ ಶಿವಮೊಗ್ಗ, ಮೈಸೂರು ಮತ್ತು ಹಾಸನದಲ್ಲಿ ತಲಾ 1 ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ವಾಸುದೇವ ಉಪಾಧ್ಯಾಯ, ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ| ಚಿದಾನಂದ ಸಂಜು, ಜಿಲ್ಲಾ ಆಶ್ರಿತ ರೋಗವಾಹಕ ನಿಯಂತ್ರಣಾಧಿಕಾರಿ ಡಾ| ಪ್ರಶಾಂತ್‌ ಭಟ್‌, ಆರ್‌.ಸಿ.ಎಚ್‌. ಅಧಿಕಾರಿ ಡಾ| ಎಂ.ಜಿ. ರಾಮ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಸತೀಶ್‌ ರಾವ್‌, ಜಿಲ್ಲಾ ಕರೊನಾ ನಿಯಂತ್ರಣ ಕಾರ್ಯಪಡೆಯ ಸದಸ್ಯರಾದ ಡಾ| ತೇಜಸ್ವಿನಿ, ಪ್ರೀತಮ್‌, ಗಿರೀಶ್‌ ಕಡ್ಡೀಪುಡಿ ಉಪಸ್ಥಿತರಿದ್ದರು.

ಸುಳ್ಳು ಸುದ್ದಿ ಹರಡಿದರೆ ಕ್ರಮ
ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಬಗ್ಗೆ ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ಹರಡಬಾರದು. ಇಂತಹ ಸುದ್ದಿ ಹರಡುವವರ ಮೇಲೆ ಕಠಿನ ಕ್ರಮ ಜರಗಿಸ ಲಾಗುವುದು. ಕೊರೊನ ಶಂಕಿತ ವ್ಯಕ್ತಿಯ ಗುರುತು, ವಿಳಾಸ ಅಥವಾ ಇನ್ನಿತರ ವೈಯಕ್ತಿಕ ಮಾಹಿತಿಯನ್ನು ಸಹ ಮಾಧ್ಯಮದಲ್ಲಿ ಬರಂಗಪಡಿಸದಂತೆ ಅವರು ತಿಳಿಸಿದರು.

Advertisement

ವಿದೇಶದಿಂದ ಆಗಮಿಸಿದವರ ಮಾಹಿತಿ ನೀಡಿ
ವಿದೇಶದಿಂದ ಬಂದ ವ್ಯಕ್ತಿಗಳಲ್ಲಿ ತೀವ್ರ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ಸಮಸ್ಯೆಗಳಿದ್ದಲ್ಲಿ ಜಿಲ್ಲಾ ಸರ್ವೇಕ್ಷಣಾ ಘಟಕದ ದೂ.ಸಂ. 0820-2525561 ಗೆ ಮಾಹಿತಿ ನೀಡುವಂತೆ ಹಾಗೂ ಈ ಕುರಿತು ವೈದ್ಯಕೀಯ ಪರೀಕ್ಷೆಗೆ ಆಗಮಿಸುವಾಗ ಖಾಸಗಿ ವಾಹನ ಅಥವಾ ಬಸ್‌ ಮುಂತಾದ ಸಾರ್ವಜನಿಕ ವಾಹನ ಬಳಸಬಾರದು. ಅರೋಗ್ಯ ಇಲಾಖೆಯಲ್ಲಿ ಇದಕ್ಕಾಗಿಯೇ ಪ್ರತ್ಯೇಕ ಸುಸಜ್ಜಿತ ವಾಹನವಿದ್ದು, ಆ ವಾಹನವನ್ನು ಶಂಕಿತರ ಮನೆಗೆ ಕಳುಹಿಸಿ, ಅದೇ ವಾಹನದಲ್ಲಿ ಕರೆತಂದು ಅಗತ್ಯ ಪರೀಕ್ಷೆ ನಡೆಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next