ದಾವಣಗೆರೆ: ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ಹೋಗಲಾಡಿಸುವ ಏಕೈಕ ಮಾರ್ಗವೆಂದರೆ ಸಮಾಜದ ಎಲ್ಲ ಹಂತದಲ್ಲಿ ಸ್ಪರ್ಧೆಗೆ ಸಮರ್ಥರಿದ್ದೇವೆ ಎಂಬುದನ್ನು ತೋರಿಸುವುದು. ಅದಕ್ಕೆ ದಿವಂಗತ ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿ ಹರಿಕಾರ ಡಾ| ಬಾಬು ಜಗಜೀವನರಾಂ ಉತ್ತಮ ನಿದರ್ಶನ ಎಂದು ಜಿಲ್ಲಾಧಿಕಾರಿ ಡಿ. ಎಸ್. ರಮೇಶ್ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಬುಧವಾರ ಡಾ|ಬಾಬು ಜಗಜೀವನರಾಂ ಭವನದಲ್ಲಿ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ಡಾ| ಬಾಬು ಜಗಜೀವನರಾಂ ಅವರ 110ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಡಾ| ಬಾಬು ಜಗಜೀವನರಾಂ ದೇಶಕ್ಕೆ ಸ್ವಾತಂತ್ರ ಬರುವ ಮುನ್ನವೇ ಮಂತ್ರಿಯಾಗಿ ಕೆಲಸ ಮಾಡಿದ ಮಹಾನ್ ಮುತ್ಸದ್ಧಿ ಎಂದರು. ಬಿಹಾರದ ಕುಗ್ರಾಮದಿಂದ ಬಂದ ಬಾಬೂಜಿ ಉತ್ತಮ ಶಿಕ್ಷಣ ಪಡೆದವರು. ಸುಮಾರು ಮೂರು ದಶಕಗಳ ಕಾಲ ವಿವಿಧ ಮಂತ್ರಿ ಹುದ್ದೆ ನಿರ್ವಹಿಸಿದ್ದರು. ಅವರು ಮಂತ್ರಿ- ನಾಯಕನಾಗಿ ಹೊರಹೊಮ್ಮಿದಾಗ ದಲಿತ ಅಥವಾ ಅಸ್ಪೃಶ್ಯ ಎಂಬ ಹಣೆಪಟ್ಟಿ ಹೊತ್ತಿರಲಿಲ್ಲ.
ಆ ಪದವನ್ನು ಅವರು ಎಂದಿಗೂ ಬಳಕೆ ಮಾಡುತ್ತಿರಲಿಲ್ಲ. ಸ್ವ ಸಾಮರ್ಥ್ಯದ ಮೇಲೆ ನಾಯಕನಾಗಿ ಹೊರಹೊಮ್ಮಿದ್ದ ಡಾ|ಬಾಬು ಜಗಜೀವನರಾಂ ಮಹಾನ್ ನಾಯಕ ಎಂದು ಅವರು ಬಣ್ಣಿಸಿದರು. ಸಮಾಜದ ವಿವಿಧ ಸ್ಥರಗಳಲ್ಲಿ ಸ್ಪರ್ಧೆ ಮಾಡಲು ಶಿಕ್ಷಣ ಬಹಳ ಮುಖ್ಯ. ಶಿಕ್ಷಣ ಇಂದು ಕಡ್ಡಾಯ ಹಕ್ಕಾಗಿದೆ. ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು.
ಎಲ್ಲರೂ ಜಾತಿಯ ಬಗ್ಗೆ ಹೇಳುವುದನ್ನು ನಿಲ್ಲಿಸಬೇಕು. ಆಗಲೇ ಜಾತಿ ನಿರ್ಮೂಲನೆ ಸಾಧ್ಯ. ಜಗಜೀವನ ರಾಂ ಅವರ ಸಾಮರ್ಥ್ಯದ ಮುಂದೆ ಜಾತಿ ಮತ್ತದರ ಇತರೆ ಮಾನದಂಡ ಪರಿಗಣನೆ ಆಗಲಿಲ್ಲ. ಸಾಮರ್ಥ್ಯದ ಮುಂದೆ ಎಲ್ಲವೂ ಗೌಣವಾಗುತ್ತದೆ ಎಂಬುದಕ್ಕೆ ಅವರು ಜ್ವಲಂತ ನಿದರ್ಶನ ಎಂದು ತಿಳಿಸಿದರು.
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ. ಎಚ್. ರಾಮಚಂದ್ರಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ಎಂ. ಹಾಲೇಶ್, ಆವರಗೆರೆ ಎಚ್.ಜಿ. ಉಮೇಶ್, ನಗರಸಭೆ ಮಾಜಿ ಸದಸ್ಯ ಎಸ್. ಮಲ್ಲಿಕಾರ್ಜುನ್, ಮುಖಂಡರಾದ ಬಿ. ಎಂ. ಈಶ್ವರಪ್ಪ, ಎನ್. ನೀಲಗಿರಿಯಪ್ಪ, ಹನುಮಂತಪ್ಪ, ಎಲ್.ಡಿ. ಗೋಣೆಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ಅಶ್ವತಿ,
ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಯಶೋಧಾ ಎಸ್. ವಂಟಿಗೋಡಿ, ನಗರಪಾಲಿಕೆ ಆಯುಕ್ತ ಬಿ. ಎಚ್. ನಾರಾಯಣಪ್ಪ, ಉಪ ಆಯುಕ್ತ ಜಿ.ಎಂ. ರವೀಂದ್ರ, ತಹಶೀಲ್ದಾರ್ ಸಂತೋಷ್‌ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಇತರರು ಇದ್ದರು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕುಮಾರ್ ಹನುಮಂತಪ್ಪ ಸ್ವಾಗತಿಸಿದರು.