ಹಳಿಯಾಳ: ನಾವೆಲ್ಲರು ಒಂದೆ, ನಮ್ಮೆಲ್ಲರ ನರಗಳಲ್ಲಿ ಹರಿಯುತ್ತಿರುವ ರಕ್ತವು ಒಂದೆ. ಹೀಗಿರುವಾಗ ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ಸ್ವಯಂ ಪ್ರೇರಿತನಾಗಿ ರಕ್ತದಾನ ಮಾಡಿದರೆ, ಮಾನವೀಯ ಸಮಾಜ ಕಾಣಲು ಸಾಧ್ಯ ಎಂದು ಹಳಿಯಾಳದ ಇಐಡಿ ಪ್ಯಾರಿ ಮುಖ್ಯಸ್ಥ ಜೆ. ವೆಂಕಟರಾವ್ ಅಭಿಪ್ರಾಯಪಟ್ಟರು.
ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್‌ನ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಪ್ಯಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಬೆಳಗಾವಿ ಕೆಎಲ್ಇ ಬ್ಲಿಡ್ ಬ್ಯಾಂಕ್ ವೈದ್ಯರಾದ ಡಾ| ಬಸವರಾಜ ದೇವಗಿ ಮಾತನಾಡಿ ರಕ್ತದಾನದಿಂದ ಆಗುವ ಉಪಯೋಗಗಳು ಮತ್ತು ರಕ್ತ ದಾನಿಯ ಅರ್ಹತೆಗಳ ಬಗ್ಗೆ ತಿಳಿಸಿದರು.
ಶಿಬಿರದಲ್ಲಿ ಇಐಡಿ ಪ್ಯಾರಿ (ಇಂಡಿಯಾ), ಹಳಿಯಾಳದ 56 ಸಿಬ್ಬಂದಿ ರಕ್ತದಾನ ಮಾಡಿದರು.
ಡಾ| ಜೆ.ಎ.ಅತ್ತಾರ್, ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ, ಪ್ರಧಾನ ವ್ಯವಸ್ಥಾಪಕ ರವೀಂದ್ರ ದೇಸಾಯಿ, ಸುನೀಲ ಅರಳಿಮಟ್ಟಿ, ಯೋಜನಾಧಿಕಾರಿ ಸಂತೋಷ ಪರೀಟ ಇದ್ದರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ ಕ್ಷೇತ್ರಾಧಿಕಾರಿ ವಿಷ್ಣು ಮಡಿವಾಳ, ಸಚೀನ ಬೇಣಚೆಕರ್, ಸಂತೋಷ ಸಿದ್ನೇಕೊಪ್ಪ, ನಾರಾಯಣ ರಾಂದೇವಾಡಿ ಮೊದಲಾದವರು ಭಾಗವಹಿಸಿದ್ದರು.