ಭಾಲ್ಕಿ: ದಶಕಗಳ ಹಿಂದೆ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ಸಮಸ್ಯೆ ಕಾಡುತ್ತಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸ್ವ-ಸಹಾಯ ಸಂಘದಲ್ಲಿ ಸಾಲ ಪಡೆದು ಉನ್ನತ ಶಿಕ್ಷಣ ಪಡೆಯಲು ಸಹಕಾರವಾಗುತ್ತದೆ ಎಂದು ಡಿಸಿಸಿ ಬ್ಯಾಂಕ್ ಡಿಜಿಎಂ ಅನೀಲಕುಮಾರ ಪಾಟೀಲ ಹೇಳಿದರು.
ಪಟ್ಟಣದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ದಿ| ಡಾ| ಗುರುಪಾದಪ್ಪ ನಾಗಮಾರಪಳ್ಳಿಯವರ ಜನ್ಮದಿನದ ನಿಮಿತ್ತ ನಡೆದ ಸ್ವ ಸಹಾಯ ಸಂಘದ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಕಳೆದ ಸಾಲಿಗೆ ಹೋಲಿಸಿದರೆ, ಈ ವರ್ಷ ಜಿಲ್ಲೆಯಲ್ಲಿ ಸ್ವ-ಸಹಾಯ ಸಂಘಗಳು, ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡುತ್ತಲಿವೆ. ತಾಯಂದಿರು ಸಂಘದಲ್ಲಿ ಸಾಲ ಪಡೆದು, ತಮ್ಮ ಮಕ್ಕಳಿಗೆ ಐಎಎಸ್, ಐಪಿಎಸ್, ಡಾಕ್ಟರ್, ಇಂಜಿನಿಯರ್ ನಂತಹ ಉನ್ನತ ಶಿಕ್ಷಣ ಕೊಡಿಸುತ್ತಿರುವುದು ಶ್ಲಾಘನೀಯವಾಗಿದೆ. ದಿವಂಗತ ಡಾ| ಗುರುಪಾದಪ್ಪ ನಾಗಮಾರಪಳ್ಳಿಯವರು ಹುಟ್ಟುಹಾಕಿರುವ ಸ್ವ ಸಹಾಯ ಸಂಘದಿಂದ ಪಡೆದ ಸಾಲವನ್ನು ಮಹಿಳೆಯರು ಗುಂಪು ಚಟುವಟಿಕೆಗೆ ಬಳಸಿಕೊಂಡು ವಿವಿಧ ನಮೂನೆಯ ವಸ್ತುಗಳನ್ನು ತಯಾರಿಸಿ ಹೆಚ್ಚಿನ ಆದಾಯ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಸಂಘದ ಸದಸ್ಯೆ ಜಗದೇವಿ.ಎಂ ಮತ್ತು ಪ್ರಿಯಾ ದೇಶಮುಖ ಮಾತನಾಡಿದರು. ಕಾರ್ಯಕ್ರಮದ್ಲಲಿ ನಾಗೇಶ, ಶಾಂತಕುಮಾರ ಬಿರಾದಾರ, ಶರಣು ವಾಡೆಕರ, ಸಂಗಮೇಶ ಹೂಗಾರ, ಪ್ರತಾಪಸಿಂಗ್ ಠಾಕೂರ, ವಿಜಯಕುಮಾರ ಜಾಧವ ಉಪಸ್ಥಿತರಿದ್ದರು.