Advertisement

ಜೈಲು ಹಕ್ಕಿಗಳಿಗೆ ಸ್ವಉದ್ಯೋಗ ತರಬೇತಿ

10:26 AM Jul 15, 2019 | Suhan S |

ಹಾವೇರಿ: ಜೈಲು ಬಂಧಿಗಳು ಬಿಡುಗಡೆಯಾಗಿ ಹೊರಹೋದಾಗ ಪುನಃ ಅಪರಾಧ ಎಸಗಿ ಜೈಲು ಪಾಲಾಗುವುದನ್ನು ತಪ್ಪಿಸಲು ವಿಜಯ ಬ್ಯಾಂಕ್‌ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಹೈನುಗಾರಿಕೆ, ಕಂಪ್ಯೂಟರ್‌ ತರಬೇತಿ, ಪಾನಿಪುರಿ, ಗೋಬಿ ಮಂಚೂರಿ ಸೇರಿದಂತೆ ಪಾಸ್ಟ್‌ ಫುಡ್‌ ತಯಾರಿಕೆಗೆ ಬೇಕಾದಂತಹ ವೃತ್ತಿ ನೈಪುಣ್ಯತೆ ತರಬೇತಿಗಳನ್ನು ನೀಡಲು ಜಿಲ್ಲಾ ಸಂದರ್ಶಕ ಮಂಡಳಿ ತೀರ್ಮಾನಿಸಿತು.

Advertisement

ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲೀಲಾವತಿ ಅಧ್ಯಕ್ಷತೆಯಲ್ಲಿ ನಡೆದ ಕಾರಾಗೃಹದ ಎರಡನೇ ಸಂದರ್ಶಕ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಜಿಲ್ಲಾ ಕಾರಾಗೃಹದಲ್ಲಿ ಬಂಧಿಗಳ ಜೀವನ ಸುಧಾರಣೆಗೆ, ಸ್ವಾವಲಂಬಿ ಬದುಕು ರೂಪಿಸಿಕೊಡಲು ಸ್ವ ಉದ್ಯೋಗ, ಹೈನುಗಾರಿಕೆ ಹಾಗೂ ಕೃಷಿ, ತೋಟಗಾರಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅನುಕೂಲ ಕಲ್ಪಿಸಬೇಕು. ಬಂಧಿಗಳ ಆರೋಗ್ಯದ ಉದ್ದೇಶದಿಂದ ನಿರಂತರವಾದ ತಪಾಸಣೆ ನಡೆಸಲು ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಆಸ್ಪತ್ರೆಯಿಂದ ವೈದ್ಯರ ನಿಯೋಜನೆ ಜತೆಗೆ ಕಾರಾಗೃಹಕ್ಕೆ ಪೂರ್ಣ ಪ್ರಮಾಣದ ವೈದ್ಯರ ನೇಮಕ ಹಾಗೂ ಕಿರು ಆರೋಗ್ಯಾಲಯ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು.

ಕಾರಾಗೃಹದ ವ್ಯಾಪ್ತಿಯಲ್ಲಿ 12 ಎಕರೆ ಕೃಷಿ ಜಮೀನು ಇದ್ದು ಇದರಲ್ಲಿ 6.24 ಎಕರೆಯಲ್ಲಿ ಕೃಷಿ, ತೋಟಗಾರಿಕೆ ಕೈಗೊಂಡು ಈಗಾಗಲೇ 3.50 ಲಕ್ಷ ರೂ. ಆದಾಯವನ್ನು ಸರ್ಕಾರಕ್ಕೆ ಜಮೆ ಮಾಡಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರವನ್ನು ವಿಸ್ತರಿಸಿ ಬಂಧಿಗಳಿಗೆ ಕೃಷಿ, ತೋಟಗಾರಿಕೆ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿ ಉತ್ತಮ ಬದುಕು ರೂಪಿಸಿಕೊಳ್ಳಲು ಕ್ಷೇತ್ರ ವಿಸ್ತರಣೆ ಕಾರ್ಯಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೈಜೋಡಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.

ಬಂಧಿಗಳ ಶೈಕ್ಷಣಿಕ ಮತ್ತು ಹಾಗೂ ದೈಹಿಕ ಬೆಳವಣಿಗೆಗೆ ಅನುಕೂಲವಾಗುವಂತೆ ವಾರಕ್ಕೆ ಮ್ಮೆ ಯೋಗ ಶಿಕ್ಷಕರು ಹಾಗೂ ಅಕ್ಷರ ಕಲಿಕೆಗೆ ಎರವಲು ಸೇವೆ ಅಥವಾ ಗೌರವಧನದ ಆಧಾರದ ಮೇಲೆ ಶಿಕ್ಷಕರನ್ನು ನೇಮಿಸಲು ತೀರ್ಮಾನಿಸಲಾಯಿತು. ಇದರೊಂದಿಗೆ ಎಸ್‌ಎಲ್ಎಲ್ಸಿ ಪರೀಕ್ಷೆಗೆ ಬಾಹ್ಯವಾಗಿ ಹಾಜರಾಗುವ ಬಂಧಿಗಳಿಗೆ ಶಿಕ್ಷಣ ಇಲಾಖೆಯಿಂದ ಅಗತ್ಯ ಮಾರ್ಗದರ್ಶನ ಹಾಗೂ ಬೋಧನೆ ಮಾಡಲು ವ್ಯವಸ್ಥೆ ಕೈಗೊಳ್ಳಲು ನಿರ್ಧರಿಸಲಾಯಿತು.

Advertisement

ಕೈದಿಗಳಿಗೆ ನಿಯಮಿತವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗ್ರಂಥಾಲಯದಲ್ಲಿ ಪುಸ್ತಕಗಳ ಸಂಖ್ಯೆ ಹಾಗೂ ಪಿಠೊಪಕರಣಗಳ ವ್ಯವಸ್ಥೆ ಕುರಿತಂತೆ ಕ್ರಮಕೈಗೊಳ್ಳಲು ಗ್ರಂಥಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ನಿರ್ದೇಶನ ನೀಡಲು ತೀರ್ಮಾನಿಸಲಾಯಿತು.

ಕೇಂದ್ರ ಕಾರಾಗೃಹದಲ್ಲಿ ಸಿಬ್ಬಂದಿಗೆ ವಸತಿಗೃಹ ಒದಗಿಸಲು ತಾತ್ಕಾಲಿಕವಾಗಿ ಕೆರಿಮತ್ತಿಹಳ್ಳಿಯಲ್ಲಿರುವ ಪೊಲೀಸ್‌ ವಸತಿ ಗೃಹಗಳನ್ನು ಬಳಸಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು ಹಾಗೂ ಶಿಗ್ಗಾವಿ, ಹಾನಗಲ್ಲ, ರಾಣಿಬೆನ್ನೂರಿನಲ್ಲಿ ಉಪ ಕಾರಾಗೃಹ ನಿರ್ಮಾಣಕ್ಕೆ ಅಗತ್ಯ ನಿವೇಶನ ಮಂಜೂರಾತಿ ಕಟ್ಟಡ ನಿರ್ಮಾಣಕ್ಕೆ ಆಯಾ ತಹಶೀಲ್ದಾರಗಳಿಂದ ಪ್ರಸ್ತಾವನೆ ತರಿಸಿಕೊಳ್ಳಲು ತೀರ್ಮಾನಿಸಲಾಯಿತು.

ಕಾರಾಗೃಹದಲ್ಲಿ ಹಸು ಸಾಗಾಣಿಕೆಗೆ ಶೆಡ್‌ಗಳ ನಿರ್ಮಾಣ, ತಡೆಗೋಡೆ ನಿರ್ಮಾಣ ಹಾಗೂ ಹೆಚ್ಚುವರಿ ಬ್ಯಾರಾಕುಗಳ ನಿರ್ಮಾಣ ಹಾಗೂ ಲಿಪಿಕಿ ಸಿಬ್ಬಂದಿ ನೇಮಕ ಕುರಿತಂತೆ ಸಭೆಗೆ ಮನವಿ ಮಾಡಿಕೊಂಡರು.

ಹೊಸದಾಗಿ ಕಾರಾಗೃಹ ಆವರಣದಲ್ಲಿ ಸ್ಥಾಪಿಸಲಾದ ಹೈಮಾಸ್ಟ್‌ ದೀಪವನ್ನು ಜಿಪಂ ಸಿಇಒ ಕೆ.ಲೀಲಾವತಿ ಉದ್ಘಾಟಿಸಿದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕೆ.ಶ್ರೀವಿದ್ಯಾ, ಅಪರ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜು ಬಾಲದಂಡಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ನಾಗರಾಜ ನಾಯಕ, ತಾಲೂಕು ಆರೋಗ್ಯಾಧಿಕಾರಿ ಡಾ| ಪ್ರಭಾಕರ ಕುಂದೂರ, ಅಕ್ಷರ ದಾಸೋಹ ಅಧಿಕಾರಿ ಅಡಿಗ, ಜೋಶಿ, ವಾರ್ತಾಧಿಕಾರಿ ಬಿ.ಆರ್‌.ರಂಗನಾಥ್‌, ಜೈಲರ್‌ ಶಿವಾಜಿ ಲಮಾಣಿ, ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಪ್ರಶಾಂತ, ಅಕಾರೇತರ ಸದಸ್ಯರಾದ ಸತೀಶ ಕುಲಕರ್ಣಿ, ರೇಣುಕಾ ಗುಡಿಮನಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next