Advertisement

ಜಲ ಸ್ವಾವಲಂಬಿ ಜಾಗೃತಿಗೆ ಮಹತ್ವದ ಹೆಜ್ಜೆ..

02:43 PM Feb 13, 2017 | Team Udayavani |

ಹುಬ್ಬಳ್ಳಿ: ಜಲ ಸ್ವಾವಲಂಬನೆ, ಜಲ ಮೂಲಗಳ ಸಂರಕ್ಷಣೆ ಹಾಗೂ ಪುನುರುಜ್ಜೀವನ, ಶುದ್ಧ ಕುಡಿಯುವ ನೀರು ಉದ್ದೇಶದೊಂದಿಗೆ ರಾಷ್ಟ್ರಮಟ್ಟದಲ್ಲಿ ಕೇಂದ್ರ ಸರಕಾರ ಆರಂಭಿಸಿರುವ “ಜಲಕ್ರಾಂತಿ ಅಭಿಯಾನ’ ಕುರಿತ ಜಾಗೃತಿಗೆ ರಾಜ್ಯದ ಎರಡನೇ ಯತ್ನವಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಮಹತ್ವದ ಹೆಜ್ಜೆ ಇರಿಸಿದೆ. 

Advertisement

ನೀರಿನ ಮಹತ್ವ ಬಿಂಬಿಸುವುದು, ಜಲಮೂಲಗಳ ಸಂರಕ್ಷಣೆ ಹಾಗೂ ಪುನರುಜ್ಜೀವನದ ಜತೆಗೆ ಜನಜಾಗೃತಿ ಉದ್ದೇಶದೊಂದಿಗೆ ಕೇಂದ್ರ ಸರಕಾರ ದೇಶದ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಎರಡು ಗ್ರಾಮಗಳನ್ನು ಜಲಗ್ರಾಮಗಳಾಗಿ ಪರಿವರ್ತಿಸಲು ಮುಂದಾಗಿದೆ. ಇದಕ್ಕೆ ಪೂರಕವಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಕಾರ್ಯಾಗಾರ ಮೂಲಕ ಜಲ ಸ್ವಾವಲಂಬಿ ಮನವರಿಕೆಗೆ ಮುಂದಾಗಿದೆ. 

ಫೆ.13ರಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಕಾರ್ಯಾಗಾರದಲ್ಲಿ ಸುಮಾರು 200 ಹೆಚ್ಚು ರೈತರು, ಜಲಗ್ರಾಮಕ್ಕೆ ಆಯ್ಕೆಯಾದ ಗ್ರಾಪಂ ಅಧ್ಯಕ್ಷರು, ಜಿಲ್ಲಾಮಟ್ಟದ ಅಧಿಕಾರಿಗಳು, ಶಿಕ್ಷಣ ತಜ್ಞರು, ಜಲಸಂಪನ್ಮೂಲ ತಜ್ಞರು ಪಾಲ್ಗೊಳ್ಳಲಿದ್ದಾರೆ. ಜಾಗತಿಕ, ದೇಶ ಹಾಗೂ ರಾಜ್ಯದ ನೀರಿನ ಸ್ಥಿತಿಗತಿ, ಸವಾಲು, ಅವಕಾಶ ಹಾಗೂ ಪರಿಹಾರ, ನೀರು ಬಳಕೆ ಮತ್ತು ನಿರ್ವಹಣೆ ಕುರಿತಾಗಿ ಚಿಂತನ-ಮಂಥನ ನಡೆಯಲಿದೆ. 

ಏನಿದು ಜಲಕ್ರಾಂತಿ ಅಭಿಯಾನ?: ಜಾಗತಿಕ ಮಟ್ಟದಲ್ಲಿ ಜಲ ಸಂಕಷ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಜಲ ಮೂಲಗಳ ಸಂರಕ್ಷಣೆ, ನೀರಿನ ಮಿತಬಳಕೆ, ಜಲ ಸ್ವಾವಲಂಬನೆ ನಿಟ್ಟಿನಲ್ಲಿ ಜಲ ಕ್ರಾಂತಿ ಅಭಿಯಾನ ಕೈಗೊಂಡಿದೆ. ಜಲ ಗ್ರಾಮ ಯೋಜನೆ, ಮಾದರಿ ಜಲಾನಯನ ಪ್ರದೇಶ, ಮಾಲಿನ್ಯ ಇಳಿಸುವಿಕೆ, ಸಾಮೂಹಿಕ ಜಾಗೃತಿ ಕಾಯಕ್ರಮ, ಇತರೆ ಚಟುವಟಿಕೆಗಳ ಹೀಗೆ ಪ್ರಮುಖ ಐದು ಘಟಕಗಳನ್ನಾಗಿ ವಿಗಂಡಿಸಿ ಯೋಜನೆ ಜಾರಿಗೊಳಿಸಿದೆ. 

ದೇಶದ ಪ್ರತಿ ಜಿಲ್ಲೆಯ ಬರಪೀಡಿತ ಅಥವಾ ನೀರಿನ ತೀವ್ರ ಕೊರತೆ ಇರುವ ಎರಡು ಗ್ರಾಮಗಳನ್ನು ಆಯ್ಕೆ ಮಾಡಲಾಗುತ್ತಿದೆ. ಜಲ ಭದ್ರತೆ, ನೀರು ಬಳಕೆ ಹಾಗೂ ನಿರ್ವಹಣೆಯ ಜತೆಗೆ ಸುಸ್ಥಿರ ನೀರಿನ ಬಳಕೆಯ ಜಾಗೃತಿ ಮೂಡಿಸಲಾಗುತ್ತದೆ. 

Advertisement

ಜಿಲ್ಲಾಮಟ್ಟದ ಕಮಿಟಿ ಜಲ ಗ್ರಾಮ ಯೋಜನೆ ಆಯ್ಕೆ ಮಾಡುತ್ತಿದ್ದು, ಬ್ಲಾಕ್‌ ಮಟ್ಟದ ಕಮಿಟಿ ಯೋಜನೆ ಅನುಷ್ಠಾನ ಮತ್ತು ನಿರ್ವಹಣೆ ಕಾರ್ಯ ಮಾಡಲಿದೆ. ಗ್ರಾಮಮಟ್ಟದ ಕಮಿಟಿಯಲ್ಲಿ ಗ್ರಾಪಂ ಅಧ್ಯಕ್ಷರ ನೇತೃತ್ವದಲ್ಲಿ ಕೃಷಿ, ತೋಟಗಾರಿಕೆ, ಜಲಾನಯನ,ಸರಕಾರೇತರ ಸಂಸ್ಥೆಗಳು, ಮಹಿಳಾ ಸ್ವ ಸಹಾಯ ಗುಂಪುಗಳು, ಪಂಚಾಯತ್‌ ರಾಜ್‌ ಸಂಸ್ಥೆಗಳು, ಶಾಲೆ ಮುಖ್ಯೋಪಾಧ್ಯಾಯರು ಇಲ್ಲವೆ ಪ್ರಾಂಶುಪಾಲರು, ಒಬ್ಬರು ಮಹಿಳಾ ಸದಸ್ಯರಾಗಿರುತ್ತಾರೆ. 

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next