ಅನೇಕರು ತಮ್ಮ ಶಕ್ತಿಯ ಪರಿಮಿತಿಯನ್ನು ಅರಿಯದೇ ಆಸೆಗಳನ್ನು ಕಟ್ಟಿಕೊಳ್ಳುತ್ತಾರೆ. ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಆಮೇಲೆ ತೃಪ್ತಿದಾಯಕ ಫಲ ಸಿಗದೇ, ಚಿಂತೆಗೊಳಗಾಗಿ, ಆರೋಗ್ಯ ಕೆಡಿಸಿಕೊಳ್ಳುತ್ತಾರೆ. ಪ್ರತಿಯೊಬ್ಬನಲ್ಲೂ ಒಂದು ವಿಶೇಷ ಶಕ್ತಿ ಇರುತ್ತದೆ. ಯಾವುದರಲ್ಲಿ ತನಗೆ ಶಕ್ತಿಯಿದೆ, ಎಷ್ಟು ಶಕ್ತಿ ಇದೆ ಎಂದು ನೋಡಿಕೊಂಡು ಮುಂದುವರಿದರೆ ತೃಪ್ತಿದಾಯಕ ಸಾಧನೆಯೂ ಆಗುತ್ತದೆ, ಆರೋಗ್ಯವೂ ಕೆಡುವುದಿಲ್ಲ.
ಭಗವಂತನ ಸೃಷ್ಟಿಯಲ್ಲಿ ವಿದ್ಯೆ- ಅವಿದ್ಯೆ ಎರಡೂ ಇದೆ. ವಿದ್ಯೆ ಎಂದರೆ, ಅರಿವು. ಅವಿದ್ಯೆ ಎಂದರೆ, ಆ ಅರಿವಿಗೆ ಬರುವ ಸಂಕೋಚ. ಅರಿವೇ ಸಂಕೋಚಕ್ಕೊಳಪಟ್ಟಾಗ ಅವಿದ್ಯೆ ಎನಿಸುತ್ತದೆ. ತನ್ನ ಅವಿದ್ಯೆಯ ಬಗ್ಗೆ ಅರಿವು ಬಂದರೆ, ಅದುವೇ ವಿದ್ಯೆ. ಅವಿದ್ಯೆಯ ಅರಿವು ವಿದ್ಯೆ. ವಿದ್ಯೆಗೆ ಸಂಕೋಚವುಂಟಾದರೆ ಅವಿದ್ಯೆ. ತನ್ನ ಶಕ್ತಿಯ ಬಗ್ಗೆ ತಪ್ಪು ಗ್ರಹಿಕೆ ಮಾಡಿಕೊಂಡರೆ ಅದು ಅವಿದ್ಯೆ. ತನ್ನ ಶಕ್ತಿ ಅಲ್ಪವೇ ಆಗಿದ್ದರೂ ಅದರ ಪರಿಮಿತಿಯನ್ನು ಸರಿಯಾಗಿ ಗ್ರಹಿಸುವಿಕೆಯೇ ಸರಿಯಾದ ಅರಿವು. ಆದ್ದರಿಂದ ಅದು ವಿದ್ಯೆ.
ಪರಮಾತ್ಮನ ಕುರಿತ ಅರಿವು ವಿದ್ಯೆ. ಆತನ ಬಗ್ಗೆ ತಿಳಿವಳಿಕೆ ಅಭಾವ ಇದ್ದರೆ, ಅವಿದ್ಯೆ. ಪರಮಾತ್ಮನನ್ನು ಕುರಿತು ವಿವಿಧ ಹಂತದಲ್ಲಿ ಸಾಕ್ಷಾತ್ಕಾರಗಳಿರುತ್ತವೆ. ಅವೆಲ್ಲವೂ ವಿದ್ಯೆಯ ಲೆಕ್ಕಕ್ಕೆ ಬರುತ್ತವೆ. ಕಟ್ಟಕಡೆಗೆ ಬರುವ ಅದ್ವಿತೀಯ- ಸಚ್ಚಿದಾನಂದ- ಪರಮಾತ್ಮನ ಸಾಕ್ಷಾತ್ಕಾರವೇ ವಿದ್ಯೆ. ಇದು ವೇದಾಂತಿಗಳ ಅಭಿಮತ. ಆ ಸಾಕ್ಷಾತ್ಕಾರದ ಪೂರ್ವಭಾವಿಯಾಗಿ ಬರುವ ವಿವಿಧ ಹಂತದ ಸಾಕ್ಷಾತ್ಕಾರಗಳು ಇವೆ. ಕಟ್ಟ ಕಡೆಯ ಸಾಕ್ಷಾತ್ಕಾರಕ್ಕೆ ದಾರಿಯಾಗುವುದು ವಿದ್ಯೆ. ವಿವಿಧ ಹಂತದ ಸಾಕ್ಷಾತ್ಕಾರಗಳು ಸಾಧಕನಲ್ಲಿ ಶಕ್ತಿ ತುಂಬುತ್ತವೆ. ಅವನಲ್ಲಿ ಉತ್ಸಾಹ, ಏಕಾಗ್ರತೆ ಮುಂತಾದ ಶಕ್ತಿಗಳು ಉಂಟಾಗುವಂತೆ ಮಾಡುತ್ತವೆ.
ಪರಮಾತ್ಮನಿಗೆ ಅಥವಾ ಅವನ ಬೇರೆ ರೂಪಗಳಾಗಿರುವ ದೇವತೆಗಳಿಗೆ ವಿದ್ಯೆ- ಅವಿದ್ಯೆ ಹಿಡಿತದಲ್ಲಿ ಇರುತ್ತವೆ. ಪರಮಾತ್ಮನ ಶಕ್ತಿಗಳಲ್ಲಿ ಧರ್ಮ- ಅಧರ್ಮ, ಜ್ಞಾನ- ಅಜ್ಞಾನಗಳು, ವೈರಾಗ್ಯ- ಅವೈರಾಗ್ಯಗಳು, ಐಶ್ವರ್ಯ- ಅನೈಶ್ವರ್ಯಗಳು ಇರುತ್ತವೆ. ಅದೇ ರೀತಿ, ತಪಸ್ವಿಗಳಾದ ಮಹಾತ್ಮರಿಗೆ ವಿದ್ಯೆ- ಅವಿದ್ಯೆಗಳ ಮೇಲೆ ಹಿಡಿತ ಇರುತ್ತದೆ. ಅವಿದ್ಯೆ ಶಕ್ತಿ ಕುಂಠಿತಗೊಳಿಸಿದರೆ, ವಿದ್ಯೆ ಶಕ್ತಿಯನ್ನು ತುಂಬುತ್ತದೆ. ತನ್ನ ಸಾಮರ್ಥ್ಯವನ್ನು ಪ್ರಾಮಾಣಿಕವಾಗಿ ಅರಿತವನು ಒಳ್ಳೆಯ ಕೆಲಸಗಾರ.
– ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ, ಶ್ರೀ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಸೋಂದಾ, ಶಿರಸಿ