ಮಣಿಪಾಲ: ಮಣಿಪಾಲ್ ಎನರ್ಜಿ ಆ್ಯಂಡ್ ಇನ್ಫ್ರಾಟೆಕ್ ಲಿಮಿಟೆಡ್ (ಎಂಇಐಎಲ್) ಗುಣಮಟ್ಟ ಮತ್ತು ಶ್ರೇಷ್ಠತೆಗಾಗಿ ಎಂಎಸ್‌ಎಂಇ ವಿಭಾಗದಲ್ಲಿ ಪ್ರತಿಷ್ಠಿತ “ಇಂಡಿಯಾ 5000 ಅವಾರ್ಡ್ಸ್’ ಪುರಸ್ಕಾರಕ್ಕೆ ಆಯ್ಕೆಯಾಗಿದೆ.
ಈ ಮಾನ್ಯತೆಯನ್ನು ಬೆಂಚ್‌ಮಾರ್ಕ್ ಟ್ರಸ್ಟ್ ಸಂಸ್ಥೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಬೆಂಬಲದಿಂದ ಆಡಿಟ್ ಪಾರ್ಟ್‌ನರ್ ಟಿಕ್ಯೂವಿ ನಡೆಸಿದ ಮೌಲ್ಯಮಾಪನದನ್ವಯ ನೀಡಿದೆ. ಎಂಇಐಎಲ್ ಸಂಸ್ಥೆಯ ಗ್ರಾಹಕತೃಪ್ತಿ, ಸೇವೆ ಮತ್ತು ನಿರ್ವಹಣೆ ಮೂಲಕ ಸಾಮಾಜಿಕ ಪರಿಣಾಮ, 2023-24ನೇ ವಿತ್ತವರ್ಷದಲ್ಲಿ ಸಮಗ್ರ ವಿಕಾಸವನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಡಿ. 21ರಂದು ನವಮುಂಬಯಿಯಲ್ಲಿ ಹಿರಿಯ ಕೈಗಾರಿಕೋದ್ಯಮಿಗಳ ಸಮ್ಮುಖ ನಡೆಯಲಿದೆ.
ಸಂಸ್ಥೆಯ ಒಟ್ಟು ವಾರ್ಷಿಕ ಬೆಳವಣಿಗೆ ಪ್ರಮಾಣ ಕಳೆದ ಮೂರು ವರ್ಷಗಳಿಗಿಂತ ಶೇ.48ರಷ್ಟು ಹೆಚ್ಚಿಗೆ ಇದೆ. ದೇಶಾದ್ಯಂತ ಸಾರ್ವಜನಿಕ ಮೂಲಭೂತ ಸೌಕರ್ಯ ಯೋಜನೆಯ ಅನುಷ್ಠಾನದಡಿ ಗಣನೀಯ ಉದ್ಯೋಗಸೃಜನೆಯನ್ನು ಮಾಡಿದೆ. ವೇಗವಾಗಿ ಬೆಳೆಯುತ್ತಿರುವ ಹಣಕಾಸು ಬೆಳವಣಿಗೆ ಮತ್ತು ಸೌಹಾರ್ದ ಸಮುದಾಯಕ್ಕೆ ಸೃದೃಢ ಮೂಲಭೂತ ಸೌಕರ್ಯ ಅಗತ್ಯವಾಗಿದೆ ಎಂಬ ಮಣಿಪಾಲ ಸಮೂಹ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಗೌತಮ್ ಪೈಯವರ ತಣ್ತೀದಂತೆ ಸಂಸ್ಥೆಯು ಮುನ್ನಡೆಯುತ್ತಿದೆ.
ಇಂಧನ ವಿತರಣೆ, ಸಾಗಣೆ, ಸಿವಿಲ್ ನಿರ್ಮಾಣದಂತಹ ಪ್ರತಿಷ್ಠಿತ ಸರಕಾರಿ ಯೋಜನೆಗಳ ಅನುಷ್ಠಾನಕ್ಕಾಗಿ ಸಂಸ್ಥೆ ಪುರಸ್ಕೃತವಾಗಿದೆ. ನೀರಾವರಿ ಯೋಜನೆ, ಜಲ ಮತ್ತು ಪರಿಸರ ಯೋಜನೆಗಳು, ರಸ್ತೆ ಮತ್ತು ಸಾರಿಗೆ ಯೋಜನೆಗಳು, ಅಂತಾರಾಷ್ಟ್ರೀಯ ವ್ಯವಹಾರಗಳು ನಮ್ಮ ಮುಂದಿನ ದೀರ್ಘ ಕಾಲೀನ ಯೋಜನೆಗಳಾಗಿವೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಮತ್ತು ಸಿಇಒ ಸಾಗರ್ ಮುಖೋಪಾಧ್ಯಾಯ ಹೇಳಿದ್ದಾರೆ.
ಪ್ರಶಸ್ತಿಯು ತಂಡದ ಕಠಿನ ಪರಿಶ್ರಮ, ವೆಂಡರ್ ನೆಟ್‌ವರ್ಕ್ ಪ್ರೋತ್ಸಾಹ, ಗ್ರಾಹಕರ ಬೆಂಬಲ, ಕೆನರಾ ಬ್ಯಾಂಕ್, ಕೋಟಕ್ ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳ ಸಹಕಾರದ ದ್ಯೋತಕವಾಗಿದೆ ಎಂದು ಸಾಗರ್ ಮುಖೋಪಾಧ್ಯಾಯ ತಿಳಿಸಿದ್ದಾರೆ.
ಇಲೆಕ್ಟ್ರಿಕಲ್, ಇನ್‌ಸ್ಟ್ರೆಮೆಂಟೇಶನ್, ಪವರ್ ಯುಟಿಲಿಟೀಸ್, ಕೈಗಾರಿಕಾ ಘಟಕ, ಪೆಟ್ರೋಕೆಮಿಕಲ್ಸ್, ರೈಲ್ವೇ, ಸೋಲಾರ್, ಮೂಲಭೂತ ಸೌಕರ್ಯ ಯೋಜನೆಗಳು ಹೀಗೆ ವಿಭಿನ್ನ ಯೋಜನೆಗಳನ್ನು ಏಕಗವಾಕ್ಷಿ ಸೌಲಭ್ಯದ ಮೂಲಕ ಸಂಸ್ಥೆ ನಿರ್ವಹಿಸುತ್ತಿದೆ ಎಂದು ಪ್ರಕಟನೆ ತಿಳಿಸಿದೆ.