ಮಾವಿನಮರದಲ್ಲಿ ಹೂ ಬಿಡಲು ಆರಂಭವಾಗುತ್ತಿದ್ದಂತೆಯೇ ತೀರಿ ಹೋದ ಅಜ್ಜಿಯ ನೆನಪು ಉಮ್ಮಳಿಸಿ ಬರುತ್ತದೆ. ಆಕೆ ಹಿಡಿದ ಹಠದಿಂದಲೇ ಇಹಲೋಕಕ್ಕೆ ವಿದಾಯ ಹೇಳಿದ್ದು ಮಾವಿನ ಹಣ್ಣಿನ ಸುಗ್ಗಿಯಲ್ಲಿ ನಿಜ. ಆದರೆ, ಆಕೆ ನಮ್ಮನ್ನು ಅಗಲಿದ ಕಾರಣವನ್ನು ನೆನೆದರೆ ಮನಸ್ಸು ಮುದುಡುತ್ತದೆ. ಸಾವಿಗೆ ಸಾವಿರ ದಾರಿ ಎನ್ನುವಂತೆ ಒಂದು ಸಾವಿನ ಹಿಂದೆ ಚಿತ್ರಧಿ-ವಿಚಿತ್ರವಾದ ಕಾರಣಗಳಿರುತ್ತವೆ. ಆ ಸಾವಿಗೆ ವಿಧಿಯನ್ನು ಗುರಿ ಮಾಡಿ “ಅಪಘಾತ ನೆಪ ಮಾತ್ರ, ವಿಧಿ ಅವನನ್ನು ಎಳೆಸುತ್ತಿತ್ತು’ ಎನ್ನುತ್ತೇವೆ. “ಊರು ಹೋಗು ಕಾಡು ಬಾ’ ಎನ್ನುವವರ ಸಾವಿನಿಂದೇನೂ ಮನಸ್ಸು ಹಳಹಳಿಸುವುದಿಲ್ಲ. ಆದರೆ, ಸಾವು ಬರಬಾರದ ವಯಸ್ಸಿನಲ್ಲಿ ಬಂದು ಗಿಡುಗ ಕಚ್ಚಿಕೊಂಡು ಹೋದಂತೆ ಈಗ ಇತ್ತು, ಇನ್ನಿಲ್ಲ ಎಂಬಂತಾದರೆ ನಷ್ಟದ ಜೊತೆಗೆ ಕಷ್ಟವೂ ಸೇರಿ ಮನಸ್ಸನ್ನು ಹಿಂಡಿ ಹಿಪ್ಪೆಯನ್ನಾಗಿಸುತ್ತದೆ. ಎಷ್ಟೋ ದಿನಗಳವರೆಗೆ ಅಗಲಿ ಹೋದವರನ್ನು ನೆನೆದು ನಿಟ್ಟುಸಿರನ್ನು ಹಾಕುವಂತೆ ಮಾಡುತ್ತದೆ.
ಅಜ್ಜಿ ಹುಟ್ಟು ಹಠಮಾರಿ ಸ್ವಭಾವದವಳು. ಹಾಗೆಂದು ಅವಳ ಅಕ್ಕ ಹೇಳುತ್ತಿದ್ದ ನೆನಪು. ಚಿಕ್ಕಂದಿನಲ್ಲಿ ಅವರಿಬ್ಬರೂ ಆಟವಾಡುವಾಗ ಗೊಂಬೆಯೊಂದರ ಸಲುವಾಗಿ ಒಮ್ಮೆ ಜಗಳವಾಯಿತಂತೆ. ತನಗಿಲ್ಲದ ಗೊಂಬೆ ಅಕ್ಕನಿಗೇಕೆಂದು ತನ್ನ ಅಕ್ಕನ ಕೈಯಲ್ಲಿದ್ದ ಗೊಂಬೆಯನ್ನು ಕಿತ್ತುಕೊಂಡು ಅದರ ಕೈಕಾಲುಗಳನ್ನು ಲಟಲಟನೆ ಮುರಿದು ರುಂಡ-ಮುಂಡವನ್ನು ಅಲ್ಲಿಯೇ ಇದ್ದ ಬಾವಿಗೆ ಎಸೆದದ್ದನ್ನು ದೊಡ್ಡಜ್ಜಿ ಹೇಳುತ್ತ ತನ್ನ ಬೊಚ್ಚು ಬಾಯನ್ನಗಲಿಸಿ ನಗುತ್ತಿತ್ತು. ಮೊಮ್ಮಕ್ಕಳನ್ನು ಕಂಡಿದ್ದರೂ ಅಜ್ಜಿಯ ಹಠದಲ್ಲಿ ನೂರು ಗ್ರಾಂನಷ್ಟೂ ಕಡಿಮೆಯಾಗಿರಲಿಲ್ಲ. ನಮ್ಮೊಡನೆಯೂ ಕೂಡ ಚಿಕ್ಕ ಮಕ್ಕಳಿಗೆ ಸರಿಸಮನಾಗಿಯೇ ಜಗಳವಾಡುತ್ತಿದ್ದಳು. ವಾರಾನುವಾರಗಟ್ಟಲೆ ಮಾತು ಬಿಟ್ಟು ಬಿಮ್ಮನೆ ಇರುತ್ತಿದ್ದಳು. ಎಂಟು ವರ್ಷಕ್ಕೇ ಬಾಸಿಂಗ ಬಲವನ್ನು ಕಂಡಿದ್ದ ಆಕೆ ಅಜ್ಜನೊಡನೆ ಸತತ ನಾಲ್ಕು ವರ್ಷಗಳ ಕಾಲ ಮಾತು ಬಿಟ್ಟವಳು. ತನ್ನ ಹಠದ ಕುರಿತು ಹೆಮ್ಮೆಯಿಂದ ಸರಿಜೋಡಿಯವರೊಂದಿಗೆ ಹೇಳಿಕೊಳ್ಳುತ್ತಿದ್ದಳು. “ಮಾತನಾಡದೇ ನಾಲ್ಕು ಮಕ್ಕಳನ್ನು ಹೇಗೆ ಹೆತ್ತೆಯಮ್ಮಾ?’ ಎಂದು ಅವಳ ವಾರಿಗೆಯವರು ಕಿಚಾಯಿಸುತ್ತ ಗೊಳ್ಳೆಂದು ನಗುತ್ತಿದ್ದರು. ಆಗ ಚಿಕ್ಕವರಾಗಿದ್ದ ನಾವು ಮಾತನಾಡದಿದ್ದರೆ ಮಕ್ಕಳೇ ಆಗುವುದಿಲ್ಲ ಎಂಬ ಗುಟ್ಟನ್ನು ನಮ್ಮ ಓರಗೆಯವರಲ್ಲಿ ಕಿವಿಯಿಂದ ಕಿವಿಗೆ ದಾಟಿಸುತ್ತಿ¨ªೆವು.
ಸಂಜೆಯ ವೇಳೆಗೆ ಗುಡಿ-ಗುಂಡಾರಗಳಿಗೆ ಎಡತಾಕುತ್ತಿದ್ದ ಅಜ್ಜಿ ಅಲ್ಲಿ ನೆರೆದಿರುತ್ತಿದ್ದ ತನ್ನ ಚಾಟಿಂಗ್ ಮೇಟ್ಸ್‌ಗಳೊಂದಿಗೆ ಕಳೆಯುತ್ತಿದ್ದಳು. ಅದು ಆಕೆಯ ಅತೀ ಪ್ರೀತಿಯ ಕೆಲಸವಾಗಿತ್ತು. ಅಲ್ಲಿ ನೆರೆದಿರುತ್ತಿದ್ದ ಹೆಂಗಸರೊಂದಿಗೆ ಸೊಸೆಯಂದಿರ, ಮೊಮ್ಮಕ್ಕಳ ವಿಷಯವನ್ನು ಅಜೆಂಡಾದಲ್ಲಿಟ್ಟುಕೊಂಡ ಅಜ್ಜಿ ದುಂಡು ಮೇಜಿನ ಸಭೆಯನ್ನು ನಡೆಸುತ್ತಿದ್ದಳು. ಯಾವ ಸೊಸೆ ಅತ್ತೆ ಪೀಡಕಿಯೋ, ಯಾವ ಅತ್ತೆ ಸೊಸೆ ಪೀಡಕಿಯೋ, ಆ ಪೀಡಕಿಗೆ ಯಾರು ಯಾವ ರೀತಿ ಪಾಠ ಕಲಿಸಬೇಕೆಂಬುದನ್ನು ಒಂದಕ್ಕಿಂತ ಒಂದು ಚೆಂದದ ಸಲಹೆಯನ್ನು ಕೊಡುತ್ತಿದ್ದಳು. ಆ ಸಲಹೆಗಳನ್ನು ತಮ್ಮ ತಮ್ಮ ಮನೆಯಲ್ಲಿ ಪ್ರಯೋಗಿಸಿದವರೆಲ್ಲ ಫಲಪ್ರದವನ್ನು ಕಂಡು ಅಜ್ಜಿಯನ್ನು ಹೊಗಳುವುದು ಸಾಮಾನ್ಯವಾಗಿತ್ತು. ಹೀಗಾಗಿ, ಎಲ್ಲರೂ ಅಜ್ಜಿಯನ್ನು “ಸಲಹೆ ಸೀತಮ್ಮ’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ನಾವು ರಂಗತ್ತೆ ಎಂದು ಕರೆಯುತ್ತಿದ್ದ ಒಬ್ಬರು ದುಂಡು ಮೇಜಿನ ಸಭೆಯಲ್ಲಿ ತಮ್ಮ ಸೊಸೆಯ ತರಾವರಿ ಕಾಟಗಳಿಂದ ಬೇಸತ್ತು ಮುಸಿ ಮುಸಿ ಅಳುತ್ತ, ನಾನೂ ನಮ್ಮೆಜಮಾನರ ಜೊತೆಗೇ ಕಣ್ಣು ಮುಚ್ಚಿದ್ದರೆ ಎಷ್ಟೋ ಸುಖವಾಗಿತ್ತು, ಈಗ ಇದನ್ನೆಲ್ಲ ಕಾಣುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅಲವತ್ತುಕೊಂಡರು. ಆಗ ಸಲಹೆ ಸೀತಮ್ಮಜ್ಜಿಯ ತಲೆಯಲ್ಲಿ ಫಕ್ಕನೇ ಸಲಹೆಯೊಂದು ಹೊಳೆದು ಅದನ್ನು ರಂಗತ್ತೆಯ ಕಿವಿಯಲ್ಲಿ ಉಸುರಿಬಿಟ್ಟಳು. ಮಾರನೆಯ ದಿನವೇ ರಂಗತ್ತೆ ಒಂದು ಕೈಚೀಲದ ತುಂಬ ಬಾಳೆಹಣ್ಣು, ಸೀಬೆಕಾಯಿ, ಲಿಂಬೆಹಣ್ಣು, ಹೂವುಗಳನ್ನ ತಂದು ನಮ್ಮ ಅಜ್ಜಿಗೆ ಸಮರ್ಪಿಸಿ, “ನಿಮ್ಮಿಂದ ತುಂಬಾ ಉಪಕಾರವಾಯಿತು ಸೀತಮ್ಮನವರೆ’ ಎಂದು ಇಬ್ಬರೂ ಏನನ್ನೋ ಹೇಳಿಕೊಂಡು ಪಿಸಿಪಿಸಿ ನಗಹತ್ತಿದರು. ಅಜ್ಜಿ ಕೊಟ್ಟಿದ್ದ ಸಲಹೆ ಏನಿರಬಹುದೆಂದು ನನಗೆ ನಿನ್ನೆ ರಂಗತ್ತೆಯ ಮನೆಯಲ್ಲಿ ನಡೆದ ಸನ್ನಿವೇಶದಿಂದ ತಿಳಿದು ಹೋಗಿತ್ತು.
ನಮ್ಮ ಮನೆಯಿಂದ ನಾಲ್ಕಾರು ಮನೆಗಳನ್ನು ದಾಟಿದರೆ ರಂಗತ್ತೆಯ ಮನೆ. ಅವರ ಮನೆಯ ಮುಂದೆ ವಿಶಾಲವಾದ ಜಾಗ. ಆ ಜಾಗದಲ್ಲಿ ಇಂಥ ಗಿಡಗಳು ಇಲ್ಲ ಎನ್ನುವಂತಿರಲಿಲ್ಲ. ಅಂದು ಅಲ್ಲಿಯೇ ಅಂಗಳದಲ್ಲಿ ರಂಗತ್ತೆಯ ಮೊಮ್ಮಕ್ಕಳೊಂದಿಗೆ ಆಟವಾಡುತ್ತಿ¨ªೆ. ಒಳಗಿನಿಂದ ಒಮ್ಮೆಲೇ ಹೂಂಕಾರದ ಧ್ವನಿ ಕೇಳಿ ಬಂತು. ಕಂಬದ ಮರೆಯೊಂದರಲ್ಲಿ ನಿಂತು ನಾವೆಲ್ಲ ಏನಾಯಿತೆಂದು ಕುತೂಹಲದಿಂದ ನೋಡಹತ್ತಿದೆವು. ಸದಾ ಹಸುವಿನಂತೆ ಸೌಮ್ಯವಾಗಿರುತ್ತಿದ್ದ ರಂಗತ್ತೆಯ ಅವತಾರವೇನು? ಕೂದಲೆಲ್ಲ ಬಿಚ್ಚಿ ಬೆನ್ನ ಮೇಲೆ ಹರಡಿಕೊಂಡಿದೆ. ಅವರ ಯಜಮಾನರು ಕೂರುತ್ತಿದ್ದ ಆರಾಮಕುರ್ಚಿಯಲ್ಲಿ ಕುಳಿತು ಕೈಯಲ್ಲಿ ರಾಯರ ಊರುಗೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕುತ್ತ ಹೂಂಕರಿಸುತ್ತಿ¨ªಾರೆ. “”ಲೇ ಕಾವೇರಿ, ನಾನು ಹೋದದ್ದು ನಿನಗೆ ಸದರವಾಗಿ ಹೋಯ್ತಾ? ನನ್ನ ಹೆಂಡತಿಗೆ ಕಿರುಕುಳ ಕೊಟ್ಟು ಅವಳನ್ನೂ ಸಾಗಹಾಕಬೇಕೆಂದಿದ್ದೀಯಾ? ನಾನೆಲ್ಲಿಗೂ ಹೋಗಿಲ್ಲ ಅವಳ ಜೊತೆಯಲ್ಲಿಯೇ ಇದ್ದೇನೆ. ಇನ್ನು ಮುಂದೆ ಅವಳಿಗೆ ತೊಂದರೆಕೊಟ್ಟರೆ ಬರುವ ಅಮಾವಾಸ್ಯೆಯ ದಿನ ನಿನ್ನ ರಕ್ತವನ್ನು ಹೀರಿ ಬಿಡುತ್ತೇನೆ. ನಿನಗೆ ಸೆಟಬೇನೆ ಬರುವಂತೆ ಮಾಡುತ್ತೇನೆ” ಎಂದು ಏನೇನೋ ಅಬ್ಬರಿಸುತ್ತಿದ್ದರು. ಆ ಧ್ವನಿ ರಂಗತ್ತೆಯ ಹಾಗಿರದೇ ಅವರ ಯಜಮಾನರ ಧ್ವನಿಯಂತೆಯೇ ನಮಗೆ ಕೇಳಿಸುತ್ತಿತ್ತು. ಅಷ್ಟರಲ್ಲಿ ಅಲ್ಲಿಯೇ ಇದ್ದ ರಂಗತ್ತೆಯ ಮಗ ರಾಘಣ್ಣ ದೇವರ ಮನೆಯಲ್ಲಿದ್ದ ಮಡಿ ನೀರಿನ ಬಿಂದಿಗೆಯನ್ನು ತಂದು ರಂಗತ್ತೆಯ ಮೇಲೆ ದಬದಬನೇ ಹೊಯ್ದು ಬಿಟ್ಟ. ರಂಗತ್ತೆಯ ಸೊಸೆ ಕಾವೇರಿ ತನ್ನ ಅತ್ತೆಯ ಪಾದಗಳ ಮೇಲೆ ಬಿದ್ದು, “”ಮಾವಾ ನನ್ನನ್ನ ಕ್ಷಮಿಸಿ ಬಿಡಿ. ಇನ್ನು ಮುಂದೆ ಅತ್ತೆಯನ್ನು ನನ್ನ ತಾಯಿಯಂತೆ ನೋಡಿಕೊಳ್ಳುತ್ತೇನೆ” ಎಂದು ಬೇಡಿಕೊಂಡಾಗ, ರಂಗತ್ತೆ ಹಾಗೇ ಕುಳಿತಿದ್ದ ಕುರ್ಚಿಯಲ್ಲಿ ಒರಗಿಕಣ್ಣು ಮುಚ್ಚಿದರು. ಇಂತಿಪ್ಪ ನಮ್ಮ ಸಲಹೆ ಸೀತಮ್ಮಜ್ಜಿಯ ಉಪಾಯ ಚೆನ್ನಾಗಿ ಫಲಿಸಿಬಿಟ್ಟಿತ್ತು.
ಚಿಕ್ಕವರಿರುವಾಗ ಮನೆಯಲ್ಲಿ ನಾವೆಲ್ಲ ಒಟ್ಟಿಗೇ ಕುಳಿತು ಊಟ ಮಾಡುತ್ತಿ¨ªೆವು. ನಮ್ಮೆಲ್ಲರ ಊಟದ ನಂತರ ಎಲೆಯನ್ನು ಎತ್ತಿ ಅಮ್ಮ ಊಟ ಮಾಡುತ್ತಿದ್ದಳು. ಒಂದು ದಿನ ರಾತ್ರಿ ಊಟ ಮಾಡುತ್ತಿರುವಾಗ, “”ಅಜ್ಜಿ, ರಾಮಕೃಷ್ಣ, ಮಾವಿನ ಕಾಲ ಮುಗಿದ ಮೇಲೆ ಹಣ್ಣು ತರುತ್ತೀ ಏನೋ? ವೆಂಕಮ್ಮ, ರಂಗಮ್ಮ, ವಿಶಾಲಮ್ಮ ಎಲ್ಲರ ಮನೆಯಲ್ಲೂ ಹೋಳಿಗೆ ಸೀಕರಣೆಯ ಸಮಾರಾಧನೆಯಾಗಿ ಹೋಯ್ತು. ನಮ್ಮ ಮನೆಯಲ್ಲಿ ಇಲ್ಲಿಯವರೆಗೂ ಸೀಕರಣೆಯ ಮಾತೇ ಇಲ್ಲ. ನೀನು ತರುತ್ತೀಯೋ ಇಲ್ಲ, ನಿನ್ನ ತಂಗಿಯ ಮನೆಗೆ ಹೋಗಿ ಮಾಡಿಸಿಕೊಂಡು ಉಂಡು ಬರಲೋ” ಎಂದು ಅಪ್ಪನ ಮೇಲೆ ಬಾಣ ಬಿಟ್ಟರು. ನಮಗೂ ಸೀಕರಣೆ ಎಂದಾಗ ಬಾಯಿಯೆಲ್ಲ ನೀರೂರಿತು. ಮಾವಿನ ಸುಗ್ಗಿ ಇದೀಗ ತಾನೇ ಆರಂಭವಾಗಿದೆ. ಕೃತಕವಾಗಿ ಮಾಗಿಸಿದ ಹಣ್ಣು ಹೊಟ್ಟೆಗೆ ಒಳ್ಳೆಯದಲ್ಲ. “”ಇನ್ನೊಂದು ತಿಂಗಳು ಕಳೆದರೆ ಅಡಿ ಹಾಕಿದ ಮಾವು ಬರುತ್ತದೆ ಮಾಡಿದರಾಯ್ತು” ಎಂದು ಅಪ್ಪ ಹೇಳಿದರು. ಆಗ ಅಜ್ಜಿ, “”ನಾನು ಏನೇ ಹೇಳಿದರೂ ಅದಕ್ಕೊಂದು ಕೊಕ್ಕೆ ಹಾಕುತ್ತೀಯ. ಅದೇ ನಿನ್ನ ಹೆಂಡತಿ ಹೇಳಿದರೆ ತಥಾಸ್ತು ಎನ್ನುತ್ತೀಯಾ” ಎಂದವಳೇ ಎಲೆಯನ್ನು ಮಡಚಿ ಎದ್ದು ಹಿತ್ತಲಿಗೆ ಕೈ ತೊಳೆಯಲು ಹೋದಳು. ಅಲ್ಲಿಂದ ಪ್ರಾರಂಭವಾದ ಅಜ್ಜಿಯ ಮೌನವ್ರತ ವಾರದವರೆಗೂ ಮುಂದುವರೆಯಿತು. ಮೊಮ್ಮಕ್ಕಳೊಂದಿಗೂ ಮಾತಿಲ್ಲ ಕಥೆಯಿಲ್ಲ. ಸಂಜೆ ದೇವಸ್ಥಾನದಲ್ಲಿ ಮಾತ್ರ ಅವಳು ಸಲಹೆ ಸೀತಮ್ಮನಾಗುತ್ತಿದ್ದಳು. ಮನೆಗೆ ಬರುತ್ತಲೇ ಮತ್ತದೇ ಮೌನಗೌರಿ.
ಅಮ್ಮನಿಗೂ ರೋಸಿ ಹೋಗಿ ಒಂದು ದಿನ ಅಪ್ಪನಿಗೆ- “”ಏನೋ ಅತ್ತೆಗೆ ಸೀಕರಣೆ ತಿನ್ನಬೇಕೆನ್ನಿಸಿದೆ. ಅವರ ಮನಸ್ಸನ್ನ ಯಾಕೆ ನೋಯಿಸೋದು? ನಾಳೆ ಹೇಗೂ ಭಾನುವಾರ, ನೀವೂ ಮನೆಯಲ್ಲಿರುತ್ತೀರಿ ಹಣ್ಣನ್ನ ತಂದುಬಿಡಿ” ಎಂದಳು ವೀಳ್ಯದೆಲೆ ಮಡಚುತ್ತ. ಅಪ್ಪ- “”ಆಯ್ತು ಕಣೆ ಮಾರಾಯ್ತಿ, ನಾಳೆಯೇ ತರುತ್ತೇನೆ. ಮತ್ತೇನಾದರೂ ಸಾಮಾನು ಬೇಕಿದ್ದರೆ ಪಟ್ಟಿ ಮಾಡು” ಎಂದು ವೀಳ್ಯದೆಲೆಯನ್ನು ಬಾಯಲ್ಲಿಟ್ಟುಕೊಂಡರು. ನಮಗಂತೂ ಸಂಭ್ರಮವೋ ಸಂಭ್ರಮ.
ಮಾರನೆಯ ದಿನ ಹೋಳಿಗೆ ಸೀಕರಣೆಯನ್ನು ಗಡ¨ªಾಗಿ ಉಂಡ ಅಜ್ಜಿ- “”ಸರೋಜಾ, ಹೋಳಿಗೆ ಸೀಕರಣೆ ತುಂಬಾ ಚೆನ್ನಾಗಿದೆ. ಕುಡಿಯೋಕೆ ಒಂದ್ ಲೋಟ ಸೀಕರಣೆ ಕೊಡು” ಎಂದು ಊಟದ ಕೊನೆಯಲ್ಲಿ ಪಾವು ಲೋಟದಷ್ಟು ಸೀಕರಣೆಯನ್ನು ಕುಡಿದು ತನ್ನ ಮೌನವ್ರತವನ್ನು ಮುರಿದಿದ್ದಳು. ಅಂದು ಸಂಜೆ ಸಂತೋಷದಿಂದಲೇ ಅಜ್ಜಿ ದೇವಸ್ಥಾನಕ್ಕೆ ಹೋಗಿದ್ದರು. ಅಲ್ಲಿ ಸೊಸೆ ಮಾಡಿದ್ದ ಹೋಳಿಗೆ ಸೀಕರಣೆಯ ವಿಷಯವೇ ಹೆಚ್ಚು ಹೊತ್ತನ್ನು ತಿಂದಿತ್ತು. ಅಮ್ಮ ರಾತ್ರಿ ಊಟಕ್ಕೆ ಕರೆದಾಗ, “”ಯಾಕೋ ಮಧ್ಯಾಹ್ನ ತಿಂದದ್ದೇ ಅರಗಿಲ್ಲ. ಸ್ವಲ್ಪ ಮಜ್ಜಿಗೆ ಕೊಡು” ಎಂದು ಮಜ್ಜಿಗೆ ಕುಡಿದು ತನ್ನ ಕೋಣೆಯನ್ನು ಸೇರಿಕೊಂಡಳು. ರಾತ್ರಿಯೆಲ್ಲ ಅಜ್ಜಿ ಕೋಣೆಯಿಂದೆದ್ದು ಐದಾರು ಬಾರಿ ಹಿತ್ತಲಿಗೆ ಹೋಗಿದ್ದನ್ನು ನಾನು ತಪ್ಪಾಗಿ ಅರ್ಥೈಸಿಕೊಂಡು ಮಿಕ್ಕಿದ್ದ ಸೀಕರಣೆಯನ್ನು ಕುಡಿಯಲು ಹೋಗಿರಬೇಕೆಂದು ನೆನೆದು ಮುಸುಕಿನಲ್ಲಿಯೇ ಮುಸಿಮುಸಿ ನಗುತ್ತಿ¨ªೆ.
ಪ್ರತಿದಿನ ಬೆಳಗಿನ ಐದು ಗಂಟೆಗೇ ಎದ್ದು ನಮಗೆಲ್ಲ ಸಹಸ್ರ ನಾಮಾರ್ಚನೆ ಮಾಡುತ್ತಿದ್ದ ಅಜ್ಜಿ , ನಾವು ಶಾಲೆಗೆ ಹೊರಟು ನಿಂತರೂ ಅಜ್ಜಿ ಇನ್ನೂ ಮಲಗೇ ಇರುವುದು ನಮಗೆಲ್ಲ ಆಶ್ಚರ್ಯವನ್ನುಂಟು ಮಾಡಿತ್ತು. ಅಮ್ಮನನ್ನು ಕೇಳಿದಾಗ ಅಜ್ಜಿಗೆ ಹೊಟ್ಟೆನೋವೆಂದು ಹೇಳಿದ್ದಳು. ಮನೆ ತುಂಬಾ ಓಡಾಡುತ್ತ ಎಲ್ಲರ ಹತ್ತಿರ ಒಂದಿಲ್ಲ ಒಂದು ವಿಷಯದಲ್ಲಿ ಕ್ಯಾತೆ ತೆಗೆಯುತ್ತಿದ್ದ ಅಜ್ಜಿ ಮುಂದೆಂದೂ ಎದ್ದು ಓಡಾಡಿದ್ದನ್ನು ನಾನು ಕಾಣಲೇ ಇಲ್ಲ. ನಾವು ಶಾಲೆಗೆ ಹೋಗಿ ಬರುವುದರಲ್ಲಿಯೇ ಭೇದಿಯಿಂದ ಸುಸ್ತಾಗಿ ಬಸವಳಿದಿದ್ದ ಅಜ್ಜಿಯನ್ನು ವೈದ್ಯರು ಪರೀಕ್ಷಿಸುತ್ತಿದ್ದರು. ಅಪ್ಪ , ಅಮ್ಮ ಚಿಂತೆಯಿಂದ ಬಸವಳಿದಂತೆ ಕಾಣುತ್ತಿದ್ದರು. ರಾತ್ರಿಯಿಡೀ ಅಮ್ಮ ಅಜ್ಜಿಯ ಆರೈಕೆಯಲ್ಲಿಯೇ ಕಳೆದಿದ್ದಳು. ಗಂಜಿಯ ಮೇಲೆ ಅವಲಂಬನೆಯಾಗಿದ್ದ ಅಜ್ಜಿ ದಿನಗಳೆದಂತೆ ಹಾಲನ್ನೂ ಕುಡಿಯದಂತಾದಾಗ ಅಪ್ಪ ಮಾಡದ ಚಿಕಿತ್ಸೆಯಿಲ್ಲ. ಯಾರು ಏನು ಹೇಳುತ್ತಾರೋ ಅದನ್ನೆಲ್ಲ ಅಪ್ಪ ಶಿರಸಾವಹಿಸಿ ಮಾಡುತ್ತಿದ್ದ. ಈಗಿನಂತೆ ಕೈಗೊಂದರಂತೆ ಕಾಲಿಗೊಂದರಂತೆ ಆಗ ಆಸ್ಪತ್ರೆಗಳಿರಲಿಲ್ಲ. ತಾನು ಯಾವ ಆಸ್ಪತ್ರೆಗೂ ಬರಲಾರೆ ಎಂಬ ಅಜ್ಜಿಯ ಹಠದ ಮುಂದೆ ಅಪ್ಪನ ದೈನೇಸಿ ಮುಖ ಯಾವ ಕೆಲಸವನ್ನು ಮಾಡಲಿಲ್ಲ. ಪಾದರಸದಂತೆ ಒಳಗೂ ಹೊರಗೂ ಓಡಾಡಿಕೊಂಡು ಗುಂಡುಕಲ್ಲಿನಂತಿದ್ದ ಅಜ್ಜಿ ಹಾಸಿಗೆಗೆ ಅಂಟಿಕೊಂಡು ಬಿಟ್ಟಳು. ಇಪ್ಪತ್ತೂಂದು ದಿನಗಳವರೆಗೂ ಅರ್ಧಲೋಟ ಹಾಲು ನೀರಿನಿಂದ ಜೀವ ಹಿಡಿದುಕೊಂಡಿದ್ದ ಸಲಹೆ ಸೀತಮ್ಮ ಒಂದು ಬೆಳ್ಳಂಬೆಳಿಗ್ಗೆ ಅಮ್ಮ ಕುಡಿಸಿದ ನಾಲ್ಕು ಹನಿ ಗಂಗಾಜಲದೊಂದಿಗೆ ಪ್ರಾಣಬಿಟ್ಟಳು.
ಅಲ್ಲಿಂದ ಎಷ್ಟೋ ವರುಷಗಳ ಕಾಲ ನಮ್ಮ ಮನೆಯಲ್ಲಿ ಸೀಕರಣೆಯ ಸಮಾರಾಧನೆ ನಿಂತು ಹೋಗಿತ್ತು. ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲಲಾರದೆಂಬಂತೆ ನಾವು ಬೆಳೆದು ದೊಡ್ಡವರಾದಾಗ ಸೀಕರಣೆ ಮಾಡಲಾರಂಭಿಸಿದ್ದಳು ಅಮ್ಮ. ಈಗಲೂ ಸೀಕರಣೆ ಮಾಡಿದಾಗಲೆಲ್ಲ ಅಮ್ಮ ಕಣ್ಣೀರು ಹಾಕುತ್ತಲೇ ತನ್ನ ಅತ್ತೆಯ ಸಾವಿಗೆ ತಾನೇ ಕಾರಣಳಾದೆ ಎನ್ನುತ್ತ ಸೀಕರಣೆ ಕುಡಿಯುತ್ತಾಳೆ. ಹಾಗಾಗಿ, ಮಾವಿನ ಮರದಲ್ಲಿ ಹೂಬಿಟ್ಟು ಮಿಡಿ ಇಣುಕುತ್ತಲೇ ಅಜ್ಜಿ ನೆನಪಾಗಿ ಕಾಡುತ್ತಾಳೆ.
– ಗೌರೀ ಚಂದ್ರಕೇಸರಿ