Advertisement
ಗ್ರಾ.ಪಂ. ನೌಕರರ ಭಡ್ತಿಗೆ ಸಂಬಂಧಿಸಿದಂತೆ ಶೀಘ್ರ ಅಗತ್ಯ ಕ್ರಮ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಉಡುಪಿ ಜಿಲ್ಲಾ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ಸಂಘ, ಪಂ. ಕಾರ್ಯದರ್ಶಿಗಳ ಸಂಘ, ದ್ವಿತೀಯ ದರ್ಜೆ ಲೆಕ್ಕಸಹಾಯಕರ ಸಂಘ ಹಾಗೂ ಪಂಚಾಯತ್ ನೌಕರರ ಸಂಘದ ಸದಸ್ಯರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಜಿಲ್ಲಾ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ಸಿದ್ದೇಶ್ ಮಾತನಾಡಿ, ವಸತಿ ಯೋಜನೆ ಸೇರಿದಂತೆ ಸರಕಾರದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಅನಗತ್ಯ ಒತ್ತಡ ಹೇರಲಾಗುತ್ತಿದೆ. ಅಲ್ಲದೆ ತಾಂತ್ರಿಕವಾಗಿ ಸಮರ್ಪಕವಾಗಿಲ್ಲದ ಹಲವು ಸಮಸ್ಯೆಗಳಿರುವ ಆ್ಯಪ್‌ಗ್ಳನ್ನು ಅಳವಡಿಸಿ ಗುರಿ ನಿಗದಿಪಡಿಸಿ ಒತ್ತಡ ಹಾಕಲಾಗುತ್ತಿದೆ. ಇದರಿಂದ ಪಂಚಾಯತ್‌ನ ಇತರ ಕಾರ್ಯಗಳಿಗೆ ಅಪಾರ ತೊಡಕಾಗುತ್ತಿದೆ ಎಂದು ದೂರಿದರು. ಅನಗತ್ಯ ತಂತ್ರಾಂಶ (ಆ್ಯಪ್)ಗಳ ಮೂಲಕ ಜಿಪಿಎಸ್ ಅಳವಡಿಸುವ ಪ್ರಕ್ರಿಯೆಯಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ಸರಳ, ಉಪಯೋಗಿಸಲು ಪೂರಕ, ಅಧಿಕೃತವಾದ ಒಂದೇ ತಂತ್ರಾಂಶದಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆಯನ್ನು ಅಳವಡಿಸುವ ಅಗತ್ಯವಿದೆ. ಬಾಪೂಜಿ ಸೇವಾ ಕೇಂದ್ರಗಳಿಗೆ ಮಾನವ ಸಂಪದ ಹಾಗೂ ತಾಂತ್ರಿಕ ಪರಿಕರಗಳನ್ನು ಶೀಘ್ರ ಒದಗಿಸಬೇಕು. ಪಂಚಾಯತ್ ಸಿಬಂದಿಯ ಭಡ್ತಿ ಪ್ರಕ್ರಿಯೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು. ಪಿ.ಎಫ್. ಮತ್ತು ಇಎಸ್‌ಐ ಮತ್ತಿತರ ಸೌಲಭ್ಯಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
Related Articles
Advertisement
ಪಂ. ಅಭಿವೃದ್ಧಿ ಅಧಿಕಾರಿಗಳ ಸಂಘದ ಕಾರ್ಯದರ್ಶಿ ಮಹೇಶ್, ಮಹಿಳಾ ಉಪಾಧ್ಯಕ್ಷೆ ಪ್ರಮೀಳಾ ನಾಯಕ್, ದ್ವಿತೀಯ ದರ್ಜೆ ಲೆಕ್ಕಸಹಾಯಕರ ಸಂಘದ ಅಧ್ಯಕ್ಷ ಶಿವರಾಜ್, ಕಾರ್ಯದರ್ಶಿ ಬೆಟ್ಟಸ್ವಾಮಿ, ಪಂ. ನೌಕರರ ಸಂಘದ ಕಾರ್ಯದರ್ಶಿ ನರೇಶ್ ನಾಯಕ್ ಉಪಸ್ಥಿತರಿದ್ದರು.