Advertisement
ಬಹಳ ದಿನಗಳ ಮೇಲೆ ಅಕಸ್ಮಾತ್ ಆಗಿ ಹೀಗೇ ಗೆಳತಿಯರ ಜೊತೆ ಮಾತಾಡುತ್ತಾ ಇರುವಾಗ ಮೀಸೆಯ ವಿಚಾರ ಬಂತು. ಹೇಳಿಕೇಳಿ ಹೆಣ್ಣು ಮಕ್ಕಳಿಗೆ ಮೀಸೆ ಬಗ್ಗೆ ಒಂಥರಾ ಆಸಕ್ತಿ. ಅದು ತಮಗಿಲ್ಲವಲ್ಲ ಎಂಬ ಕಾರಣಕ್ಕಿರಬಹುದು. ಹಾಗೆ ಮೀಸೆ ಇರುವ ಕೆಲವು ಹೆಂಗಳೆಯರೂ ಇರುವರೆನ್ನಿ. ಅದು ಹಾರ್ಮೋನುಗಳ ಏರುಪೇರಿನಿಂದ ಆಗುವ ಇರಿಸುಮುರಿಸು ಎಂದು ಓದಿದ ನೆನಪು. ಅಂದಿನಿಂದ, ಅಂದರೆ ಈ ಮೀಸೆಯ ವಿಚಾರ ತಲೆಗೆ ಬಂದಾಗಿನಿಂದ ನನ್ನ ತಲೆಯಲ್ಲಿ ಅದೊಂದೇ ಹುಳು ಕೊರೆಯಲಾರಂಭಿಸಿದೆ. ಹೇಳಿಕೇಳಿ ಮೀಸೆ ಗಂಡಸ್ತನದ ಬಹುದೊಡ್ಡ ಸಂಕೇತ. ಯಾವ ಗಂಡಿಗೆ ಆದ್ರೂ, ಯಾರಾದ್ರೂ ಆತನ ಮೀಸೆಯ ವಿಚಾರಕ್ಕೆ ಬಂದ್ರೆ ಸಾಕು, ಅದನ್ನು ಹೀಯಾಳಿಸುವುದೋ ಕೆಣಕುವುದೋ ಮಾಡಿದರೆ ಸಾಕು; ಸಖತ್ ಕೋಪ ಬರುತ್ತೆ ಅಂತಲೂ ಕೇಳಿದ್ದೆ. ಅಂಥ ದೃಶ್ಯಗಳನ್ನು ಕಂಡಿದ್ದೆ ಕೂಡಾ.
Related Articles
Advertisement
ಬಾಲ್ಯದಲ್ಲಿ ನನ್ನ ಮೇಲೆ ತಂದೆಯ ಪ್ರಭಾವ ಬಹಳ ಇತ್ತೆನ್ನಿ. ಗರಿಗರಿಯ ಇಸಿŒ ಹಾಕಿದ ಬಟ್ಟೆಯನ್ನೇ ಸದಾ ತೊಡುತ್ತಿದ್ದ ನನ್ನಪ್ಪ ಫ್ಯಾಶನ್‌ಪ್ರಿಯರಾಗಿದ್ದರು. ಅವರು ಹೆಚ್ಚಿನ ಸಮಯವೆಲ್ಲ ದಪ್ಪ ಮೀಸೆಯನ್ನೇ ಬಿಡುತ್ತಿದ್ದರೂ, ಆಗೊಮ್ಮೆ ಈಗೊಮ್ಮೆ ಆ ಕಾಲದ ಪ್ರಸಿದ್ಧ ಹೀರೋ ರಾಜ್ ಕಪೂರ್‌ನಂತೆ ಗುರ್ಬಾಣಕ್ಕಿ ಮೀಸೆಯನ್ನು ಬಿಡುತ್ತಿದ್ದರು. ಮತ್ತೆ ಕೆಲವೊಮ್ಮೆ ಮೀಸೆಯನ್ನೆಲ್ಲಾ ಬೋಳಿಸಿ, ನಾರದನಂತೆ ಕಾಣುತ್ತಿದ್ದರು.
ಆದರೆ, ಅದ್ಯಾಕೋ ನನಗೆ ಮೀಸೆಯಿಲ್ಲದ ನನ್ನಪ್ಪನ ಮುಖವೇ ಚಂದ ಕಾಣುತ್ತಿತ್ತು. ನಾವು ಬೆಳೆದು ದೊಡ್ಡವರಾಗುವ ಕಾಲಕ್ಕೆ ಮೀಸೆಯಿಲ್ಲದ ಮುಖದ ಹೀರೋಗಳೇ ಸಿನಿಮಾ ರಂಗದ ಓಡುವ ಕುದುರೆಗಳಾಗಿದ್ದರು. ಹಿಂದಿ ಚಲನಚಿತ್ರದಲ್ಲಿ ಆಗಷ್ಟೇ ಯುವ ನಾಯಕರು, ಒಬ್ಬರಾದ ಮೇಲೊಬ್ಬರಂತೆ ನಾರದನ ಮುಖದಲ್ಲಿಯೇ ಪ್ರಸಿದ್ಧರಾಗಿದ್ದರು. ಒಂದಿಷ್ಟು ಹಳೆ ತಲೆಮಾರಿನ ಅಮಿತಾಭ್ ಬಚ್ಚನ್‌ರಿಂದ ಹಿಡಿದು, ನಂತರದ ಮಿಥುನ್ ಚಕ್ರವರ್ತಿ, ಸುನಿಲ್ ದತ್, ಆನಂತರ ಬಂದ ಶಾರುಖ್ ಖಾನ್, ಆಮೀರ್ ಖಾನ್ , ಸಲ್ಮಾನ್ ಖಾನ್, ಅಕ್ಷಯ್‌ಕುಮಾರ್… ಹೀಗೆ ಮೀಸೆ ಇಲ್ಲದೆಯೇ ಮನಸ್ಸು ಗೆದ್ದ ಹೀರೋಗಳ ಪಟ್ಟಿ ಬೆಳೆಯುತ್ತದೆ. ಕನ್ನಡದಲ್ಲೂ ಇದಕ್ಕೆ ಪೈಪೋಟಿ ಎಂಬಂತೆ ರಾಜಕುಮಾರ್‌ರ ಮೂರು ಮಕ್ಕಳೂ ಮೀಸೆಯಿಲ್ಲದೇ ಪ್ರಸಿದ್ಧರಾಗಿದ್ದರು. ಇದರ ಪ್ರಭಾವವೋ ಏನೋ, ಮೀಸೆ ಇದ್ದವರಿಗಿಂತ ಮೀಸೆ ಇಲ್ಲದ ನಾಯಕರೇ ನನಗೆ ಹೆಚ್ಚು ಇಷ್ಟವಾಗುತ್ತಿದ್ದರು.
ಮೀಸೆ ಎಂದರೆ ಅಂಥ ಆಕರ್ಷಣೆ ಇಲ್ಲದ ಕಾರಣ, ನಾನು ಬಯಸುತ್ತಿದ್ದುದು ಮೀಸೆ ಇಲ್ಲದ ಮಾರ್ದವ ಮುಖಕ್ಕಾಗಿ. ಆದರೆ, ನನ್ನ ದುರಾದೃಷ್ಟಕ್ಕೆ ಮೀಸೆ ಹೊಂದಿದ್ದ, ಅದೂ ಏನು? ಮೀಸೆಯ ಕುರಿತು ಅತಿಯಾದ ಮೋಹವಿದ್ದ ಗಂಡನೇ ಸಿಗಬೇಕೆ? ಪತಿ ಮಹಾಶಯ ದಪ್ಪ ಮೀಸೆಯಲ್ಲಿ ಮೋಹಕವಾಗೇ ಕಾಣುತ್ತಿದ್ದರು. ಆದರೆ, ಅದರಿಂದಾಗುವ ಕಿರಿಕಿರಿ ಏನೆಂದು ಆನಂತರವೇ ತಿಳಿದಿದ್ದು. ಮದುವೆಯಾದ ಮೇಲೆ ಏನೂ ಮಾಡಲಾಗದೇ, ಮೀಸೆ ತೆಗೆದರೆ ಒಳ್ಳೆಯದೆಂದು, ನಾಚುತ್ತಾ ಸಲಹೆ ನೀಡಿದೆ. ಆ ಮೀಸೆಯ ಉಪಟಳವ ನೆನೆದು. ಅದು ಚುಚ್ಚಿದರೆ ಎಂಬ ಭಯಕ್ಕೆ ಹೆದರಿ. ಆದರೆ, ಆ ಪುಣ್ಯಾತ್ಮ ಪ್ರಥಮ ಚುಂಬನಂ ದಂತಭಗ್ನಂ ಎನ್ನುವಂತೆ, ನಿನ್ನನ್ನು ಮದುವೆಯಾದದ್ದಕ್ಕೆ ಪ್ರಥಮ ಚುಂಬನಂ ಮೀಸೆ ಭಗ್ನಂ ಮಾಡಿಕೊಳ್ಳೋಕೆ ನಾನೊಲ್ಲೆ ಎಂದುಬಿಟ್ಟ. ಈಗಲೂ ಅವನಿಗೆ ಮೀಸೆ ಎಂದರೆ ಬಹು ಹೆಮ್ಮೆ. ಆದರೆ, ಅದು ಮೊದಲಿಗಿಂತ ಹೆಚ್ಚು ದಪ್ಪಗಾಗಿದೆ. ಅಲ್ಲಲ್ಲಿ ಇಣುಕುವ ಬಿಳಿ ಕೂದಲುಗಳೂ ಅವರ ನಿದ್ದೆಗೆಡಿಸುತ್ತವೆ. ಆಗಾಗ ಬಣ್ಣ ಸವರಿಕೊಂಡರೂ ಮೂರೇ ದಿನಕ್ಕೆ ತಮ್ಮ ಉಪಸ್ಥಿತಿ ತೋರುವ ಅವುಗಳನ್ನು ಸಣ್ಣ ಕನ್ನಡಿ ಹಿಡಿದು ಕತ್ತರಿಸಿಕೊಳ್ಳುತ್ತಲೋ, ಒಂದೊಂದನ್ನೇ ಹಿಡಿದು ಜಗ್ಗಿ ಕಿತ್ತು ಹಾಕುತ್ತಲೋ ಇರುವುದನ್ನು ನೋಡಿ ನನಗೋ ತಮಾಷೆ. ಸುಮ್ಮನೇ ನಾ ಹೇಳಿದಂತೆ ಕೇಳಿದ್ದಿದ್ದರೆ ಈ ಅವಸ್ಥೆ ಬರಿ¤ತ್ತಾ?
ಮಹಿಳಾ ಮಣಿಗಳೆಗೆಲ್ಲಾ ಗೊತ್ತು ಮೀಸೆಯ ಕಿರಿಕಿರಿಯ ಬಗ್ಗೆ. ಇನ್ನು ಚಿಕ್ಕ ಮಕ್ಕಳು ಕೂಡಾ ಹೆಂಗಳೆಯರು ಲೊಚಲೊಚನೆ ಮುತ್ತಿಟ್ಟರೂ ಖುಷಿಯಿಂದ ಕೇಕೆ ಹಾಕಿದರೆ, ಮೀಸೆ ಮಾಮನ ಒಂದೇ ಮುತ್ತಿಗೆ ಗೋಳ್ಳೋ ಎಂದು ಅಳುತ್ತವೆ. ಈಗ ನೀವೇ ಹೇಳಿ, ಗಂಡಸ್ತನದ ಒಂದೇ ಕಾರಣಕ್ಕೆ ಈ ಮೀಸೆ ಮುಖದಲ್ಲಿರಬೇಕಾ ಅಥವಾ ಮಕ್ಕಳೂ ಅಪ್ಪನ ಮುದ್ದನ್ನು ಬಯಸುವಂತೆ, ಹೆಂಡತಿಯೂ ಗಂಡನ ಮಾರ್ದವ ಮುಖವನ್ನು ಮೆಚ್ಚುವಂತೆ ಲಕಲಕನೆ ಹೊಳೆವ ಮೀಸೆಯಿಲ್ಲದ ಮುಖವಿರಬೇಕಾ?
ಮೀಸೆಯು ಮೂಗಿನ ಕೆಳಗಿನ ರೆಕ್ಕೆಗಳಂತೆ. ಅದಕ್ಕೇ ಗಂಡಸು ಅಷ್ಟೊಂದು ಹಾರಾಡೋದು!
ಅನೇಕ ಸಲ ಗಂಡಸಿಗೆ ಗೌರವ ಸಿಗೋದು, ಅವನ ಮೀಸೆಯ ಕಾರಣಕ್ಕೆ!
ಗಂಡ ಬುದ್ಧಿಮಾತನ್ನು ಕೇಳದೇ ಇದ್ರೆ, ಮೀಸೆ ಹಿಡಿದು ಜಗ್ಗಿ. ಆಮೇಲೆ ನೋಡಿ… ಇದು ಯಶಸ್ವಿ ಮನೆಮದ್ದು!
ಎರಡು ಜಡೆ ಸೇರಿದ್ರೆ ಜಗಳ, ಎರಡು ಮೀಸೆ ಸೇರಿದ್ರೆ ಪಾರ್ಟಿ!
ಆಗತಾನೆ ಮದುವೆಯಾದವಳ ಮುಖ ಕೆಂಪಾಗಿದ್ದರೆ, ಆಕೆಯ ಗಂಡನಿಗೆ ಮೀಸೆ ಇದೆಯೆಂದು ಅರ್ಥ.
ನಾಗರೇಖಾ ಗಾಂವಕರ