Advertisement

ಮಳೆಗಾಲ ಆರಂಭದಲ್ಲೇ ಗುಂಡಿಗಳ ದರ್ಶನ !

03:56 PM Jul 05, 2023 | Team Udayavani |

ಮಹಾನಗರ: ನಗರದಲ್ಲಿ ಬಿರುಸಿನ ಮಳೆ ಆರಂಭವಾಗಿದ್ದು, ಹಲವು ಕಡೆ ರಸ್ತೆಗಳು ಗುಂಡಿ ಬಿದ್ದಿದ್ದು, ವಾಹನ ಸವಾರರಿಗೆ, ಸಾರ್ವಜನಿಕರಿಗೆ ಸಮಸ್ಯೆಗೆ ಕಾರಣವಾಗಿದೆ.

Advertisement

ಸಾಮಾನ್ಯವಾಗಿ ಮಳೆಗಾಲ ಆರಂಭಕ್ಕೂ ಮುನ್ನ ರಸ್ತೆಗಳ ಗುಂಡಿಗಳಿಗೆ ಡಾಮರು ಹಾಕಲಾಗುತ್ತದೆ. ಆದರೆ, ಈ ಬಾರಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಲವು ಕಡೆಗಳಲ್ಲಿ ಗುಂಡಿ ಪ್ಯಾಚಪ್‌ ಕೆಲಸ ನಡೆಯಲಿಲ್ಲ. ಇದೇ ಕಾರಣಕ್ಕೆ ಹಲವು ರಸ್ತೆಗಳಲ್ಲಿ ಹೊಂಡ-ಗುಂಡಿ ಉಂಟಾಗಿದೆ. ನಗರದ ಹಲವು ಕಡೆಗಳಲ್ಲಿ ಮಳೆ ನೀರು ಹರಿಯಲು ಸಮರ್ಪಕ ವ್ಯವಸ್ಥೆ ಇಲ್ಲ. ಇದೇ ಕಾರಣಕ್ಕೆ ರಸ್ತೆಯಲ್ಲೇ ಹರಿಯುತ್ತಿದೆ. ಗುಂಡಿಗಳಲ್ಲಿ ತುಂಬಿದ ನೀರು ವಾಹನ ಸವಾರರಿಗೆ ತಿಳಿಯದೇ ಅನಾಹುತಕ್ಕೆ ಎಡೆ ಮಾಡುತ್ತಿದೆ. ಮಳೆಗಾಲ ಆರಂಭಕ್ಕೂ ಮುನ್ನ ನಗರದ ಗುಂಡಿಗಳನ್ನು ಮುಚ್ಚಬೇಕಿದ್ದ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳದ ಪರಿಣಾಮ ಇದೀಗ ಸಮಸ್ಯೆ ಉಂಟುಮಾಡುತ್ತಿದೆ.

ನಗರದ ಪ್ರಮುಖ ಮುಖ್ಯ ರಸ್ತೆಗಳಲ್ಲೇ ಹೊಂಡ-ಗುಂಡಿಯಾಗಿದೆ. ನಂತೂರು, ಪಂಪ್‌ವೆಲ್‌, ಬಲ್ಮಠ, ಬೆಂದೂರ್‌ವೆಲ್‌, ಬಿಕರ್ನಕಟ್ಟೆ ಸಹಿತ ವಿವಿಧ ಕಡೆ ಕೃತಕ ಗುಂಡಿಗಳಾಗಿದೆ. ಅದೇ ರೀತಿ, ಮೇರಿಹಿಲ್‌, ಪದವಿನಂಗಡಿ, ರಥಬೀದಿ, ಕುದ್ರೋಳಿ ಸೇರಿದಂತೆ ಹಲವು ಕಡೆಗಳಲ್ಲಿ ಗೈಲ್‌ ಗ್ಯಾಸ್‌ಲೈನ್‌, ಜಲಸಿರಿ, ಪಾಲಿಕೆ, ಸ್ಮಾರ್ಟ್‌ ಸಿಟಿ ಕಾಮಗಾರಿಗಳಿಗೆ ಅಗೆದ ಕಾರಣ ಗುಂಡಿಗಳು ನಿರ್ಮಾ ಣ ವಾ ಗಿದೆ. ನಗರದ ಕೆಲವೆಡೆ ಅಗೆದ ರಸ್ತೆ ಅದೇ ಸ್ಥಿತಿಯಲ್ಲಿದ್ದು, ಅರ್ಧಂಬರ್ಧ ಕಾಮಗಾರಿ ನಡೆಸಲಾಗಿದೆ. ಅಗೆದ ಕಾಂಕ್ರಿಟ್‌ ರಸ್ತೆಯಲ್ಲಿ ಸದ್ಯ ಎತ್ತರ ತಗ್ಗು ನಿರ್ಮಾಣಗೊಂಡಿದೆ. ಕೆಲವೆಡೆ ಅಗೆದ ಗುಂಡಿ ಸರಿಯಾಗಿ ಮುಚ್ಚದೆ ವಾಹನ ಸಂಚಾರ ದುಸ್ತರವೆನಿಸಿದೆ.

ಒಂದೇ ರಸ್ತೆ: ಹಲವು ಬಾರಿ ಪ್ಯಾಚಪ್‌!
ನಗರದ ಉರ್ವಸ್ಟೋರ್‌ ಬಳಿ ಇರುವ ದಡ್ಡಲಕಾಡು-ಕೊಟ್ಟಾರ ಒಳ ರಸ್ತೆಯಲ್ಲಿ ಮತ್ತೆ ಅದೇ ಅವ್ಯವಸ್ಥೆ ಉಂಟಾಗಿದೆ. ಮಳೆಗಾಲಕ್ಕೆ ಕೆಲವು ತಿಂಗಳು ಬಾಕಿ ಇರುವಾಗ ರಸ್ತೆಗೆ ಡಾಮರು ಹಾಕಲಾಗಿತ್ತು. ಕೆಲ ದಿನಗಳ ಹಿಂದೆ ನಗರದಲ್ಲಿ ಸುರಿದ ಭಾರೀ ಮಳೆಗೆ ರಸ್ತೆಯಲ್ಲಿ ಮತ್ತೆ ಹೊಂಡ ಗುಂಡಿಯಾಗಿದೆ. ಲಾಲ್‌ಬಾಗ್‌-ಚಿಲಿಂಬಿ-ಕೊಟ್ಟಾರ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾದರೆ, ಇರುವ ಒಳ ರಸ್ತೆ ಇದಾಗಿದ್ದು, ದಿನನಿತ್ಯ ಹಲವು ವಾಹನಗಳು ಸಂಚರಿಸುತ್ತವೆ.

ಒಳ ರಸ್ತೆಗಳಲ್ಲೂ ಇದೇ ಪರಿಸ್ಥಿತಿ
ಹೊಂಡ-ಗುಂಡಿಗಳು ಕೇವಲ ಮುಖ್ಯ ರಸ್ತೆಗಳಿಗೆ ಅಥವಾ ನಗರ ಪ್ರದೇಶಕ್ಕೆ ಸೀಮಿತಗೊಂಡಿಲ್ಲ. ಗ್ರಾಮೀಣ ಭಾಗ ಸೇರಿದಂತೆ ಒಳ ರಸ್ತೆಗಳಲ್ಲೂ ಇದೇ ಪರಿಸ್ಥಿತಿ ಮುಂದಿವರೆದಿದೆ. ಹಲವು ತಿಂಗಳಿಗಳಿಂದ ಗುಂಡಿ ಬಿದ್ದ ರಸ್ತೆಗಳು ಇದ್ದರೂ, ಜನಪ್ರತಿನಿಧಿಗಳ ಗಮನಕ್ಕೆ ಬಾರದೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next