Advertisement

ದಾಸೋಹದಲ್ಲಿಯೇ ದೇವರನ್ನು ಕಂಡವರು…

12:50 AM Jan 22, 2019 | Harsha Rao |

ಶಿವಕುಮಾರ ಸ್ವಾಮೀಜಿಗಳು ಎಲ್ಲ ಅರ್ಥದಲ್ಲಿಯೂ ನಿಜವಾದ ಯೋಗಿ- ತ್ಯಾಗಿ. ಅವರು ದಾಸೋಹದಲ್ಲಿ ದೇವರನ್ನೂ ಕಂಡವರು. ಕಾಯಕವೇ ಕೈಲಾಸ ಎಂಬ ಮಾತನ್ನು ಪಾಲಿಸಿಕೊಂಡು ಬಂದಿರುವ ಅವರು ಅನ್ನದಾನ- ವಿದ್ಯಾದಾನದಿಂದ ಹೊಟ್ಟೆಯ ಹಸಿವು ಹಾಗೂ ಜ್ಞಾನದ ಹಸಿವನ್ನು ಇಂಗಿಸಿದವರು. ಸೇವೆಯೇ ಜೀವನ ಎಂದುಕೊಂಡು ತಮ್ಮ ದೇಹವನ್ನು ಶ್ರೀಗಂಧದಂತೆ ತೇಯ್ದುಕೊಂಡ ಮಹಾ ತಪಸ್ವಿಗಳು ಅವರು…

Advertisement

ಪೂಜ್ಯರಾದ ಶ್ರೀ ಶಿವಕುಮಾರ ಸ್ವಾಮಿಯವರು ಅಪರೂಪದ ತ್ಯಾಗದ ಪ್ರತೀಕದಂತಿರುವ ಒಂದು ಶಕ್ತಿ. ಈ ತ್ಯಾಗ ಎನ್ನುವಂಥ ಶಬ್ದ ಎಷ್ಟು ಮೌಲ್ಯ ಯುತವಾದುದು ಎನ್ನುವುದು ನಿಮಗೆ ಗೊತ್ತಿದೆ. ತ್ಯಾಗ ಸಹಜವಾಗಿರಬೇಕು. ನಾನು ಯಾರಿಗಾಗಿ ತ್ಯಾಗ ಮಾಡಿದ್ದೇನೆ, ಯಾವುದಕ್ಕಾಗಿ ಮಾಡಿದ್ದೇನೆ ಎಂಬುದನ್ನು ತಿಳಿಯದೇ ಮಾಡಬೇಕು. ಅದು ಸಹಜವಾಗಿ ಮೇಲೆ ಬರಬೇಕಾದರೆ ಮೂಲಭೂತ ವಾಗಿ ಪ್ರಭಾವದಿಂದಲೇ ಬರಬೇಕು.

ಧರ್ಮ ಮೊದಲನೆಯದಾಗಿ ನಮಗೆ, ನಮ್ಮನ್ನು ನಾವು ತಿಳಿದುಕೊಳ್ಳುವ ಶಕ್ತಿಯನ್ನು ಕೊಡುತ್ತದೆ. ನಮ್ಮನ್ನು ನಾವು ಗುರುತಿಸಿಕೊಳ್ಳಬೇಕು. ತದನಂತರ ನಮ್ಮ ಶಕ್ತಿಯನ್ನು ಗುರುತಿಸಿಕೊಳ್ಳಬೇಕು. ಇದಾದ ಮೇಲೆ ನಾವು ಇತರರಿಗಾಗಿ ಏನು ಮಾಡಬಹುದು ಎನ್ನುವುದನ್ನು ಗುರುತಿಸಿಕೊಳ್ಳಬೇಕು. ಈ ದಿಸೆಯಲ್ಲಿ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳವರು ನಮ್ಮ ಸಮಾಜಕ್ಕೆ ಆದರ್ಶವಾಗಿದ್ದಾರೆ. 

ಪರಮಪೂಜ್ಯರು ಇವತ್ತು ಯಾವ ಕಾರ್ಯಕ್ರಮಗಳನ್ನು ಸಿದ್ಧಗಂಗಾ ಕ್ಷೇತ್ರದಲ್ಲಿ ಬೆಳಸಿಕೊಂಡು ಬಂದಿದ್ದರೋ, ಅದನ್ನು ಅವರು ಯಾವತ್ತೂ ನಿಲ್ಲಿಸಲಿಲ್ಲ. ಎಲ್ಲಾ ದಿವಸಗಳೂ ನಡೆಸಿಕೊಂಡು ಬಂದಿದ್ದರು. ಸಾಲದ್ದಕ್ಕೆ, ವಿದ್ಯಾರ್ಥಿ ನಿಲಯ ವನ್ನೂ ಕಟ್ಟಿದ್ದಾರೆ. ಇದರ ಸೌಂದರ್ಯವನ್ನು ನೋಡಿದರೆ, ಇದರ ಒಳಗಡೆ ವಿದ್ಯಾರ್ಥಿಗಳಿಗೆ ಕೊಟ್ಟಿರುವಂಥ ಅನುಕೂಲ ಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಶೈಕ್ಷಣಿಕ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆಯನ್ನು ಎಲ್ಲರೂ ಹೊಗಳಿದ್ದಾರೆ. ಆದರೆ ಜೊತೆಗೆ, ಶಿಕ್ಷಣವನ್ನು ದಾನವಾಗಿ ಕೊಟ್ಟಿದ್ದಾರೆ. 

ಜ್ಞಾನ ಅತ್ಯಂತ ಮಹತ್ವದ್ದು ಎಂದು ಗೊತ್ತಿರುವುದರಿಂದಲೇ ವಿದ್ಯಾರ್ಥಿಗಳಿಗೆ ಒಂದು ದೊಡ್ಡ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ. ಜ್ಞಾನಕ್ಕೆ ಇವರು ಬೆಲೆ ಕೊಡದೇ ಇದ್ದಿದ್ದರೆ ಇಷ್ಟೊಂದು ಧರ್ಮಶಾಲೆ ಏಕೆ, ಒಂದು ಸಾಮಾನ್ಯವಾದ ರೂಮನ್ನು ಕಟ್ಟಿದ್ದರೆ ಹುಡುಗರು ಅಲ್ಲಿ ಇರುತ್ತಾರೆ. ಅವರು ಯಾರೂ ಪ್ರತಿಭಟಿಸುವುದಿಲ್ಲ. ಅನ್ನದಾನಕ್ಕಾಗಿ ಎಂತಹ ಸುಂದರವಾದ ಕಟ್ಟಡವನ್ನು ಕಟ್ಟಿದ್ದಾರೆ. ಎಂಜಿನಿಯರ್‌ಗಳಿಗೆ ನಮ್ಮ ಕ್ಷೇತ್ರದಲ್ಲಿರುವ “ಅನ್ನಪೂರ್ಣ’ವನ್ನು  ನೋಡಿಕೊಂಡು ಬನ್ನಿ ಎಂದು ಹೇಳಿ ಕಳುಹಿಸಿದ್ದರು. ಅಲ್ಲಿಯ ವ್ಯವಸ್ಥೆ ಯಾವ ರೀತಿಯಲ್ಲಿದೆ ಎನ್ನುವುದನ್ನೂ ಪರಿಶೀಲಿಸಲು ಸೂಚಿಸಿದ್ದರು. ಅದೇ ರೀತಿ ತಮ್ಮ ಸಿದ್ಧಗಂಗಾ ಕ್ಷೇತ್ರದಲ್ಲಿಯೂ ಈ ವ್ಯವಸ್ಥೆಯನ್ನು ಮಾಡೋಣವೆಂದಿದ್ದರು. ನಾನು ಸಹ ಮಧ್ಯದಲ್ಲಿ ಸಿದ್ಧಗಂಗೆಗೆ ಬಂದು ಹೋಗಿದ್ದೆ. ನಾವು ಪರಸ್ಪರ ಎಷ್ಟೋ ಅನುಭವಗಳನ್ನು ಹಂಚಿಕೊಂಡಿದ್ದೇವೆ. 

Advertisement

ಪೂಜ್ಯರಲ್ಲಿ ಒಂದು ವಿಶಾಲತೆ ಏನಿತ್ತು ಎಂದರೆ ಇಲ್ಲಿಗೆ ಬಂದಂಥ ಜನರಿಗೆ ದಾಸೋಹ ಆಗಬೇಕು. ಇಲ್ಲಿ ಬಡವರಿಗೆ ವೆಚ್ಚವಾಗುತ್ತದೆ. ಈ ದಾಸೋಹ ಎನ್ನುವಂತಹ ಪದಕ್ಕೆ ಏನು ಬೆಲೆ ಇದೆ? ಅದು ಅನ್ನವನ್ನು  ಹಾಕುವಂತಹ ಶಬ್ದಕ್ಕಿಂತಲೂ ಬಹಳ ಭಿನ್ನವಾದದ್ದಾಗಿದೆ. ಬಡವರಿಗೆ ಅನ್ನ ಹಾಕುವಂಥದ್ದು ಎಂದರೆ, ಅದು ಬೇರೆ, ಅದರಲ್ಲಿ, ಸ್ವಲ್ಪ ಅನುಕಂಪ, ಸ್ವಲ್ಪ ಕನಿಕರ ಇರುತ್ತದೆ. ಇಲ್ಲಿ ಕನಿಕರ ಇಲ್ಲ. ದಾಸೋಹವನ್ನು ಮಾಡತಕ್ಕಂಥವರು ಎಲ್ಲಾ ಸಾಕ್ಷಾತ್‌ ಶಿವನ ಸ್ವರೂಪಿಗಳು. ಅವರು ತೃಪ್ತರಾದರೆ ಶಿವನು ತೃಪ್ತನಾಗುತ್ತಾನೆ ಎನ್ನುವಂಥದ್ದು. ನಮ್ಮ ಕ್ಷೇತ್ರದಲ್ಲಿಯೂ ಸಾಂಪ್ರದಾಯಕವಾಗಿ ಅನ್ನದಾನವನ್ನು ಮಾಡುತ್ತೇವೆ. ಆದರೆ, ಇಲ್ಲಿ ಪೂಜ್ಯರು ಮಾಡತಕ್ಕಂಥದ್ದು ನಿಜವಾಗಿಯೂ ಸಾಕ್ಷಾತ್‌ ಶಿವನಿಗೆ ಸಮರ್ಪಣೆಯಾಗುತ್ತದೆ ಎನ್ನುವಂತಹ ದೃಷ್ಟಿಯಲ್ಲಿ.

– ಡಾ| ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ

Advertisement

Udayavani is now on Telegram. Click here to join our channel and stay updated with the latest news.

Next