Advertisement

ನೋಡಿದ್ದೂ ಸುಳ್ಳಾಗಬಹುದು…

05:57 PM Nov 21, 2017 | |

ನನಗೆ ಗೆಳತಿಯ ಅಣ್ಣನ ಪರಿಚಯವಿತ್ತು. ಅವಳ ನೋಟ್‌ಬುಕ್‌ನಲ್ಲಿ ಕಾಣಿಸಿದ ಫ‌ೊàಟೊ ಅವನದ್ದಾಗಿರಲಿಲ್ಲ. ಓಹೋ, ಈ ಹುಡುಗಿ ಲವ್‌ನಲ್ಲಿ ಬಿದ್ದಿರಬೇಕು. ಯಾರಿಗೂ ಗೊತ್ತಾಗದಿರಲಿ ಎಂದು ಪುಸ್ತಕದೊಳಗೆ ಫೋಟೊವನ್ನು ಅಡಗಿಸಿ ಇಟ್ಟಿರಬೇಕು ಎಂದೆಲ್ಲಾ ನಾನು ಕಲ್ಪಿಸಿಕೊಂಡೆ…

Advertisement

ಡಿಗ್ರಿ ಓದುತ್ತಿದ್ದಾಗ ಒಮ್ಮೆ ಹುಷಾರಿಲ್ಲದಂತಾಗಿ ಒಂದು ವಾರ ಕಾಲೇಜಿಗೆ ಹೋಗಲಾಗಿರಲಿಲ್ಲ. ಹಾಗಾಗಿ ಗೆಳತಿಯ ಹತ್ತಿರ ಫಿಸಿಕ್ಸ್‌ ನೋಟ್ಸ್‌ ಕೇಳಿ ಮನೆಗೆ ತಂದು ಟೇಬಲ್‌ನ ಮೇಲೆ ಇಟ್ಟಿದ್ದೆ. ಯಾವತ್ತೂ ನನ್ನ ಪುಸ್ತಕಗಳನ್ನು ತೆಗೆದು ನೋಡದ ಅಪ್ಪ, ಅಂದು ಊಟ ಮಾಡಿ, ಟಿ.ವಿ ನೋಡುತ್ತಾ ಕುಳಿತಿದ್ದರು. ಅಲ್ಲೇ ಇದ್ದ ಗೆಳತಿಯ ಪುಸ್ತಕವನ್ನು ಹಾಗೇ ಕೈಗೆತ್ತಿಕೊಂಡು, ಪುಟ ತಿರುವಿ ಹಾಕತೊಡಗಿದರು.

ಪುಟ ತಿರುವುತ್ತಿದ್ದ ಅವರ ಕೈ ಒಮ್ಮೆಗೆ ತಡೆದು ನಿಂತಿತು. ಒಂದು ಪುಟವನ್ನೇ ತದೇಕಚಿತ್ತದಿಂದ ಗಮನಿಸತೊಡಗಿದರು. ಅವರ ಮುಖ ಇದ್ದಕ್ಕಿದ್ದಂತೆ ಗಂಭೀರವಾಯಿತು. ಏನಾಯೆ¤ಂದು ತಿಳಿಯದ ನನಗಂತೂ ಹೆದರಿಕೆಯಿಂದ ಜೀವ ಬಾಯಿಗೇ ಬಂತು. ಅಪ್ಪ ಹಾಗೇ ಪುಸ್ತಕ ಮಡಚಿಟ್ಟರು. ನಂತರ “ಸ್ವಲ್ಪ ಅಂಗಡಿಗೆ ಹೋಗಿ ಬರೋಣ, ವಾಕಿಂಗಾದರೂ ಆಗುತ್ತೆ ಬಾ’ ಎಂದು ನನ್ನನ್ನು ಕರೆದರು.

ನಾನು ಮೌನವಾಗಿ ಅವರನ್ನು ಹಿಂಬಾಲಿಸಿದೆ.  ಹಾಗೆಯೇ ನಡೆಯುತ್ತಾ, ಕಾಲೇಜಿನ ಬಗ್ಗೆ ವಿಚಾರಿಸುತ್ತಾ “ಕಾಲೇಜಿನಲ್ಲಿ ಯಾರನ್ನಾದರೂ ಇಷ್ಟಪಡುತ್ತಿದ್ದೀಯೇನಮ್ಮಾ?’ ಎಂದು ಕೇಳಿಬಿಟ್ಟರು. ಪ್ರೀತಿ, ಪ್ರೇಮ ಎಂದರೆ ಮಾರುದೂರ ಹಾರುತ್ತಿದ್ದ ನನಗಂತೂ, ಈ ಪ್ರಶ್ನೆಯಿಂದ ಹೃದಯ ಬಾಯಿಗೇ ಬಂದುಬಿಟ್ಟಿತು.

 “ಇಲ್ಲಪ್ಪ, ಹಾಗೇನೂ ಇಲ್ಲ’ ಎನ್ನುವಷ್ಟರಲ್ಲಿ ಕಣ್ಣಿನಲ್ಲಿ ಗಂಗಾ, ಕಾವೇರಿ ಹರಿಯಲು ಶುರು. ಆಗ ಅಪ್ಪ “ಏನಿಲ್ಲಾ, ಪುಸ್ತಕದಲ್ಲಿ ಒಂದು ಹುಡುಗನ ಫೋಟೋ ಸಿಕ್ಕಿತು. ಅದಕ್ಕೇ ಹಾಗೆ ಕೇಳಿದೆ ಪುಟ್ಟಿà, ಬೇಜಾರಾಗಬೇಡ’ ಎಂದು ಜೇಬಿನಿಂದ ಫೋಟೋ ತೆಗೆದು ತೋರಿಸಿದರು. ಒಬ್ಬ ಸು#ರದ್ರೂಪಿ ತರುಣನ ಆ ಫೋಟೊ ಅದಾಗಿತ್ತು. ಅದನ್ನು ನೋಡಿ ಇವನು ಯಾರಿರಬಹುದು ಎಂದು ನನಗೂ ಕುತೂಹಲವಾಯ್ತು.

Advertisement

“ಇದು ಯಾರ ಫೋಟೋ ಅಂತ ನನಗೆ ಗೊತ್ತಿಲ್ಲಪ್ಪ. ನಿಜ ಹೇಳಬೇಕಂದ್ರೆ ಅದು ನನ್ನ ಗೆಳತಿಯ ಪುಸ್ತಕ. ಬೇಕಾದ್ರೆ ಅವಳನ್ನೇ ಕೇಳುತ್ತೇನೆ’ ಎಂದಾಗ ಅಪ್ಪನಿಗೂ ಸಮಾಧಾನವಾಗಿತ್ತು. ಅಪ್ಪನಿಗೇನೋ ಸಮಾಧಾನವಾಯ್ತು. ಆದರೆ, ನನ್ನ ತಲೆಯಲ್ಲಿ ಗುಂಗಿ ಹುಳು ಕೊರೆಯಲು ಪ್ರಾರಂಭಿಸಿತ್ತು.  ಗೆಳತಿಯ ಅಣ್ಣನನ್ನು ನೋಡಿದ್ದೆ, ಪುಸ್ತಕದಲ್ಲಿದ್ದ ಫೋಟೊ ಅವನದ್ದಾಗಿರಲಿಲ್ಲ. ಹಾಗಾದ್ರೆ ಇದ್ಯಾರಿರಬಹುದು?

ಗೆಳತಿ ಲವ್ವಲ್ಲಿ ಬಿದ್ದಿರಬಹುದಾ? ಇದು ಅವಳ ಹುಡುಗನ ಫೋಟೋ ಆಗಿರುಬಹುದಾ?.. ಎಂಬಿತ್ಯಾದಿ ಗುಮಾನಿ ಶುರುವಾಯಿತು. ಆ ರಾತ್ರಿಯೆಲ್ಲಾ ಅದೇ ಯೋಚನೆಯಲ್ಲಿ ನನಗೆ ಚಿಂತೆ, ಕಸಿವಿಸಿ ಒಟ್ಟೊಟ್ಟಿಗೇ ಆಯಿತು. ಪ್ರೀತಿ, ಪ್ರೇಮ ಎಂದು ಜೀವನ ಹಾಳು ಮಾಡಿಕೊಳ್ಳಬೇಡ ಎಂದು ಅವಳಿಗೆ ಎಚ್ಚರಿಕೆ ಕೊಡಬೇಕು ಎಂದು ಯೋಚಿಸುತ್ತಲೇ ನಿದ್ರೆಗೆ ಜಾರಿದ್ದೆ.

ಮರುದಿನ ಕಾಲೇಜಿನಲ್ಲಿ ಅವಳು ಸಿಗುತ್ತಲೇ, “ಯಾರೇ ಇದು?’ ಎಂದು ಫೋಟೋ ತೋರಿಸಿ ಪ್ರಶ್ನಿಸಿದೆ. ಅರಳಿದ ಹೂವಿನಂತಿದ್ದ ಆಕೆಯ ಮುಖ ತಕ್ಷಣ ಬಾಡಿ ಹೋಗಿ, ಬಿಕ್ಕಲು ಪ್ರಾರಂಭಿಸಿದಳು. ಓಹೋ, ಇದು ಲವ್‌ ಫೇಲ್ಯೂರ್‌ ವಿಷಯವೇ ಇರಬೇಕು ಎನ್ನಿಸಿ, ಆಕೆಗೆ ಬುದ್ಧಿ ಹೇಳ್ಳೋಣವೆಂದು ಅವಳ ಪ್ರತಿಕ್ರಿಯೆಗಾಗಿ ಕಾಯುತ್ತಾ ಕುಳಿತೆ.

ಸ್ವಲ್ಪ ಸಮಾಧಾನ ಮಾಡಿಕೊಂಡು, ಕಣ್ಣು, ಮೂಗು, ಬಾಯಿ ಎಲ್ಲಾ ಒರೆಸಿಕೊಂಡ ಮೇಲೆ ಆಕೆ -“ಇವನು ನನ್ನ ದೊಡ್ಡಣ್ಣ. ಮಿಲಿಟರಿಯಲ್ಲಿದ್ದ. ಎರಡು ವರ್ಷಗಳ ಹಿಂದೆ ಅವನ ಮದುವೆಯೂ ಫಿಕ್ಸಾಗಿತ್ತು. ಆದರೆ, ಗಡಿಯಲ್ಲಿ ನಡೆದ ಯುದ್ಧದಲ್ಲಿ ಗುಂಡೇಟಿನಿಂದ ಸತ್ತು ಹೋದ. ಆ ಕೊರಗಿನಲ್ಲೇ ಅಪ್ಪನೂ ಕಣ್ಣು ಮುಚ್ಚಿದರು. ನನ್ನಮ್ಮ ಇನ್ನೂ ಕೊರಗುತ್ತಲೇ ಇದ್ದಾರೆ. ಆ ಶಾಕ್‌ನಿಂದ ನಾವ್ಯಾರೂ ಚೇತರಿಸಿಕೊಂಡಿಲ್ಲ.

ಹಾಗಾಗಿ ಮನೆಯಲ್ಲಿ ಎಲ್ಲೂ ಅವನ ಫೋಟೋ ಹಾಕಿಲ್ಲ. ನಾನು ಹಾಗೂ ಚಿಕ್ಕಣ್ಣ ಇವನ ಫೋಟೋ ಇಟ್ಟುಕೊಂಡಿದ್ದೇವೆ. ನೆನಪಾದಾಗಲೆಲ್ಲಾ ನೋಡುತ್ತಿರುತ್ತೇವೆ’ ಎಂದಾಗ ನನ್ನ ಸಣ್ಣತನದ ಯೋಚನೆಗೆ ನನಗೇ ನಾಚಿಕೆಯಾಗಿತ್ತು. ಕಣ್ಣಿಗೆ ಕಂಡರೂ ಪರಾಂಬರಿಸಿ ನೋಡು ಎಂದು ಹಿರಿಯರು ನನ್ನಂಥವರನ್ನು ನೋಡಿಯೇ ಹೇಳಿದ್ದಿರಬೇಕು ಅನ್ನಿಸಿತು. ಆ ಘಟನೆ ನನಗೆ ಜೀವನದಲ್ಲಿ ಬಹುದೊಡ್ಡ ಪಾಠವನ್ನು ಕಲಿಸಿಬಿಟ್ಟಿತು. 

* ನಳಿನಿ ಟಿ. ಭೀಮಪ್ಪ, ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next