ಆಳಂದ: ಪ್ರಸಕ್ತ ಮುಂಗಾರು ಹಂಗಾಮಿಗೆ ತಾಲೂಕಿನ ಐದು ಹೋಬಳಿ ಸೇರಿ ಒಟ್ಟು 128454 ಹೆಕ್ಟೇರ್ ಪ್ರದೇಶ ಬಿತ್ತನೆಯಲ್ಲಿ 555521ಟನ್ ಆಹಾರಧಾನ್ಯ ಉತ್ಪಾದನೆಗೆ ಕೃಷಿ ಇಲಾಖೆ ಅಂದಾಜು ಗುರಿ ನಿಗದಿಪಡಿಸಿದೆ.
ಸದ್ಯ ಮಳೆ ಸುರಿದರೆ ಮುಂಗಾರು ಬಿತ್ತನೆಗೆ ಸಜ್ಜಾಗಿರುವ ರೈತ ಸಮುದಾಯಕ್ಕೆ ಬಿತ್ತನೆ ಚಿಂತೆಯಾಗಿ ಎಲ್ಲಿ ನೋಡಿದರಲ್ಲಿ ಬೀಜ, ಗೊಬ್ಬರ ಖರೀದಿಗಾಗಿ ಅಲೆಯತೊಡಗಿದ್ದಾರೆ. ಬೇಡಿಕೆ ಕಂಪನಿಯ ಬೀಜ, ಗೊಬ್ಬರ ಖರೀದಿಗೆ ಆಗ್ರೋ ಕೇಂದ್ರ ಮತ್ತು ರೈತ ಸಂಪರ್ಕ ಕೇಂದ್ರಗಳತ್ತ ಮುಖಮಾಡಿದ್ದಾರೆ. ಮುಂಗಾರು ಬಿತ್ತನೆಗೆ ಸಜ್ಜಾಗುವ ರೈತರಿಗೆ ಸಕಾಲಕ್ಕೆ ಬೀಜ, ಗೊಬ್ಬರ ಕೈಗೆಟಕುವ ದರದಲ್ಲಿ ದೊರೆತು ಬಿತ್ತನೆಗೆ ಹದವಾದ ಮಳೆ ಸುರಿದು ಅನುಕೂಲವಾಗಲಿ ಎಂದು ಪ್ರಾರ್ಥಿಸತೊಡಗಿದ್ದಾರೆ.
ಬಿತ್ತನೆ ಕ್ಷೇತ್ರ–ಉತ್ಪಾದನೆ ಗುರಿ
ತಾಲೂಕಿನ ಮಾದನಹಿಪ್ಪರಗಾ, ನಿಂಬರಗಾ, ನರೋಣಾ, ಖಜೂರಿ, ಆಳಂದ ಹೀಗೆ ಐದು ವಲಯಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಮುಂಗಾರಿಗೆ ಭತ್ತ, ಜೋಳ, ಮೆಕ್ಕೆಜೋಳ, ಸಜ್ಜೆ ಹೀಗೆ ಇತರೇ ತೃಣಧಾನ್ಯಗಳ ಬಿತ್ತನೆಗೆ 3399 ಹೆಕ್ಟೇರ್‌ನಲ್ಲಿ 7646.6 ಟನ್ ಉತ್ಪಾದನೆ ಗುರಿಹೊಂದಿದೆ. ಪ್ರಮುಖವಾಗಿ ಬೇಳೆಕಾಳುಗಳಾದ ತೊಗರಿ, ಹುರಳಿ, ಉದ್ದು, ಹೆಸರು ಅಲಸಂದಿ, ಅವರೆ, ಮಟಕಿ ಧಾನ್ಯಗಳ ಒಟ್ಟು ಬಿತ್ತನೆ ಕ್ಷೇತ್ರ 102557 ಹೆಕ್ಟೇರ್ ನಲ್ಲಿ 113662.6ಟನ್ ಉತ್ಪಾದನೆ ಗುರಿಯಿದೆ. ಜೊತೆಗೆ ಎಣ್ಣೆಕಾಳುಗಳಾದ ಶೇಂಗಾ, ಎಳ್ಳು, ಸೂರ್ಯಕಾಂತಿ, ಔಡಲ್, ಗುರೆಳ್ಳು, ಸೋಯಾಬೀನ್ ಧಾನ್ಯಗಳಿಗೆ 13496 ಹೆಕ್ಟೇರ್‌ನಲ್ಲಿ 207833ಟನ್ ಧಾನ್ಯದ ಉತ್ಪಾದನೆ ಗುರಿ ಹೊಂದಿದ್ದು, ವಾಣಿಜ್ಯ ಬೆಳೆಗಳಾದ ಹೈ ಹತ್ತಿ, ಕಬ್ಬು ಸೇರಿ 5402ಹೆಕ್ಟೇರ್‌ನಲ್ಲಿ 413478.4ಟನ್ ಉತ್ಪಾದನೆ ಅಂದಾಜು ಗುರಿಯಿದೆ. ಆದರೆ ಈ ಭಾಗದಲ್ಲಿ ಬಿತ್ತನೆಗೆ ಹೆಚ್ಚು ಒಲವು ತೋರಿದ ಸೋಯಾಬಿನ್ ಬೀಜದ ಬೇಡಿಕೆ ಹೆಚ್ಚಿದ್ದು ಇದರ ಸಂಗಹಕ್ಕಾಗಿ ರೈತರು ಮುಂದಾಗಿದ್ದು, ಬೀಜ ಮತ್ತು ರಸಗೊಬ್ಬರ ಬೆಲೆ ದುಪ್ಪಟ್ಟಾಗಿದ್ದರಿಂದ ಖದೀರಿಸಲು ಹಿಂದೆ ಮುಂದೆ ನೋಡುವಂತಾಗಿದೆ. ಕೃಷಿ ಇಲಾಖೆ ಮೂಲಕ ದೊರೆಯುವ ರಿಯಾಯ್ತಿ ಬೀಜವು ಎರಡ್ಮೂರು ದಿನಗಳಲ್ಲಿ ವಿತರಣೆ ಆರಂಭಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ತಿಳಿಸಿದ್ದಾರೆ.
ಬೀಜ ದಾಸ್ತಾನು: ರಿಯಾಯ್ತಿ ದರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಲು ಐದು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಕೈಗೊಳ್ಳಲಾಗಿದೆ. ಈ ಪೈಕಿ ಸೋಯಾಬಿನ್ ಬೀಜವು ಜೆಎಸ್-335, ಜೆಎಸ್-336-337, ತೊಗರಿ ಜಿಆರ್‌ಜಿ 811, ಹೆಸರು ಬಿಜಿಎಸ್-9, ಉದ್ದು ಡಿಬಿಜಿಬಿ-5 ಮತ್ತು ಟಿಎಯು-1 ತೊಗರಿ ಟಿಎಸ್3ಆರ್ ಬೀಜಗಳನ್ನು ದಾಸ್ತಾನು ಕೈಗೊಳ್ಳಲಾಗಿದೆ. ಎರಡ್ಮೂರು ದಿನಗಳಲ್ಲಿ ವಿತರಣೆ ಕೈಗೊಳ್ಳಲಾಗುವುದು ಎಂದು ಶರಣಗೌಡ ತಿಳಿಸಿದ್ದಾರೆ.