ತುಮಕೂರು: ಜಿಲ್ಲೆಯಲ್ಲಿ ಅರಣ್ಯ ಪ್ರದೇಶವನ್ನು ಹೆಚ್ಚಿಸಲು ಸೀಡ್ ಬಾಲ್ (ಬೀಜದುಂಡೆ) ವಿಧಾನವನ್ನು ಅನು ಸರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಸುಮಾರು 13 ಸಾವಿರ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರನ್ನು ಬಳಸಿಕೊಂಡು ಜೂನ್ ಮಾಹೆಯಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ 4 ಲಕ್ಷ ಬೀಜದುಂಡೆಗಳನ್ನು ತಯಾರಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯ್ತಿ ಮಿನಿ ಸಭಾಂಗಣದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಪ್ರತಿ ತಾಲೂಕಿನ ಲ್ಲಿಯೂ ಅರಣ್ಯ ಇಲಾಖೆಯ ತಲಾ 4 ನರ್ಸರಿಗಳಿವೆ. ಈ ನರ್ಸರಿಗಳಲ್ಲಿ ಸ್ವ- ಸಹಾಯ ಗುಂಪಿನ ಮಹಿಳಾ ಸದಸ್ಯರಿಗೆ ಬೀಜದುಂಡೆಗಳನ್ನು ತಯಾರಿಸುವ ತರಬೇತಿ ಕಾರ್ಯಾಗಾರಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದರು.
ಶಿರಾದಲ್ಲಿ 10 ಸಾವಿರ ಬೀಜದುಂಡೆ ಸಿದ್ಧ: ಈಗಾಗಲೇಶಿರಾ ತಾಲೂಕಿನಲ್ಲಿ 10 ಸಾವಿರ ಬೀಜದುಂಡೆಗಳನ್ನು ಸ್ವ- ಸಹಾಯ ಗುಂಪಿನ ಸದಸ್ಯರು ತಯಾರಿ ಸಿದ್ದಾರೆ. ಈ ಬೀಜದುಂಡೆಗಳನ್ನು ಒಣಗಿಸಿದ ನಂತರ ಗುಡ್ಡಗಳು, ಶಾಲೆ, ವಸತಿ ನಿಲಯಗಳು, ಸರ್ಕಾರಿ ಕಚೇರಿಗಳ ಆವರಣದಲ್ಲಿ ನೆಡಲು ಚಿಂತನೆ ನಡೆಸಲಾಗಿದೆ ಎಂದು ನುಡಿದರು.
ವಿದ್ಯಾರ್ಥಿಗಳಿಗೆ ಬೀಜದುಂಡೆ ತಯಾರಿಕೆ ತರಬೇತಿ: ಬೇವು, ಹುಣಸೆ, ನಿಂಬೆ, ಮಾವು ಮತ್ತಿತರ ಬೀಜಗಳನ್ನು ಬಳಸಿ ಬೀಜದುಂಡೆಗಳನ್ನು ತಯಾರಿಸಲಾಗುತ್ತಿದೆ.
ಪರಿಸರ ಕಾಳಜಿ ಮೂಡಿಸುವ ದೃಷ್ಟಿಯಿಂದ ಶಾಲೆ ವಿದ್ಯಾರ್ಥಿಗಳಿಗೂ ಬೀಜದುಂಡೆಗಳ ತಯಾರಿಕೆ ಬಗ್ಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.