ಕಲಘಟಗಿ: ಪರಿಸರದ ಸಮತೋಲನ ಕಾಪಾಡುವಲ್ಲಿ ಅರಣ್ಯಗಳ ಪಾತ್ರ ಅನನ್ಯವಾಗಿದೆ. ಸಮೃದ್ಧ ಅರಣ್ಯಗಳನ್ನು ಬೆಳೆಸಿ ಸಂರಕ್ಷಿಸುವುದು ವಿದ್ಯಾರ್ಥಿಗಳು ಹಾಗೂ ಇಂದಿನ ಪೀಳಿಗೆಯ ಆದ್ಯ ಕರ್ತವ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಹೇಳಿದರು.
ಬೆಲವಂತರದ ಸರಕಾರಿ ಪ್ರೌಢಶಾಲೆ, ಅರಣ್ಯ ಇಲಾಖೆ ಹಾಗೂ ಸಹ್ಯಾದ್ರಿ ಇಕೋ ಕ್ಲಬ್ ಸಹಯೋಗದೊಂದಿಗೆ ಶಾಲಾವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಆಯೋಜಿಸಲಾಗಿದ್ದ ಬೀಜದುಂಡೆ ತಯಾರಿಕಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅರಣ್ಯಗಳು ಮಾನವನ ಎಲ್ಲ ಅಗತ್ಯತೆಗಳನ್ನು ಪೂರೈಸುತ್ತ ವಾತಾವರಣದ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಮಾನವನ ದುರುದ್ದೇಶ, ಹಸ್ತಕ್ಷೇಪದಿಂದ ಅರಣ್ಯ ನಾಶವಾಗುತ್ತಿದ್ದು, ಭವಿಷ್ಯದಲ್ಲಿ ಇದರ ಪರಿಣಾಮ ಅಪಾಯಕಾರಿಯಾಗಲಿದೆ. ವಿದ್ಯಾರ್ಥಿಗಳೆಲ್ಲರೂ ಸ್ವಯಂ ಪ್ರೇರಣೆಯಿಂದ ವರ್ಷಕ್ಕೊಂದರಂತೆ ಸಸಿಯನ್ನು ನೆಟ್ಟು ಬೆಳೆಸಿ ಪರಿಸರವನ್ನು ಉಳಿಸಬೇಕೆಂದರು.
ಉಪವಲಯಾರಣ್ಯಾಧಿಕಾರಿ ಎಂ.ವೈ. ಚಲವಾದಿ ಮಾತನಾಡಿ, ಪ್ರಸ್ತುತ ವರ್ಷದಲ್ಲಿ ಇಲಾಖೆಯು ಬೀಜ ಬಿತ್ತೋಣ ಪರಿಸರ ಬೆಳೆಸೋಣ ಎಂಬ ಶೀರ್ಷಿಕೆಯಡಿ ಬಿತ್ತೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. ಬೀಜದುಂಡೆಗಳನ್ನು ನಿರ್ಮಿಸುವಾಗ ಬೀಜಗಳ ಬೆಳವಣಿಗೆಗೆ ಅವಶ್ಯಕ ಪೋಷಕಾಂಶಗಳನ್ನು ಮಣ್ಣಿನಲ್ಲಿ ಬೆರೆಸಿರುವುದರಿಂದ ಸಸಿಗಳು ಹೆಚ್ಚು ಪರಿಣಾಮಕಾರಿಯಾಗಿ ಬೆಳೆದು ಬರಲಿವೆ. ಬೆಲವಂತರ ಪ್ರೌಢಶಾಲಾ ಮಕ್ಕಳು ಸಹ್ಯಾದ್ರಿ ಇಕೋ ಕ್ಲಬ್ ಸಹಕಾರದಿಂದ ಇಲಾಖೆಯೊಂದಿಗೆ ಬೀಜದುಂಡೆ ತಯಾರಿಸಲು ಆಸಕ್ತಿ ವಹಿಸಿ ಕೈಜೋಡಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಹಲಸು, ಹೊಂಗೆ, ನೇರಳೆ, ಮತ್ತಿ ಸೇರಿದಂತೆ ಮುಂತಾದ ಬೀಜಗಳನ್ನು ಬಳಸಿ ಸುಮಾರು 2 ಸಾವಿರ ಬೀಜದುಂಡೆಗಳನ್ನು ವಿದ್ಯಾರ್ಥಿಗಳು ತಯಾರಿಸಿದರು. ತಾಲೂಕು ಶಿಕ್ಷಣ ಸಂಯೋಜಕ ಪುಟ್ಟಪ್ಪ ಭಜಂತ್ರಿ, ವೈ.ಜಿ. ಭಗವತಿ, ಅರಣ್ಯ ರಕ್ಷಕ ಉಮೇಶ ಕಡಿ, ಬಿಆರ್‌ಪಿಗಳಾದ ಸುಜಾತಾ ಚವ್ಹಾಣ, ಎನ್.ಎ. ದೇವಿಹೊಸೂರ, ಎಸ್ ವಿವೈಎಂನ ಕಾರ್ಯಕ್ರಮ ವ್ಯವಸ್ಥಾಪಕ ಸಂತೋಷ ಶಿಶುವಿನಹಾಳ, ಎಸ್ ಡಿಎಂಸಿ ಉಪಾಧ್ಯಕ್ಷ ಶಂಕ್ರಪ್ಪ ಕರ್ಲಟ್ಟಿ, ಸದಸ್ಯರಾದ ಶಿವಪುತ್ರಪ್ಪ ಅಸುಂಡಿ, ಸಂಗಪ್ಪ ಸುರಶೆಟ್ಟಿ ಸೇರಿದಂತೆ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.