Advertisement

ಸೀಡ್‌ಬಾಲ್‌ ಪುರಾಣ : ಮೊದಲು ಶುರು ಮಾಡಿದ್ದು ಇವರು

12:30 PM Jun 17, 2017 | |

   ಸೀಡ್‌ಬಾಲ್‌ನ ಪರಿಚಯ ರಾಜ್ಯಕ್ಕೆ ಹೊಸತು. ಕಾಡು ಸಸ್ಯಗಳ ಬೀಜಗಳನ್ನು ಗೊಬ್ಬರ ಮಣ್ಣಿನಿಂದ ತಯಾರಿಸಿದ ಉಂಡೆಯೊಳಗೆ ಸೇರಿಸಿ, ಅದನ್ನು ಬಿಸಿಲಲ್ಲಿ ಒಣಗಿಸಿಟ್ಟು ಮಳೆಗಾಲ ಆರಂಭವಾಗುತ್ತಿದ್ದಂತೆ ಕಾಡಿನಲ್ಲಿ ಬಿತ್ತುವ ಕಾರ್ಯಕ್ರಮವಿದು. ಇದು ವಿದೇಶಗಳಲ್ಲಿ ಬಹುದಿನಗಳಿಂದ ಪ್ರಚಲಿತದಲ್ಲಿದೆ. ಬೀಜದುಂಡೆ ತಯಾರಿಸಿ ಹೆಲಿಕಾಪ್ಟರ್‌ ಮೂಲಕ ಅಲ್ಲಿ ಬಿತ್ತಲಾಗುತ್ತದೆ. ಸೀಡ್‌ಬಾಲ್‌ ತಯಾರಿಸುವ ಯೋಜನೆಗೆ ಮೊದಲು ಚಾಲನೆಯನ್ನು ನೀಡಿದ ಹೆಗ್ಗಳಿಕೆ ಧರ್ಮಸ್ಥಳದ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರದ್ದು. ಕಳೆದ ವರ್ಷ ಪ್ರಾಯೋಗಿಕವಾಗಿ ರಾಜ್ಯದ ಕನಕಪುರ, ಚಿಂತಾಮಣಿ, ಮುಳಬಾಗಿಲು, ದೊಡ್ಡಬಳ್ಳಾಪುರ, ಶಿಡ್ಲಘಟ್ಟ, ಹೊಸಕೋಟೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಪ್ರದೇಶಗಳ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರಿಂದ, ಶಾಲಾ ಮಕ್ಕಳಿಂದ ಸೀಡ್‌ಬಾಲ್‌ ತಯಾರಿಸಿ ಕಾಡಿಗೆ ಎಸೆಯುವ ಕೆಲಸವನ್ನು ಮಾಡಲಾಗಿದೆ. ಸೀಡ್‌ಬಾಲ್‌ ಮೂಲಕ ಬಿತ್ತಿದ ಬೀಜದಿಂದ ಶೇ. 75 ರಷ್ಟು ಗಿಡಗಳು ಹುಟ್ಟಿಕೊಂಡಿವೆ.    ಇದೀಗ ರಾಜ್ಯದಾದ್ಯಂತ ಬೀಜದುಂಡೆ ತಯಾರಿಸಿ, ಆ ಮೂಲಕ ಕಾಡು ಬೆಳೆಸುವ ಅಭಿಯಾನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ 
ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್‌. ಎಚ್‌. ಮಂಜುನಾಥ್‌ರವರ ಮುಂದಾಳತ್ವದಲ್ಲಿ ರಾಜ್ಯದಾದ್ಯಂತ ಮನೆ ಮಾತಾಗಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೈಗೊಂಡಿದೆ. ಇದರಡಿ ಈಗಾಗಲೇ ರಾಜ್ಯದಾದ್ಯಂತ ಬೀಜದುಂಡೆ ತಯಾರಿ ನಡೆಯುತ್ತಿದೆ.

Advertisement

60 ಸಾವಿರ ಸೀಡ್‌ಬಾಲ್‌ 
   ಈ ಬಾರಿ ರಾಜ್ಯದಾದ್ಯಂತ ಹತ್ತು ಲಕ್ಷಕ್ಕೂ ಹೆಚ್ಚು ಸೀಡ್‌ಬಾಲ್‌ ತಯಾರಿಸುವ ಗುರಿ ಧಾರವಾಡದಲ್ಲಾಗಿದೆ. ಇಲ್ಲಿನ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಎನ್‌. ಜಯಶಂಕರ ಶರ್ಮ, ನಿರ್ದೇಶಕರಾದ ದಿನೇಶ್‌ ಎಂ. ಈ ಯೋಜನೆಗೆ ಚಾಲನೆ ನೀಡಲಾಗಿದೆ. ಈಗಾಗಲೇ ಜಿಲ್ಲೆಯ ತಾಲೂಕು, ಗ್ರಾಮ ಮಟ್ಟದಲ್ಲಿ ಫ‌ಲಾನುಭವಿಗಳಿಗೆ ಸೀಡ್‌ಬಾಲ್‌ ತಯಾರಿ ಬಗ್ಗೆ ಅರಿವು ಮೂಡಿಸಿದೆ.

ಸೀಡ್‌ಬಾಲ್‌ ಹೇಗೆ ಮಾಡ್ತಾರೆ?
ಬೇರೆ ಬೇರೆ ಜಾತಿಯ ಬೀಜಗಳನ್ನು ಮಣ್ಣು ಮತ್ತು ಗೊಬ್ಬರದ ಮಿಶ್ರಣಕ್ಕೆ ಸೇರಿಸಿ, ಅದನ್ನು ಚೆಂಡಿನ ಆಕಾರ ಮಾಡಿ, ಒಣಗಿಸಿ, ಆನಂತರ ಕಾಡಿನಲ್ಲಿ ಹರಡುವ ಕಾರ್ಯಕ್ರಮವಿದು. ಮಣ್ಣು ಅಂದರೆ ಕೆಂಪು ಮಣ್ಣು, ಕೆರೆಮಣ್ಣು ಅಥವಾ ಆಯಾ ಪ್ರದೇಶಕ್ಕೆ ಅನುಗುಣವಾದ ಮಣ್ಣು.  ಸಾವಯವ ಗೊಬ್ಬರ, ಸೆಗಣಿ. ಎರೆಗೊಬ್ಬರ ಅಥವಾ ಗಂಜಲ. ಹೊಂಗೆ, ಹುಣಸೆ, ಕರಿಬೇವು, ಹರಳು, ಅಂಟುವಾಳ, ತಾರೆಕಾಯಿ, ಮಾವು, ಕಾಡಿನ ಮರದ ಆರೋಗ್ಯಕರ ಬೀಜಗಳು ಇದಕ್ಕೆ ಬೇಕು.

ಮೂರು ಭಾಗದಷ್ಟು ಮಣ್ಣಿಗೆ, ಒಂದು ಭಾಗದಷ್ಟು ಸೆಗಣಿ ಗೊಬ್ಬರವನ್ನು ಮಿಶ್ರಣ ಮಾಡಬೇಕು. ಅದರಲ್ಲಿನ ತೇವಾಂಶವನ್ನು ಆಧರಿಸಿ ನೀರನ್ನು ಉಪಯೋಗಿಸಿಕೊಳ್ಳಬೇಕು. ಆರೋಗ್ಯಕರ ಬೀಜಗಳನ್ನು ಆಯ್ಕೆ ಮಾಡಿ ಉಂಡೆಯ ಮಧ್ಯಭಾಗದಲ್ಲಿ ಬರುವ ಹಾಗೆ ಬಿಗಿಯಾಗಿ ಚೆಂಡಿನ ಆಕಾರದಲ್ಲಿ ಉಂಡೆ ತಯಾರಿಸಬೇಕು. ಉಂಡೆ ಗಟ್ಟಿಯಾಗಿ ಅಂಟಿಕೊಳ್ಳಲು ಸ್ವಲ್ಪ ಪ್ರಮಾಣದಲ್ಲಿ ಜೇಡಿಮಣ್ಣನ್ನು ಸೇರಿಸಬೇಕು.

ಬಳಸುವುದು ಹೇಗೆ ?
ಉಂಡೆಯನ್ನು ಒಂದೆರಡು ದಿನಗಳ ಕಾಲ ಬಿಸಿಲಲ್ಲಿ ಒಣಗಿಸಿ ತೇವಾಂಶ‌ ಇಲ್ಲದಂತೆ ಮಾಡಬೇಕು. ಹೀಗೆ ತಯಾರಿಸಿದ ಉಂಡೆಯನ್ನು ನಾಲ್ಕರಿಂದ ಆರು ತಿಂಗಳುಗಳ ಕಾಲ ಜೋಪಾನವಾಗಿ ಇಟ್ಟುಕೊಳ್ಳಬೇಕು. ನಂತರ ಬೇಕಾದಾಗ ಇದನ್ನು ಕಾಡಿಗೆ ಎಸೆಯಬಹುದಾಗಿದೆ. ಬೀಜದುಂಡೆ ತಯಾರಿಸಿ ಎರಡು ಗಂಟೆಗಳ ಕಾಲ ಬಿಸಿಲಲ್ಲಿಟ್ಟು ಒಣಗಿಸಿ ನಂತರ ಉಪಯೋಗಿಸಬಹುದು.

Advertisement

ಯೋಜನೆಯಿಂದ ಈಗಾಗಲೇ ಎರಡು ಲಕ್ಷದಷ್ಟು ಬೀಜದುಂಡೆಗಳನ್ನು ತಯಾರಿಸಲಾಗಿದೆ. ಬೇರೆ ಬೇರೆ ತಾಲೂಕುಗಳಲ್ಲಿ ಅಲ್ಲಿನ ಯೋಜನೆಯ ಫ‌ಲಾನುಭವಿಗಳಿಗೆ ಮಾಹಿತಿ, ಮಾರ್ಗದರ್ಶನ ನೀಡಿ, ಅವರಿಂದಲೇ ಬೀಜದುಂಡೆ ತಯಾರಿಸಿ ಮಳೆಗಾಲದ ಸಮಯದಲ್ಲಿ ಕಾಡಿನಲ್ಲಿ, ಕೆರೆಯ ದಂಡೆ, ರಸ್ತೆ ಬದಿ, ಶಾಲಾ ಪರಿಸರ, ರಸ್ತೆ ಬದಿಗಳಲ್ಲಿ ಹರಡಲಾಗುತ್ತದೆ. ಬಾಲ್‌ನಲ್ಲಿರುವ ಗೊಬ್ಬರದ ಅಂಶದಿಂದ ಬೀಜ ಮೊಳಕೆಯೊಡೆದು ಗಿಡ ಚೆನ್ನಾಗಿ ಬಹುಬೇಗ ದೊಡ್ಡದಾಗುತ್ತದೆ. ಕಾಡು ಬೆಳೆಸುವ ಈ ಪ್ರಯತ್ನದತ್ತ ನಾವು ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಕೈಜೋಡಿಸಿದ್ದಲ್ಲಿ ಕಾಡು ಬೆಳೆಸುವ ನಮ್ಮ ಕನಸು ನನಸಾಗಬಹುದಾಗಿದೆ.                      

ಚಂದ್ರಹಾಸ ಚಾರ್ಮಾಡಿ

Advertisement

Udayavani is now on Telegram. Click here to join our channel and stay updated with the latest news.

Next