Advertisement

ನಿಮ್ಮನ್ನು ನೀವು ಪ್ರೀತಿಸಿ ನೋಡಿ

10:20 PM Jul 28, 2019 | Sriram |

ನಾವು ನಮ್ಮನ್ನು ಎಷ್ಟು ಪ್ರೀತಿಸುತ್ತೇವೆ? ಈ ಪ್ರಶ್ನೆಯನ್ನೊಮ್ಮೆ ಎಲ್ಲರ ಮುಂದಿಟ್ಟು ನೋಡಿ.ಹೆಚ್ಚಿನವರ ಬಳಿ ಇದಕ್ಕೆ ಉತ್ತರವಿಲ್ಲ. ಏಕೆಂದರೆ ನಮ್ಮಲ್ಲಿ ಹೆಚ್ಚಿನವರು ಇತರರನ್ನು ಪ್ರೀತಿಸುವ ಭರದಲ್ಲಿ ನಮ್ಮನ್ನು ನಾವು ಪ್ರೀತಿ ಮಾಡುವಲ್ಲಿ ಸೋತು ಹೋಗಿರುವವರೇ ಇರುವುದು. ಆತ/ಕೆ ನನ್ನನ್ನು ಬಿಟ್ಟು ಹೋದಳು, ಅಯ್ಯೋ ಅವರು ನಮ್ಮನ್ನು ಕಡೆಗಣಿಸಿದರಲ್ಲ ಎನ್ನುವ ಯೋಚನೆಗಳಲ್ಲೇ ಜೀವಿತಾವಧಿಯ ಹೆಚ್ಚು ಸಮಯವನ್ನು ಕಳೆಯುವ ಬದಲಾಗಿ ನಾವೇಕೆ ನಮ್ಮನ್ನೇ ಪ್ರೀತಿ ಮಾಡುವುದಕ್ಕೆ ಶುರುವಿಟ್ಟುಕೊಳ್ಳಬಾರದು? ಒಮ್ಮೆ ಯೋಚಿಸಿ.

Advertisement

ಹೌದು, ನಮ್ಮ ಜೀವನವನ್ನು ಪರರು ಮೆಚ್ಚಬೇಕು ಎನ್ನುವ ಹಂಬಲದಲ್ಲಿ ನೋವುಣ್ಣುವ ಬದಲು ನಾವೇ ಮೆಚ್ಚಿಕೊಂಡ ಜೀವನ ಕ್ರಮಗಳನ್ನು ಅಳವಡಿಸಿಕೊಂಡು ನಾವಂದುಕೊಂಡ ಜೀವನವನ್ನು ಏಕೆ ಬದುಕಬಾರದು? ಆಗಲೇ ತಾನೆ ಬದುಕು ಬಂಗಾರವಾಗುವುದು ಸಾಧ್ಯ.

ಇತ್ತೀಚೆಗೆ ಇಬ್ಬರು ಉದ್ಯಮಿಗಳು ಪಾರ್ಕ್‌ ಒಂದರಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಅದರಲ್ಲಿ ಒಬ್ಬರಿಗೆ ಶುಗರ್‌, ಬಿಪಿ ಸೇರಿದಂತೆ ಈ ಕಾಯಿಲೆಗಳ ಅಣ್ಣತಮ್ಮಂದಿರು ಸಹ ಅವರ ಶರೀರದಲ್ಲಿ ವಾಸ ಮಾಡುವುದಕ್ಕೆ ಆರಂಭಿಸಿದ್ದಾರೆ ಎಂದು ಅವರು ತಮ್ಮ ಸ್ನೇಹಿತರ ಬಳಿ ತಮ್ಮ ದುಃಖ ತೋಡಿಕೊಳ್ಳುತ್ತಿದ್ದರು. ಅದಕ್ಕೆ ಪ್ರತಿಯಾಗಿ ಇನ್ನೊಬ್ಬರು ಸಹ ತಮ್ಮ ಪರಿಸ್ಥಿತಿಯೂ ಅದಕ್ಕಿಂತ ಭಿನ್ನವಲ್ಲ ಎಂದು ತಮ್ಮ ಅಳಲನ್ನು ಹಂಚಿಕೊಳ್ಳುವ ಕೆಲಸ ಮಾಡುತ್ತಿದ್ದರು. ಹೀಗೆ ಕಷ್ಟ ಸುಖಗಳೆಲ್ಲದರ ಬಗ್ಗೆ ಚರ್ಚೆ ಮಾಡುತ್ತಾ ಮಾತಿನ ಮಧ್ಯೆ ಅವರಲ್ಲಿ ಯಾರೋ ಒಬ್ಬರು ತಮ್ಮ 75ನೇ ವಯಸ್ಸಿನಲ್ಲಿ ದೈಹಿಕ ವ್ಯಾಯಾಮ ಮಾಡುತ್ತಾರೆ. ಜಿಮ್‌ಗೆ ಹೋಗುತ್ತಾರೆ. ಆದಷ್ಟು ತಮ್ಮ ದೇಹವನ್ನು ಹೆಚ್ಚು ಫಿಟ್‌ ಅÂಂಡ್‌ ಫೈನ್‌ ಆಗಿ ಇಟ್ಟುಕೊಳ್ಳುವಲ್ಲಿ ಹೆಚ್ಚು ಆಸ್ಥೆ ವಹಿಸುತ್ತಿದ್ದಾರೆ ಎಂದು.

ಈ ಇಬ್ಬರು ಗೆಳೆಯರ ಗೊಂದಲಕ್ಕೆ, ಸಮಸ್ಯೆಗೆ ಅವರಲ್ಲಿಯೆ ಔಷಧವಿತ್ತು. ಅವರ ಕಣ್ಣೆದುರಿದ್ದ ಆ ವೃದ್ಧನೇ ಜೀವನ ಪ್ರೀತಿಯ ಸಾರವನ್ನು ಅವರಿಗೆ ತಿಳಿಸಿದ್ದರು. ಆದರೆ ಉದ್ಯಮ, ಸಂಸಾರದ ಜಂಜಡಗಳ ಮಧ್ಯೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಮಾತ್ರ ಸಮಯವೇ ಸಾಲಲಿಲ್ಲ. ಹಣ ಕೂಡಿಡುವುದು, ಸಂಸಾರವನ್ನು ಚೆನ್ನಾಗಿ ನೋಡಿಕೊಳ್ಳುವುದಕ್ಕೆ ನೀಡಿದ ಕಾಳಜಿಯನ್ನು ಶರೀರದ ಪ್ರೀತಿಗೂ ಮೀಸಲಿಟ್ಟಿದ್ದರೆ ಅವರಿಗೆ ಇಳಿವಯಸ್ಸಿನಲ್ಲಿ ಆರೋಗ್ಯ ಸಮಸ್ಯೆ ಕೊಂಚ ಮಟ್ಟಿಗೆ ತಪ್ಪುತ್ತಿತ್ತು. ಇದರರ್ಥ ಪರರನ್ನು ಪ್ರೀತಿಸಬಾರದು ಎಂದಲ್ಲ. ಆದರೆ ಈ ಮಧ್ಯೆ ನಮ್ಮ ಸಂತೋಷಗಳಿಗೂ ಒಂದಷ್ಟು ಕಾಳಜಿ ವಹಿಸಿದರೆ ಬದುಕು ಅದೆಷ್ಟು ಸುಂದರವಾಗಬಹುದು ಎಂದು.

ಆನಂದದ ಮೂಲವನ್ನು ಹುಡುಕುವ ಚಾಕಚಕ್ಯತೆ, ಸಂತೋಷವನ್ನು ಸೃಷ್ಟಿಸಿಕೊಳ್ಳುವ ಮುಗ್ಧತೆ, ಬಂದದ್ದೆಲ್ಲವನ್ನೂ ಅರಗಿಸಿಕೊಂಡು ಮುಂದೆ ನುಗ್ಗುವ ಛಲವೊಂದು ನಮ್ಮ ಬದುಕು ಬದಲಾಯಿಸಬಲ್ಲದು. ಇದಕ್ಕೆ ಬೇಕಾದದ್ದು ನಮ್ಮನ್ನು ನಾವು ಪ್ರೀತಿಸುವ ಮುದ್ದು ಹೃದಯ.

Advertisement

-ಭುವನ ಬಾಬು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next