Advertisement

Election: ಮೋದಿ 3.0 ಸರಕಾರಕ್ಕೆ ಈಗಲೇ ಅಜೆಂಡಾ! ಸಚಿವರಿಗೆ ಗೆಲುವಿನ ಮಂತ್ರ ಬೋಧಿಸಿದ ಮೋದಿ

08:51 AM Mar 04, 2024 | Team Udayavani |

ಹೊಸದಿಲ್ಲಿ: ಮುಂದಿನ ಐದು ವರ್ಷಗಳಲ್ಲಿ ಕೈಗೊಳ್ಳಬಹುದಾದ “ಅಭಿವೃದ್ಧಿ ಕಾರ್ಯ ಕ್ರಮ­ಗಳ ಕ್ರಿಯಾ ಯೋಜನೆ’ ಹಾಗೂ “ವಿಕಸಿತ ಭಾರತ   - 2047′ ಪ್ರಗತಿಯ ಮಂತ್ರದ ಕುರಿತು ವಿವರವಾದ ಮಾಹಿತಿ ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ನಡೆದ 2ನೇ ಅವಧಿಯ ಕೊನೆಯ ಮಂತ್ರಿ ಪರಿಷತ್‌ ಸಭೆಯಲ್ಲಿ ಹಂಚಿ ಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ. ಈ ಸಭೆ 8 ಗಂಟೆಗಳ ಕಾಲ ನಡೆಯಿತು.

Advertisement

ಜತೆಗೆ ಚುನಾವಣೆ ವೇಳೆ ಅಭ್ಯರ್ಥಿಗಳು ಯಾವ ರೀತಿ ನಡವಳಿಕೆ ಪ್ರದರ್ಶಿಸ ಬೇಕು ಎಂಬ ಕುರಿತು ಪ್ರಧಾನಿ ಮೋದಿ ಅವರು ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ. ಮೇಯಲ್ಲಿ ಸರಕಾರ ರಚನೆಯಾದ ಬಳಿಕ ತತ್‌ಕ್ಷಣವೇ ಕೈಗೊಳ್ಳಲಾಗುವ 100 ದಿನಗಳ ಅಜೆಂಡಾದ ಕುರಿತು ಸವಿಸ್ತಾರ ಮಾಹಿತಿ­ಯನ್ನು ಸಭೆಯಲ್ಲಿ ಒದಗಿಸಲಾಯಿತು ಎಂದು ಸರಕಾರದ ಮೂಲಗಳು ತಿಳಿಸಿವೆ.

ವಿಕಸಿತ ಭಾರತದ ನೀಲನಕ್ಷೆ
“ವಿಕಸಿತ ಭಾರತ’ದ ನೀಲ ನಕ್ಷೆಯನ್ನು ತಯಾರಿಸಲು ಎರಡು ವರ್ಷಗಳನ್ನು ತೆಗೆದುಕೊಳ್ಳಲಾಗಿದೆ. ಇಡೀ ಸರಕಾರವು, ಎಲ್ಲ ಸಚಿವಾಲಯಗಳು ಇದರಲ್ಲಿ ಪಾಲ್ಗೊಂಡಿವೆ. ರಾಜ್ಯ ಸರಕಾರಗಳು, ತಜ್ಞರು, ಕೈಗಾರಿಕ, ನಾಗರಿಕ ಮತ್ತು ವೈಜ್ಞಾನಿಕ ಸಂಘ ಸಂಸ್ಥೆಗಳ ಜತೆಗಿನ ಚರ್ಚೆಗಳ ಪರಿಣಾಮವೇ ಅಭಿವೃದ್ಧಿ ಭಾರತಕ್ಕೆ ಕೈಗೊಳ್ಳಬೇಕಾದ ಕ್ರಮಗಳನ್ನು ಗುರುತಿಸಲಾಗಿದೆ. “”ಈ ಕ್ರಿಯಾಯೋಜನೆಗಾಗಿ 2,700ಕ್ಕೂ ಹೆಚ್ಚು ಸಭೆಗಳು, ಕಾರ್ಯಾಗಾರಗಳು, ಸೆಮಿನಾರ್‌ಗಳನ್ನು ವಿವಿಧ ಹಂತಗಳಲ್ಲಿ ನಡೆಸಲಾಗಿದೆ. 20 ಲಕ್ಷಕ್ಕೂ ಅಧಿಕ ಯುವ ಜನರಿಂದ ಸಲಹೆಗಳನ್ನು ಸ್ವೀಕರಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಷ್ಟ್ರ ದೂರದೃಷ್ಟಿ
ವಿಕಸಿತ ಭಾರತ ನೀಲ ನಕ್ಷೆಯೂ ಸಂಪೂರ್ಣ ವಾಗಿ ರಾಷ್ಟ್ರ ದೂರದೃಷ್ಟಿ, ಆಕಾಂಕ್ಷೆಗಳು, ಗುರಿಗಳು ಮತ್ತು ಕ್ರಿಯಾ ಯೋಜನೆಗಳನ್ನು ಒಳಗೊಂಡಿದೆ. ಆರ್ಥಿಕ ಅಭಿವೃದ್ಧಿ, ಸುಸ್ಥಿರ ಅಭಿವೃದ್ಧಿ ಗುರಿಗಳು, ಸಹನೀಯ ಬದುಕು, ಸುಗಮ ವ್ಯಾಪಾರ, ಮೂಲ ಸೌಕರ್ಯ, ಸಮಾಜ ಕಲ್ಯಾಣದ ಗುರಿಗಳನ್ನು ಇದರಲ್ಲಿ ಕಾಣ ಬಹುದು ಎಂದು ಮೂಲಗಳು ತಿಳಿಸಿವೆ.

ಮೋದಿ ಹೇಳಿದ್ದೇನು?
– ವಿವಿಧ ಹಂತಗಳಲ್ಲಿ 2,700 ಸಭೆಗಳು, ಕಾರ್ಯಾಗಾರಗಳು
– 20 ಲಕ್ಷ ಅಧಿಕ ಯುವಜನರು ನೀಡಿದ ಸಲಹೆಗಳು ಸ್ವೀಕಾರ
– ವಯಸ್ಸಾಗುತ್ತಿರುವ ಜನಸಂಖ್ಯೆ ಮತ್ತು ಸವಾಲಗಳು ಬಗ್ಗೆ ಚರ್ಚೆ
– ಆರ್ಥಿಕಾಭಿವೃದ್ಧಿ, ಸಹನೀಯ ಬದುಕು, ಸುಗಮ ವ್ಯಾಪಾರ,
– ಜನ ಕಲ್ಯಾಣದ ಗುರಿ

ಇದನ್ನೂ ಓದಿ: ಚಾಲಕ ಮೊಬೈಲ್‌ನಲ್ಲಿ ಕ್ರಿಕಟ್‌ ವೀಕ್ಷಿಸಿದ್ದೇ ರೈಲು ಅಪಘಾತಕ್ಕೆ ಕಾರಣ: ಅಶ್ವಿ‌ನಿ ವೈಷ್ಣವ್‌

Advertisement

Udayavani is now on Telegram. Click here to join our channel and stay updated with the latest news.

Next