Advertisement

ವಿವೇಕಾನಂದರ ಚರಿತ್ರೆ ಇಣುಕಿ ನೋಡಿ

11:21 AM Jan 15, 2022 | Team Udayavani |

ಶಹಬಾದ: ವೀರ ಸನ್ಯಾಸಿ ವಿವೇಕಾನಂದರಲ್ಲಿನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತ ಹಾಗೂ ಅವರ ಜೀವನ ಚರಿತ್ರೆ ಇಣುಕಿ ನೋಡುವಂಥ ಅಗತ್ಯತೆ ಯುವಕರಿಗಿದೆ ಎಂದು ನಗರಸಭೆ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.

Advertisement

ನಗರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿ.ಬಿ. ಸಂಗೀತಾ ಕಲಾ ಸಂಸ್ಥೆ ವತಿಯಿಂದ ಸ್ವಾಮಿ ವಿವೇಕಾನಂದ 150ನೇ ಜನ್ಮದಿನಾಚರಣೆ ಹಾಗೂ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಗೀತ ಅರಿಯದವರು ಸಂಗೀತಕ್ಕೆ ತಲೆ ತೂಗುತ್ತಾರೆ ಎಂದರೆ ಸಂಗೀತಕ್ಕೆ ಬಹಳ ಶಕ್ತಿಯಿದೆ. ಸಂಗೀತ, ನಾಟ್ಯ ವ್ಯಕ್ತಿಯ ಚೈತನ್ಯವನ್ನು ಹೆಚ್ಚಿಸುವುದಲ್ಲದೇ ಮಾನಸಿಕ ನೆಮ್ಮದಿಯನ್ನು ಉಂಟು ಮಾಡುತ್ತದೆ. ಆದ್ದರಿಂದ ಮಕ್ಕಳು ಓದಿನ ಜತೆಗೆ ಕಲೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ವರದಿಗಾರ ಮಲ್ಲಿನಾಥ ಪಾಟೀಲ ಮಾತನಾಡಿ, ದೇಶದ ಸಂಸ್ಕೃತಿ ಹಾಗೂ ವೈಚಾರಿಕ ಚಿಂತನೆಗಳ ಮೂಲಕ ಭಾರತ ದೇಶದ ಕೀರ್ತಿಯನ್ನು ಹೆಚ್ಚಿಸಿದ ವಿವೇಕಾನಂದರು ನಮಗೆಲ್ಲರಿಗೂ ಆದರ್ಶವಾಗಿದ್ದಾರೆ ಎಂದರು.

ಶಿಕ್ಷಕ ಗಿರಿಮಲ್ಲಪ್ಪ ವಳಸಂಗ, ಸಂಚಾಲಕ ಶಾಂತಪ್ಪ ಹಡಪದ ಅತಿಥಿಗಳಾಗಿದ್ದರು. ಜಿ.ಬಿ.ಸಂಗೀತಾ ಕಲಾ ಸಂಸ್ಥೆಯ ಸಂಸ್ಥಾಪಕ ಮೌನೇಶ್ವರ ಸೋನಾರ ಅಧ್ಯಕ್ಷತೆ ವಹಿಸಿದ್ದರು. ಕುಮಾರಿ ಪೂಜಾ ಮೋನಯ್ಯ ದೇಶಭಕ್ತಿ ಗೀತೆ ಹಾಡಿದರು, ಲೋಕೇಶ ಪತ್ತಾರ ತಬಲಾ ಹಾಗೂ ಮೌನೇಶ್ವರರಾವ್‌ ಸೋನಾರ ಹಾರ್ಮೋನಿಯಂ ಸಾಥ್‌ ನೀಡಿದರು. ಕಲಬುರಗಿಯ ಕುಮಾರಿ ದೇವಿಕಾ ಇಕ್ಕಳಗಿ ಸಂಗಡಿಗರು ನೃತ್ಯ ಪ್ರದರ್ಶಿಸಿದರು. ಸಾಮಾಜಿಕ ಚಿಂತಕ ಲೋಹಿತ್‌ ಕಟ್ಟಿ, ಪ್ರಬುದ್ಧ ಚಿಂತನ ವೇದಿಕೆ ಅಧ್ಯಕ್ಷ ಭರತ್‌ ಧನ್ನಾ, ದ.ವಿ.ಒಕ್ಕಟದ ಸಂಚಾಲಕ ಪೂಜಪ್ಪ ಮೇತ್ರೆ, ನಗರಸಭೆ ಸದಸ್ಯ ಶರಣು ವಸ್ತ್ರದ್‌, ರಾಜಶೇಖರ ದೇವರಮನಿ, ವಿಶ್ವನಾಥ ಹಡಪದ, ರಮೇಶ ಜೋಗದನಕರ್‌, ನಿವೃತ್ತ ಶಿಕ್ಷಕ ಸಿದ್ಧಲಿಂಗಯ್ಯ ಸ್ವಾಮಿ ಹಿರೇಮಠ, ಬಸವರಾಜ ಕೊಲ್ಲೂರ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next