Advertisement

ಹೀಗಿದೆ ನೋಡಿ ಪಡುಮಲೆ ದಾರಿ

10:17 PM Apr 09, 2019 | Team Udayavani |

ಬಡಗನ್ನೂರು: ಪಡುಮಲೆ ಕೋಟಿ- ಚೆನ್ನಯರ ಜನ್ಮಸ್ಥಳ ಅಭಿವೃದ್ಧಿಯಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಹಾಗೂ ಅಧಿಕಾರಿಗಳ ಉದಾಸೀನ ಮನೋಭಾವ ದಿಂದ ಇಲ್ಲಿಗೆ ಬರುವ ಮುಡಿಪಿನಡ್ಕ- ಸುಳ್ಯಪದವು ಜಿ.ಪಂ. ರಸ್ತೆಯ ನಡುವಿನ ಪೇರಾಲು- ಮೈಂದನಡ್ಕ ರಸ್ತೆ ತೀರಾ ಹದ ಗೆಟ್ಟಿದ್ದು, ದೊಡ್ಡ ಹೊಂಡಗಳು ಬಿದ್ದು, ವಾಹನ ಚಾಲಕರು ಹರಸಾಹಸ ಪಡುವಂತಾ ಗಿದೆ. ಮಳೆಗಾಲದ ಮೊದಲು ರಸ್ತೆ ಸರಿಪಡಿಸದಿದ್ದರೆ ಸಂಚಾರ ಇನ್ನಷ್ಟು ದುಸ್ತರವಾಗಲಿದೆ.

Advertisement

ಪಡುಮಲೆ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಪ್ರವಾಸಿ ಗರ ಸಂಖ್ಯೆ ಹೆಚ್ಚಾ ಗುತ್ತಿದೆ. ಆದರೆ ರಸ್ತೆ ಸುಸ್ಥಿತಿ ಯಲ್ಲಿ ಇಲ್ಲದಿರುವುದರಿಂದ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ.

ವಾಹನ ಸಂಚಾರಕ್ಕೆ ಮಾರಕ
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಒನ್‌ ಟೈಮ್‌ ಯೋಜನೆಯಲ್ಲಿ ಮುಡಿಪಿನಡ್ಕ- ಪೇರಾಲು ಮಧ್ಯದ 2.2 ಕಿ.ಮೀ. ಹಾಗೂ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಮೈಂದನಡ್ಕ- ಕನ್ನಡ್ಕದ 2.75 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಜತೆಗೆ ಶಾಸಕರ ಕ್ಷೇತ್ರಾಭಿವೃದ್ಧಿ ಯೋಜನೆಯ 50 ಸಾವಿರ ರೂ.ಗಳಿಂದ ಇದೇ ರಸ್ತೆಯನ್ನು ಕನ್ನಡ್ಕದಿಂದ ನಗರದವರೆಗೆ ಅಭಿವೃದ್ಧಿ ಪಡಿಸಲಾಗುತ್ತದೆ. ಈ ನಡುವೆ ಪೇರಾಲು – ಮೈಂದನಡ್ಕ 1.5 ಕಿ.ಮೀ. ರಸ್ತೆ ತೀರಾ ಹದಗೆಟ್ಟಿದೆ.

ಈಡೇರದ ಭರವೆಸೆ
ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಮುಡಿಪಿನಡ್ಕ- ಸುಳ್ಯಪದವು ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಚುನಾವಣೆ ಹತ್ತಿರ ಬಂದ ಕಾರಣ ಅನುದಾನ ಬಿಡುಗಡೆಗೆ ತಡೆಯಾಗಿತ್ತು. ಸಂಸದ ನಳೀನ್‌ ಕುಮಾರ್‌ ಕಟೀಲು, ಡಿಸೆಂಬರ್‌ನಲ್ಲಿ ಕಾಮಗಾರಿ ಪ್ರಾರಂಭ ಮಾಡುವ ಭರವಸೆ ನೀಡಿದ್ದರು. ಅದು ಈಡೇರಿಲ್ಲ. 10 ವರ್ಷಗಳ ಅವರ ಅವಧಿಯಲ್ಲಿ ಬಡಗನ್ನೂರು ಗ್ರಾ.ಪಂ.ಗೆ ಒಟ್ಟು 6 ಲಕ್ಷ ರೂ. ಅನುದಾನ ಬಂದಿದೆ.

ಲೋಕಸಭಾ ಚುನಾವಣೆ ಸಮೀಪ ವಾಗುತ್ತದ್ದಂತೆ ಶಾಸಕ ಸಂಜೀವ ಮಠಂದೂರು ಕ್ಷೇತ್ರಾಭಿವೃದ್ಧಿ ಯೋಜನೆ ಯಡಿ 80 ಲಕ್ಷ ರೂ. ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು. ಫೆ. 20ಕ್ಕೆ ಟೆಂಡರ್‌ ನಡೆಯಲಿದೆ ಎಂದು ಪ್ರಕಟವಾದರೂ ಮೂರು ಬಾರಿ ಮುಂದೂಡಲಾಯಿತು. ಮಾ. 10ಕ್ಕೆ ಚುನಾವಣಾ ನೀತಿ ಸಂಹಿತೆ ಹೊರ ಬಂತು. ಹೀಗಾಗಿ, ಕಾಮಗಾರಿ ಟೆಂಡರ್‌ ನಡೆದಿಲ್ಲ. ಆದರೆ ರಸ್ತೆ ಗುದ್ದಲಿ ಪೂಜೆ ನಡೆಸಲಾಗಿದೆ. ರಸ್ತೆ ಅಭಿವೃದ್ಧಿ ಅನಂತರವೇ ಮತ ಕೇಳಲು ಬರಬೇಕು. ಇಲ್ಲವಾದರೆ ಮತದಾನ ಬಹಿಷ್ಕಾರ ಮಾಡಲಾಗುವುದು ಎಂದು ಗ್ರಾಮಸ್ಥರು ಹೇಳುತ್ತಾರೆ. ಈ ಮಧ್ಯೆ ಬಡಗನ್ನೂರು ಹಿತರಕ್ಷಣ ಸಮಿತಿ ವತಿಯಿಂದ ಎರಡು ಬಾರಿ ಶಾಸಕರನ್ನು ಭೇಟಿ ಮಾಡಿ ರಸ್ತೆ ಅಭಿವೃದ್ಧಿ ಪಡಿಸುವಂತೆ ಮನವಿ ಸಲ್ಲಿಸಲಾಗಿತ್ತು.

Advertisement

ರಸ್ತೆ ಅಭಿವೃದ್ಧಿಗೆ ಹೋರಾಟ
ಈ ರಸ್ತೆ ಅಭಿವೃದ್ಧಿ ಪಡಿಸುವಂತೆ ಬಡಗನ್ನೂರು ಹಿತರಕ್ಷಣ ಸಮಿತಿ ವತಿಯಿಂದ ಒಂದು ದಿವಸ ರಸ್ತೆ ತಡೆ ಮಾಡಿ ಶಾಂತಿಯುತ ಪ್ರತಿಭಟನೆ, ಬಳಿಕ ಒಂದು ವಾರ ಆಹೋರಾತ್ರಿ ಸತ್ಯಾಗ್ರಹ, ಕೌಡಿಚ್ಚಾರು ಬಳಿ ಮಾಣಿ- ಮೈಸೂರು ಹೆದ್ದಾರಿಯಲ್ಲಿ 5 ನಿಮಿಷ ಕಾಲ ರಸ್ತೆ ತಡೆ, ಶಾಸಕರ ಕಚೇರಿ, ಎ.ಸಿ. ಕಚೇರಿ ಎದುರು ಪ್ರತಿಭಟನೆ, ಉಸ್ತುವಾರಿ ಸಚಿವ, ಲೋಕಸಭಾ ಸದಸ್ಯರ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಇದರಿಂದಾಗಿ ಮುಡಿಪಿನಡ್ಕ- ಸುಳ್ಯಪದವು ಮಧ್ಯದ 7 ಕಿ.ಮೀ. ರಸ್ತೆಯಲ್ಲಿ 5 ಕಿ.ಮೀ. ಅಭಿವೃದ್ಧಿಗೊಂಡಿದೆ. ಉಳಿದ 2 ಕಿ.ಮೀ. ಅಭಿವೃದ್ಧಿಯಾಗಬೇಕಿದೆ.

ಸರಕಾರಿ ಬಸ್‌ ಸಂಚಾರ
ಪ್ರತಿ ದಿನ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ 10 ಬಾರಿ ಕೆಸ್ಸಾರ್ಟಿಸಿ, 8 ಬಾರಿ ಖಾಸಗಿ ಬಸ್‌ಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಜತೆಗೆ ಮೂರು ಖಾಸಗಿ ಅಂಗ್ಲ ಮಾಧ್ಯಮ ಶಾಲೆಯ ಬಸ್‌, ಖಾಸಗಿ ವಾಹನ ಸಂಚರಿಸುತ್ತಿರುತ್ತವೆ.

ಭರವಸೆಯೊಂದೇ ಸಾಧನೆ
ಭರವಸೆ ನೀಡುವುದೊಂದೇ ರಾಜಕೀಯ ಪಕ್ಷದವರ ಸಾಧನೆ. ಯಾವ ಪಕ್ಷ ಅಧಿಕಾರ ಹಿಡಿದರೂ ಈ ಭಾಗದ ಜನರ ಗೋಳು ಕೇಳುವವರಿಲ್ಲ. ಅನಾರೋಗ್ಯ ಪೀಡಿತರನ್ನು ಕರೆದೊಯ್ಯಲು ಜನ ಪರದಾಡುವಂತಾಗಿದೆ.
ಪ್ರಶಾಂತ್‌ ಭಟ್‌ ಸಿ.ಎಚ್‌. ವಕೀಲ

ಚುನಾವಣೆ ಬಳಿಕ ಕೆಲಸ
ಚುನಾವಣಾ ನೀತಿ ಸಂಹಿತೆ ಬಂದ ಕಾರಣ ಟೆಂಡರ್‌ ಕರೆಯಲು ಸಾಧ್ಯವಾಗಿಲ್ಲ. ಚುನಾವಣೆ ಅನಂತರ ಟೆಂಡರ್‌ ಓಪನ್‌ ಮಾಡಿ ಗುತ್ತಿಗೆಗಾರರನ್ನು ಆಯ್ಕೆ ಮಾಡಿ ವರ್ಕ್‌ ಆರ್ಡರ್‌ ನೀಡಲಾಗುವುದು.
ಬಿ. ರಾಜಾರಾಮ್‌
ಸಹಾಯ ಕಾರ್ಯನಿರ್ವಾಹಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಪುತ್ತೂರು

ದಿನೇಶ್‌ ಪೇರಾಲು

Advertisement

Udayavani is now on Telegram. Click here to join our channel and stay updated with the latest news.

Next