Advertisement

ಬೆಟ್ಟ ನೋಡಿ ಹುಟ್ಟಿದ ಕಥೆ

12:36 PM May 02, 2018 | |

ಹಿರಿಯ ಗೀತರಚನೆಕಾರ ಮತ್ತು ಹಂಸಲೇಖ ಅವರು “ಶಕುಂತ್ಲೆ’ ಎಂಬ ಚಿತ್ರವನ್ನು ನಿರ್ದೇಶಿಸುವ ಬಗ್ಗೆ ಹೇಳುತ್ತಲೇ ಇದ್ದಾರೆ. ಈಗಾಗಲೇ ಅವರು ಪಾತ್ರ ವರ್ಗದ ಆಡಿಷನ್‌ ಮಾಡಿದ್ದಾರೆ, ಲೊಕೇಶನ್‌ಗಳನ್ನು ಹುಡುಕುತ್ತಿದ್ದಾರೆ ಅಂತೆಲ್ಲಾ ಸುದ್ದಿ ಇತ್ತು. ಆದರೆ, ಚಿತ್ರ ಯಾವಾಗ ಶುರು ಎಂಬ ಮಾಹಿತಿ ಮಾತ್ರ ಇರಲಿಲ್ಲ. ಈಗ ಹಂಸಲೇಖ ತಮ್ಮ ನಿರ್ದೇಶನದ ಮೊದಲ ಚಿತ್ರದ ಮುಹೂರ್ತವನ್ನು ಪಕ್ಕಾ ಮಾಡಿದ್ದಾರೆ.

Advertisement

ಹಾಗೆಯೇ ಚಿತ್ರದ ಬಿಡುಗಡೆಯ ದಿನಾಂಕವನ್ನೂ ಫಿಕ್ಸ್‌ ಮಾಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ, ಮೇ 15ಕ್ಕೆ ಚಿತ್ರದ ಮುಹೂರ್ತ ನಡೆದು, ನವೆಂಬರ್‌ ಒಂದಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಇಷ್ಟಕ್ಕೂ ಚಿತ್ರ ಯಾಕೆ ತಡವಾಗುತ್ತಿದೆ ಎಂಬ ಪ್ರಶ್ನೆ ಬರಬಹುದು. ಅದಕ್ಕೆ ಕಾರಣ, ಗ್ರಾಫಿಕ್ಸ್‌ ಎಂಬ ಉತ್ತರ ಅವರಿಂದ ಬರುತ್ತದೆ. “ಚಿತ್ರ ಹಿಂದೆಯೇ ಶುರುವಾಗಬೇಕಿತ್ತು. ನಿರ್ಮಾಪಕ ಅಪ್ಪಣ್ಣ ಸಂತೋಷ್‌ ನನ್ನ ಅಕೌಂಟ್‌ಗೆ ದುಡ್ಡು ಹಾಕಿಯೇ ಹಲವು ತಿಂಗಳುಗಳಾಗಿವೆ.

ಆದರೆ, ಚಿತ್ರ ತಡವಾಗಿದ್ದಕ್ಕೆ ಕಾರಣ, ನನ್ನ ಕಲ್ಪನೆಗೆ ತಕ್ಕಂತೆ ಒಂದಿಷ್ಟು ಗ್ರಾಫಿಕ್ಸ್‌ನ ಅವಶ್ಯಕತೆ ಇತ್ತು. ಬೆಟ್ಟಗುಡ್ಡಗಳ ಸಾಲಿನಲ್ಲಿ ಒಂದು ಆಕೃತಿ ಬೇಕಾಗಿತ್ತು. ನಮ್ಮಲ್ಲಿ ಏನಾಗುತ್ತೆ ಎಂದರೆ, ಹೇಳ್ಳೋನು ಸರಿಯಾಗಿ ಹೇಳಲ್ಲ, ಕೇಳಿಸಿಕೊಳ್ಳೋನು ಸರಿಯಾಗಿ ಕೇಳಿಸಿಕೊಳ್ಳಲ್ಲ. ಹಾಗಾಗಿ ಏನೇನೋ ಆಗುತ್ತೆ. ನಮ್ಮ ಕೇಸ್‌ನಲ್ಲೂ ಅದೇ ಆಯಿತು. ನಾವು ಹೇಳಿದ್ದು ಅವರಿಗೆ ಸರಿಯಾಗಿ ತಲುಪುತ್ತಿರಲಿಲ್ಲ.

ಕೊನೆಗೆ ನಮ್ಮ ಕಲಾ ನಿರ್ದೇಶಕರು ಒಂದು ಮಿನಿಯೇಚರ್‌ ಮಾಡಿ ಅದನ್ನು ಗ್ರಾಫಿಕ್ಸ್‌ ತಂಡದವರಿಗೆ ಅದನ್ನು ತೋರಿಸಿದಾಗ, ಅವರಿಗೆ ಸ್ಪಷ್ಟವಾಯಿತು. ಆ ನಂತರ ಗ್ರಾಫಿಕ್ಸ್‌ ಕೆಲಸ ಶುರುವಾಯಿತು. ಗ್ರಾಫಿಕ್ಸ್‌ ಕೆಲಸವೆಲ್ಲ ಆಗುತ್ತಿರುವುದರಿಂದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ಹೆಚ್ಚು ಸಮಯ ಬೇಕಾಗಿಲ್ಲ. ಇನ್ನು ಶೂಟಿಂಗ್‌ಗೆ ಹೊರಡುವುದೊಂದೇ ಬಾಕಿ. ಒಮ್ಮೆ ಚಿತ್ರೀಕರಣಕ್ಕೆ ಹೋದರೆ, ಒಂದೇ ಸರಿ ಕೆಲಸ ಮುಗಿಸಿಕೊಂಡು ಬರುವ ಯೋಚನೆ ಇದೆ.

ಚಿತ್ರಕ್ಕೆ ನಾಲ್ಕು ಸೆಟ್‌ಗಳ ಅವಶ್ಯಕತೆ ಇದೆ. ಜೊತೆಗೆ ಕಠ್ಮಂಡು, ಮಡಿಕೇರಿ ಮತ್ತು ಸಹ್ಯಾದ್ರಿ ಪರ್ವತಗಳಲ್ಲೂ ಚಿತ್ರೀಕರಣ ಮಾಡುತ್ತೇವೆ. ನನ್ನ ಒಂದು ಕಲ್ಪನೆಗೆ ಸೂಕ್ತವಾದ ಜಾಗ ಹುಡುಕುತ್ತಿದ್ದೆ. ಆದರೆ, ಎಲ್ಲೂ ಸಿಕ್ಕಿರಲಿಲ್ಲ. ನನ್ನ ಕಲ್ಪನೆಯೇ ಅತಿಯಾಯ್ತು ಅಂತ ಎಲ್ಲರೂ ಹೇಳುತ್ತಿದ್ದರು. ಕೊನೆಗೆ ಮಡಿಕೇರಿಯಲ್ಲಿ ಒಬ್ಬ ಅಜ್ಜ ಒಂದು ಜಾಗ ತೋರಿಸಿದರು.

Advertisement

ಏಳು ದೇವರ ಗುಂಡಿ ಎಂಬ ಜಾಗ ಇದೆ. ಅಲ್ಲಿ ಮನುಷ್ಯರು ಹೋಗುವುದೂ ಕಷ್ಟ. ನನ್ನ ಕಲ್ಪನೆಗೆ ತಕ್ಕ ಹಾಗಿದೆ ಆ ಲೊಕೇಶನ್‌. ಅಲ್ಲಿ ಇದುವರೆಗೂ ಯಾರೂ ಚಿತ್ರೀಕರಣ ಮಾಡಿರಲಿಲ್ಲ. ಈಗ ಲೊಕೇಶನ್‌ಗಳು ಸಿಕ್ಕಿವೆ, ಹಾಡುಗಳ ಕೆಲಸ ಮುಗಿದಿದೆ, ಕಲಾವಿದರು ಫೈನಲ್‌ ಆಗಿದೆ … ಇನ್ನು ಚಿತ್ರೀಕರಣಕ್ಕೆ ಹೋಗುವುದೊಂದೇ ಬಾಕಿ’ ಎನ್ನುತ್ತಾರೆ ಹಂಸಲೇಖ.

ಬಾಲಿವುಡ್‌ನ‌ ದೊಡ್ಡ ನಟಿ ನಟಿಸುವ ಸಾಧ್ಯತೆ: ಈ ಚಿತ್ರ ಕನ್ನಡ ಮತ್ತು ಹಿಂದಿಯಲ್ಲಿ ನಿರ್ಮಾಣವಾಗುವ ಸಾಧ್ಯತೆ ಇದೆಯಂತೆ. “ಚಿತ್ರ ಬೆಳೆಯುತ್ತಾ ಹೋದಂತೆ, ಹಿಂದಿಯಲ್ಲೂ ಯಾಕೆ ನಿರ್ಮಾಣ ಮಾಡಬಾರದು ಎಂಬ ಯೋಚನೆ ಬಂತು. ಅದಿನ್ನೂ ತೀರ್ಮಾನ ಆಗಿಲ್ಲ. ಎರಡೂ ಭಾಷೆಗಳಲ್ಲಿ ನಿರ್ಮಾಣ ಆಗಬಹುದು ಅಥವಾ ಕನ್ನಡದಲ್ಲಿ ಮಾತ್ರ ಆಗಬಹುದು. ಅದಿನ್ನೂ ತೀರ್ಮಾನ ಆಗಬೇಕಿದೆ. ಒಟ್ಟಿನಲ್ಲಿ ಚಿತ್ರದಲ್ಲಿ ಇಲ್ಲಿಯ ಕಲಾವಿದರ ಜೊತೆಗೆ, ಬಾಲಿವುಡ್‌ ಸ್ಟಾರ್‌ಗಳೂ ನಟಿಸುತ್ತಿದ್ದಾರೆ. ಈಗಾಗಲೇ ಅಲ್ಲಿಯ ಟಾಪ್‌ ಕಲಾವಿದರನ್ನು ಮುಟ್ಟಿದ್ದೀನಿ.

ಈಗಾಗಲೇ ಐದು ಜನ ಪ್ರಾಸ್ಥಾವಿಕ ಒಪ್ಪಿಗೆ ನೀಡಿದ್ದಾರೆ. ಅದರಲ್ಲಿ ಯಾರು ಫೈನಲ್‌ ಆಗುತ್ತಾರೆ ಗೊತ್ತಿಲ್ಲ. ಮಾತುಕತೆ ನಡೆಯುತ್ತಿದೆ. ಎಲ್ಲವೂ ಇನ್ನೊಂದು 15 ದಿನಗಳಲ್ಲಿ ಪಕ್ಕಾ ಆಗಲಿದೆ. ಚಿತ್ರದ ನಾಯಕ, ನಾಯಕಿಯನ್ನು ಆಡಿಷನ್‌ ಮೂಲಕ ಆಯ್ಕೆ ಮಾಡಲಾಗಿದೆ.ಅದಲ್ಲದೆ 16 ಹೊಸ ಸಪೋರ್ಟಿಂಗ್‌ ಕಲಾವಿದರು ಈ ಚಿತ್ರದಲ್ಲಿ ಇರುತ್ತಾರೆ. ಚಿತ್ರದಲ್ಲಿ ಏಳು ಹಾಡುಗಳಿವೆ. ಒಂದಂತೂ ಸತ್ಯ, “ಶಕುಂತ್ಲೆ’ ಭಾರತದ ಹೆಮ್ಮೆಯಾಗುತ್ತದೆ’ ಎಂದು ವಿಶ್ವಾಸದಿಂದ ನುಡಿಯುತ್ತಾರೆ ಹಂಸಲೇಖ.

ಸ್ಲಿಪಿಂಗ್‌ ಲೇಡಿ ನೋಡಿದಾಗ ಹುಟ್ಟಿದ ಕಥೆ: ಈ ಚಿತ್ರದ ಕಥೆ ಹುಟ್ಟಿದ್ದು ಸುಮಾರು 25 ವರ್ಷಗಳ ಹಿಂದೆ ಎಂದು ಫ್ಲಾಶ್‌ಬ್ಯಾಕ್‌ಗೆ ಜಾರುತ್ತಾರೆ ಹಂಸಲೇಖ. “25 ವರ್ಷಗಳ ಹಿಂದೆ ಹೊಳೆದ ಕಥೆ ಇದು. ನಾನು ಮತ್ತು ಯಜಮಾನ್ರು (ರವಿಚಂದ್ರನ್‌) ಆಗ “ಪುಟ್ನಂಜ’ ಮತ್ತು “ಚಂದಮಾಮ’ ಚಿತ್ರದ ಹಾಡುಗಳ ಕಂಪೋಸಿಂಗ್‌ಗೆಂದು ಊಟಿಯಲ್ಲಿದ್ವಿ. ಒಂದು ದಿನ ಬೆಳಿಗ್ಗೆ ಮುಂಚೆ ವಾಕಿಂಗ್‌ ಮಾಡುವಾಗ, ಹಾಡುಗಳ ಚರ್ಚೆ ನಡೆಯುತ್ತಿತ್ತು.

ಆ ಸಂದರ್ಭದಲ್ಲಿ ಯಜನಾನ್ರು, “ಇಲ್ಲೊಂದು ಸ್ಲಿàಪಿಂಗ್‌ ಬ್ಯೂಟಿ’ ಇದೆ ನೋಡಿ ಅಂತ ದೂರದಲ್ಲಿರುವ ಬೆಟ್ಟಗಳ ಸಾಲು ತೋರಿಸಿದರು. ಆ ಬೆಟ್ಟಗಳ ಸಾಲು ಹೇಗಿದೆ ಎಂದರೆ, ಅಲ್ಲೊಬ್ಬಳು ಮಲಗಿರುವ ಆಕೃತಿ ಕಾಣುತ್ತದೆ.  ಸಂದರ್ಭದಲ್ಲಿ ನನಗೆ ಒಂದು ಎಳೆ ಹೊಳೆಯಿತು. ಕಥೆ ಮಾಡಿ, ಚಿತ್ರಕ್ಕೆ “ಕನ್ಯಾಕುಮಾರಿ’ ಅಂತ ಹೆಸರಿಟ್ಟೆ. ಆದರೆ, ಆ ಹೆಸರಿನಲ್ಲಿ ಸಿನಿಮಾ ಮಾಡಿದರೆ, ಅನವಶ್ಯಕ ಗಲಾಟೆಗಳಾಗಬಹುದು.

ನನಗೆ ಯಾರನ್ನೂ ಡಿಸ್ಟರ್ಬ್ ಮಾಡುವುದಕ್ಕೆ ಇಷ್ಟವಿಲ್ಲ. ಹಾಗಾಗಿ ಬೇರೆ ಹೆಸರು ಯೋಚಿಸುತ್ತಿದ್ದಾಗ, ನನ್ನ ಹೆಂಡತಿ ಸೂಚಿಸಿದ ಹೆಸರು “ಶಕುಂತ್ಲೆ’. ನಮ್ಮ ಪುರಾಣಗಳಲ್ಲಿ ಸೀತೆ ಮತ್ತು ಶಕುಂತಳೆ ಇಬ್ಬರೂ ಪ್ರೀತಿಯ ಸಂಕೇತವಾಗಿ ಹೊರಹೊಮ್ಮಿದವರು. ಎಲ್ಲಾ ಕವಿಗಳನ್ನು ಇವರಿಬ್ಬರನ್ನೂ ಇಟ್ಟುಕೊಂಡು ಸಾಕಷ್ಟು ಕವಿತೆ, ಕಥೆಗಳನ್ನು ಬರೆದರು. “ಶಕುಂತ್ಲೆ’ ಎಂಬ ಹೆಸರು ನನ್ನ ಚಿತ್ರಕ್ಕೆ ಹೇಳಿ ಮಾಡಿಸಿದಂತಿದೆ’ ಎನ್ನುತ್ತಾರೆ ಹಂಸಲೇಖ.

ಸ್ಫೂರ್ತಿ ಕೊಟ್ಟ ಜನ್ನನಿಗೆ ಥ್ಯಾಂಕ್ಸ್‌: ಎಲ್ಲಾ ಸರಿ, ಹಂಸಲೇಖ ಏನು ಹೇಳುವುದಕ್ಕೆ ಹೊರಟಿದ್ದಾರೆ ಎಂಬ ಪ್ರಶ್ನೆ ಬರಬಹುದು. ಮನಸ್ಸು ಎಷ್ಟು ದೊಡ್ಡ ವೈದ್ಯ ಎಂದು ಈ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದ್ದಾರಂತೆ. “ಕಣ್ಣರಿಯದಿದ್ದರೆ ಕರುಳರಿಯದೆ ಎಂಬ ಜನ್ನನ ವಾಕ್ಯ ಈ ಚಿತ್ರಕ್ಕೆ ಸ್ಫೂರ್ತಿ. ಆ ಸಾಲು ಇಟ್ಟುಕೊಂಡು ಚಿತ್ರ ಮಾಡುತ್ತಿದ್ದೇನೆ. ಹಾಗಾಗಿ ಮೊದಲ ಥ್ಯಾಂಕ್ಸ್‌ ಜನ್ನನಿಗೆ’ ಎನ್ನುವ ಹಂಸಲೇಖ, ಜೂನ್‌ 23ರ ಅವರ ಹುಟ್ಟುಹಬ್ಬಕ್ಕೆ ಇನ್ನೊಂದು ಸರ್‌ಪ್ರೈಸ್‌ ಕೊಡುತ್ತಾರಂತೆ. ಅಂದು ಅವರ ಇನ್ನೊಂದು ಚಿತ್ರ ಸೆಟ್ಟೇರಲಿದೆಯಂತೆ. ಅದ್ಯಾವುದು ಎಂಬ ಕುತೂಹಲವಿದ್ದರೆ, ಉತ್ತರಕ್ಕೆ ಇನ್ನೂ ಒಂದು ತಿಂಗಳು ಕಾಯಬೇಕು.

Advertisement

Udayavani is now on Telegram. Click here to join our channel and stay updated with the latest news.

Next