ಸುಳ್ಯ: ಸರಕಾರದ ಯೋಜನೆಗಳನ್ನು ಆರಂಭಿಸುವ ಮೊದಲು ಅರಣ್ಯ ಅಥವಾ ಕಂದಾಯ ಇಲಾಖೆಗೆ ಸೇರಿದ ಸ್ಥಳವೋ ಎಂಬುದನ್ನು ಪರಿಶೀಲಿಸಿ ಯೋಜನೆಯ ಕಾಮಗಾರಿ ಆರಂಭಿಸಿ ಎಂದು ಸುಳ್ಯ ತಾ.ಪಂ. ಆಡಳಿತಾಧಿಕಾರಿ ಗಾಯತ್ರಿ ನಾಯಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸುಳ್ಯ ತಾ.ಪಂ. ಸಾಮಾನ್ಯ ಸಭೆ ತಾ.ಪಂ. ಸಭಾಂಗಣದಲ್ಲಿ ಗಾಯತ್ರಿ ನಾಯಕ್ ಅಧ್ಯಕ್ಷತೆಯಲ್ಲಿ ನಡೆಯಿತು. ಘನತ್ಯಾಜ್ಯ ಘಟಕ ಯೋಜನೆಗಳು ಸೇರಿ ಇತರ ಯೋಜನೆಗಳಿಗೆ ಸ್ಥಳ ಗುರುತು ಮಾಡುವ ಮೊದಲು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯನ್ನು ಸಂಪರ್ಕಿಸಿ ಸ್ಥಳ ಪರಿಶಿಲನೆ ನಡೆಸಬೇಕು. ಕಾಮಗಾರಿ ಅರ್ಧ ಆದ ಬಳಿಕ ಅರಣ್ಯ ಇಲಾಖೆಯ ತಡೆಗಳಂತಹ ಕಾನೂನುಗಳಿಂದ ಯೋಜನೆ ವಿಳಂಬವಾಗುತ್ತದೆ. ವಿವಾದ ಹುಟ್ಟುವ ಮೊದಲೇ ಬಗೆಹರಿಸುವ ಕೆಲಸ ನಡೆಯಬೇಕು ಎಂದು ನಾಯಕ್ ಹೇಳಿದರು.
ಐವತೊಕ್ಲು ಗ್ರಾಮದ ಸರ್ವೇ ನಂಬರ್ 6 ಮತ್ತು 7 ರಲ್ಲಿ ವಾಸ್ತವ್ಯ ಹೊಂದಿರುವ 12 ಕುಟುಂಬಗಳಿಗೆ 94ಸಿ ಯೋಜನೆಯಡಿ ಹಕ್ಕುಪತ್ರ ನೀಡುವ ವಿಚಾರಕ್ಕೆ ವಿಸ್ಕ್ರತ ವರದಿ ನೀಡಲು ಕಂದಾಯ ಇಲಾಖೆಗೆ ಸೂಚನೆ ನೀಡಿದರು. ಕೋವಿಡ್ ಲಸಿಕೆ ಪ್ರಕರಣದಲ್ಲಿ ಶೇ. 99 ಪ್ರಗತಿ ಆಗಿದೆ ಎಂದು ಆರೋಗ್ಯ ಇಲಾ ಖೆಯ ಅಧಿಕಾರಿಗಳು ತಿಳಿಸಿದರು. ಫ್ರಂಟ್ ಲೈನ್ ವರ್ಕರ್ಸ್‌ಗೆ ಬೂಸ್ಟರ್ ಡೋಸ್ ಹೆಚ್ಚೆಚ್ಚು ನೀಡಲು ಕ್ರಮ ವಹಿಸಿ ಎಂದರು.
ಘಟಕ ಮಂಜೂರು
15ನೇ ಹಣಕಾಸಿನ ಕ್ರಿಯಾ ಯೋಜನೆ ಆಗಲು ಬಾಕಿ ಇದೆ. ಸುಳ್ಯ ತಾಲೂಕಿಗೆ ಒಂದು ಪ್ಲಾಸ್ಟಿಕ್ ಮತ್ತು ಘನ ತ್ಯಾಜ್ಯ ನಿರ್ವಹಣೆಗೆ ಎಂ.ಆರ್.ಎಫ್. ಘಟಕ ಮತ್ತು ಒಂದು ಮಲ ತ್ಯಾಜ್ಯ ನಿರ್ವಹಣ ಘಟಕ ಮಂಜೂರುಗೊಂಡಿದೆ. ಎಂ.ಆರ್. ಎಫ್. ಘಟಕದಲ್ಲಿ ಪ್ಲಾಸ್ಟಿಕ್ ಮತ್ತು ಘನತ್ಯಾಜ್ಯಗಳನ್ನು ಸಂಗ್ರಹಿಸಿ ವ್ಯವಸ್ಥಿತವಾಗಿ ನಿರ್ವಹಣೆ ಮಾಡಲು ಈ ಘಟಕ ನೆರವಾಗುತ್ತದೆ. ಮಲ ತ್ಯಾಜ್ಯ ನಿರ್ವಹಣ ಘಟಕವನ್ನು ಆರಂಭಿಸಿ ಸಕ್ಕಿಂಗ್ ಯಂತ್ರದ ಮೂಲಕ ಮಲವನ್ನು ಸಂಗ್ರಹಿಸಿ ಅದನ್ನು ಗೊಬ್ಬರವಾಗಿ ಪರಿವರ್ತಿಸುವ ಘಟಕ ಆರಂಭಗೊಳ್ಳಲಿದೆ ಎಂದು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಎನ್. ಭವಾನಿ ಶಂಕರ್ ಮಾಹಿತಿ ನೀಡಿದರು.