ಹೂವಿನಹಡಗಲಿ: ಸರ್ಕಾರ ಕೇವಲ ಜಾತಿ ಆಧಾರದ ಮೇಲೆ ಮೀಸಲಾತಿ ನೀಡುವುದು ಬಿಟ್ಟು ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಎಲ್ಲಾ ಜಾತಿಯ ಬಡವರಿಗೂ ಕೂಡಾ ಮೀಸಲಾತಿ ನೀಡಬೇಕು ಎಂದು ಹರಿಹರ ವೀರಶೈವ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀ ಹೇಳಿದರು.
ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿ ವೀರಶೈವ ಪಂಚಮಸಾಲಿ ಸಂಘಟನೆಯಿಂದ ಆಯೋಜಿಸಲಾಗಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ ನಾಮಫಲಕ ಅನಾವರಣ ಹಾಗೂ ರಾಣಿ ಕಿತ್ತೂರು ಚನ್ನಮ್ಮ ವಿಜಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವೀರಶೈವ ಪಂಚಮಸಾಲಿ ಸಮಾಜ ಬಾಂಧವರು ಈಗಾಗಲೇ ಬಹುವರ್ಷಗಳಿಂದ 2ಎ ಮೀಸಲಾತಿಗಾಗಿ ಹೋರಾಟ ನಡೆಸಿದ್ದಾರೆ. ಯಾರದೋ ಹಕ್ಕನ್ನು ಕಿತ್ತುಕೊಂಡು ಸರ್ಕಾರ ನಮಗೆ ನೀಡುವುದು ಬೇಡ. ನಮ್ಮಲ್ಲಿರುವ ಬಡವರ ಮಕ್ಕಳಿಗೆ ವಿದ್ಯಾಭ್ಯಾಸ ಸೇರಿದಂತೆ ಅಭಿವೃದ್ಧಿಗಾಗಿ ಸೌಲಭ್ಯಗಳನ್ನು ನೀಡಬೇಕಾಗಿದೆ ಎಂದರು.
ಸರ್ಕಾರದ ಕೆಲವೊಂದು ನೀತಿ ನಿಯಮಗಳು ಬದಲಾಗಬೇಕಾಗಿದೆ. ಬಹುಕಾಲದಿಂದ ಮೀಸಲಾತಿಯ ಸೌಲಭ್ಯವನ್ನು ಅನುಭವಿಸುತ್ತಿರುವವರು ಎಲ್ಲರೂ ಅಲ್ಲದಿದ್ದರು ಕೆಲವರು ಈಗಾಗಲೇ ಆರ್ಥಿಕವಾಗಿ, ಶೈಕ್ಷಣಿಕವಾಗಿ ರಾಜಕೀಯ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿದ್ದಾರೆ. ಅವರ ಮಕ್ಕಳು ಕೂಡಾ ಸರ್ಕಾರದ ಸೌಲಭ್ಯದಲ್ಲಿ ಶಿಕ್ಷಣ ಸೇರಿದಂತೆ ಎಲ್ಲವನ್ನು ಪಡೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದರು.
ಇಂತಹ ದ್ವಂದ್ವ ನೀತಿಗಳನ್ನು ವಿರೋಧಿ ಸುವುದಕ್ಕಾಗಿಯೇ ನಕ್ಸಲರು ಮತ್ತು ಕಮ್ಯೂನಿಷ್ಟರು ಹುಟ್ಟಿಕೊಳ್ಳುತ್ತಾರೆ. ಸರ್ಕಾರ ಮೀಸಲಾತಿಯಲ್ಲಿ ಪರಿಷ್ಕರಣೆ ಮಾಡುವುದರ ಮೂಲಕ ಎಲ್ಲಾ ಸಮಾಜದ ಬಡವರಿಗೂ ಕೂಡಾ ಸೌಲಭ್ಯವನ್ನು ನೀಡಬೇಕು ಎಂದರು.
ತಾವು ಇತ್ತೀಚೆಗೆ 6 ತಿಂಗಳ ಹಿಂದೆ ಶ್ರೀ ಪೀಠಕ್ಕೆ ಸ್ವಾಮೀಜಿಗಳಾಗಿ ನೇಮಕಗೊಂಡಿದ್ದು, ಈ ಹಿಂದೆ ಯೋಗದ ಮೂಲಕ ಸಮಾಜ ಸೇವೆ ಮಾಡುತ್ತಿದ್ದೆ, 8 ರಾಷ್ಟ್ರಗಳನ್ನು ಸುತ್ತಿದ ಅನುಭವವಿದೆ. ಪೀಠದ ಜವಾಬ್ದಾರಿ ಹೊತ್ತಿರುವುದರಿಂದ ಸಮಾಜದ ಅಭಿವೃದ್ಧಿಯ ಕರ್ತವ್ಯವು ಕೂಡಾ ನನ್ನದಾಗಿರುವುದರಿಂದ ಹರಿಹರ ಪಂಚಮಸಾಲಿ ಪೀಠದಲ್ಲಿ ಈಗಾಗಲೇ ಪ್ರಸಾದದ ವ್ಯವಸ್ಥೆ ಸೇರಿದಂತೆ ಹಲವು ವಿಶೇಷತೆಗಳು ಇದ್ದು, ಸಮಾಜ ಬಾಂಧವರು ಪೀಠಕ್ಕೆ ಭೇಟಿ ನೀಡುವುದರ ಮೂಲಕ ಭಕ್ತಿ ಸಮರ್ಪಣೆ ಸೇರಿದಂತೆ ಸಾಮಾಜಿಕ ಹಾಗೂ ಧಾರ್ಮಿಕ ಜಾಗೃತಿ ಕೂಡಾ ಪಡೆದುಕೊಳ್ಳಬೇಕು ಎಂದರು.
ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಮಾತನಾಡಿ, ವೀರಶೈವ ಪಂಚಮಸಾಲಿ ಸಮಾಜ ಒಂದು ದೊಡ್ಡ ಸಮಾಜವಾಗಿದ್ದು, ಎಲ್ಲ ಸಮಾಜದವರೊಂದಿಗೆ ಅವಿನಾಭಾವ ಸಂಬಂಧ ಇರಿಸಿಕೊಂಡಂತಹ ಸಮಾಜದ ಅಭಿವೃದ್ಧಿ ಮತ್ತು ಮಾರ್ಗದರ್ಶನಕ್ಕಾಗಿ ವಚನಾನಂದ ಶ್ರೀಗಳಂತಹ ಒಬ್ಬ ಗುರುಗಳು ಲಭಿಸಿರುವುದು ಸಂತಸ ತಂದಿದೆ ಎಂದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿದರು. ತಾ.ಪಂ ಅಧ್ಯಕ್ಷೆ ಶಾರದಮ್ಮ, ಹಿರೇಹಡಗಲಿ ಗ್ರಾಪಂ ಅಧ್ಯಕ್ಷೆ ಕೊಂಪಿ ಚನ್ನಮ್ಮ, ಜಿ.ಪಂ ಸದಸ್ಯೆ ವೀಣಾ ಪರಮೇಶ್ವರಪ್ಪ, ಸಮಾಜದ ಮುಖಂಡರಾದ ಅರವಳ್ಳಿ ವೀರಣ್ಣ, ಬಳ್ಳುಳ್ಳಿ ವೀರಣ್ಣ, ಎಸ್.ಹಾಲೇಶ, ಬ್ಯಾಲಹುಣಿ ಬಸವನಗೌಡ, ಪಿ.ವೀರಣ್ಣ, ಸೊಪ್ಪಿನ ಮಂಜುನಾಥ, ಹಾಗೂ ಬಿ.ಹನುಮಂತಪ್ಪ ಸೇರಿದಂತೆ ಹಲವರು ಇದ್ದರು.