ಸೇಡಿಯಾಪು: ಬನ್ನೂರು ಹಾಗೂ ಕೋಡಿಂಬಾಡಿ ಗ್ರಾ.ಪಂ. ವ್ಯಾಪ್ತಿಗೆ ಬರುವ ಅನಿಲಕೋಡಿ ರಸ್ತೆಯ ಸೇಡಿಯಾಪು ಸಮೀಪ ಆರಂಭದ ಮಳೆಗೇ ರಸ್ತೆಯಲ್ಲಿ ನೀರು ಹರಿದು ತೋಡಿನ ಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕರು ಆಡಳಿತ ವ್ಯವಸ್ಥೆಯ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದರು. ಸಮಸ್ಯೆ ಪರಿಹಾರಕ್ಕೆ ಸ್ಥಳ ಪರಿಶೀಲನೆ ಬರುವುದಾಗಿ ತಿಳಿಸಿದ್ದ ಪುತ್ತೂರು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಆಗಮಿಸದೆ ಉಡಾಫೆಯಾಗಿ ಮಾತನಾಡಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.
ಸುಮಾರು 50ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಕಟ್ಟಿರುವ ಕಾಂಪೌಂಡ್ ಹಾಗೂ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದಾಗಿ ರಸ್ತೆ ಸಂಪೂರ್ಣ ಹದೆಗೆಟ್ಟು ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದರು.
ಕಳೆದ ವರ್ಷವೂ ಈ ಜಾಗದಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮಸ್ಥರು ಜಲ್ಲಿ ಸುರಿದು ರಸ್ತೆಯನ್ನು ದುರಸ್ತಿ ಮಾಡಿಕೊಂಡಿದ್ದರು. ಆದರೆ ಈ ಬಾರಿ ಆರಂಭದಲ್ಲೇ ಸುರಿಯುತ್ತಿರುವ ಮಳೆಗೆ ನೀರು ರಸ್ತೆಯಲ್ಲೇ ಹರಿದು ಜಲ್ಲಿಯೂ ನೀರು ಪಾಲಾಗುತ್ತಿದೆ. ಸಮಸ್ಯೆಯ ಕುರಿತು ಗ್ರಾಮಸ್ಥರು ಪುತ್ತೂರು ಸಹಾಯಕ ಆಯುಕ್ತರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕ್ರಮ ಕೈಗೊಳ್ಳುವಂತೆ ಅವರು ತಾ.ಪಂ. ಇಒಗೆ ಸೂಚಿಸಿದ್ದಾರೆ. ಆದರೆ ಇಒ ರಸ್ತೆಗೆ ಸಂಬಂಧಪಟ್ಟ ಬನ್ನೂರು ಹಾಗೂ ಕೋಡಿಂಬಾಡಿ ಗ್ರಾ.ಪಂ.ಗಳ ಪಿಡಿಒಗಳನ್ನು ಸ್ಥಳಕ್ಕೆ ಕಳುಹಿಸಿದ್ದರು. ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ದೂರವಾಣಿ ಮೂಲಕ ಇಒ ಅವರನ್ನು ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಸಿದ ಅವರು, “ನನಗೆ ಸಂಬಂಧಿಸಿದ್ದಲ್ಲ’ ಎಂದು ಉತ್ತರ ನೀಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಬನ್ನೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶಾಂತಾರಾಮ, ಕೋಡಿಂಬಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚಿತ್ರಾವತಿ, ಗ್ರಾ.ಪಂ. ಸದಸ್ಯರಾದ ಬಾಬು ಗೌಡ, ರತ್ನಾಕರ ಪ್ರಭು, ಗ್ರಾಮಸ್ಥರಾದ ಎಂ. ಗೋಪಾಲಕೃಷ್ಣ, ಶೀನಪ್ಪ ಕುಲಾಲ್, ಸೂರಪ್ಪ ಪೂಜಾರಿ, ಲೋಕೇಶ್ ಕುಲಾಲ್ ಮುಂತದವರು ಉಪಸ್ಥಿತರಿದ್ದರು.
ಇಒ ವಿರುದ್ಧ ಅಸಮಾಧಾನ; ಸಂಚಾರಕ್ಕೆ ತಡೆ
ಇಒ ವಿರುದ್ಧ ಅಸಮಾಧಾನಗೊಂಡ ಗ್ರಾಮಸ್ಥರು ವಾಹನಗಳನ್ನು ರಸ್ತೆಗೆ ಅಡ್ಡ ಇಟ್ಟು ಇಒ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ಪಿಡಿಒ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಅನಂತರ ಸಹಾಯಕ ಆಯುಕ್ತರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡುವುದಾಗಿ ಭರವಸೆಯಿತ್ತ ಹಿನ್ನೆಲೆಯಲ್ಲಿ ಸಾರ್ವಜನಿಕರು ರಸ್ತೆ ತಡೆ ತೆರವುಗೊಳಿಸಿದರು. ಸಹಾಯಕ ಆಯುಕ್ತರು ರಸ್ತೆ ಸಮಸ್ಯೆಗೆ ಪರಿಹಾರ ಒದಗಿಸದಿದ್ದರೆ ಶನಿವಾರ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.