ಸೇಡಂ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಸರ್ಕಸ್ ಪೂರ್ಣಗೊಂಡ ಬೆನ್ನಲ್ಲೇ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮದ ಅಧ್ಯಕ್ಷರು ಯಾರಾಗಬಲ್ಲರು ಎನ್ನುವ ಕುರಿತು ಚರ್ಚೆ ನಡೆದಿದೆ.
ಈ ಹಿಂದೆ ಕೆಕೆಆರ್‌ಡಿಬಿ ಪಟ್ಟ ಸೇಡಂ ಶಾಸಕ ರಾಜಕುಮಾರ ಪಾಟೀಲ ಅವರಿಗೆ ದೊರೆಯಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಈಗ ಪಟ್ಟ ಕೈತಪ್ಪುವುದೇ ಎನ್ನುವ ಆತಂಕ ಅವರ ಅಭಿಮಾನಿ ವಲಯದಲ್ಲಿ ಸೃಷ್ಟಿಯಾಗಿದೆ. ಇದಕ್ಕೆ ಕಾರಣ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸಹಕಾರಿಯಾಗಿ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘ ರಚಿಸಿರುವುದು. ಈ ನೂತನ ಸಂಘಕ್ಕೆ ಮಾಜಿ ರಾಜ್ಯಸಭಾ ಸದಸ್ಯ, ಕಲ್ಯಾಣ ಕರ್ನಾಟಕದ ಹರಿಕಾರ ಡಾ| ಬಸವರಾಜ ಪಾಟೀಲ್ ಸೇಡಂ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಬಸವರಾಜ ಪಾಟೀಲ ಸೇಡಂ ಅವರು ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರ ರಾಜಕೀಯ ಗುರು. ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದಲ್ಲಿ, ಇದರ ಮೇಲಿನ ಸ್ಥಾನವಾದ ಕೆಕೆಆರ್‌ಡಿಬಿ ಅಧ್ಯಕ್ಷ ಸ್ಥಾನವನ್ನು ಶಾಸಕ ತೇಲ್ಕೂರ ಒಪ್ಪುವರೇ ಎನ್ನುವುದು ಹಲವರ ಪ್ರಶ್ನೆಯಾಗಿದೆ. ಅಲ್ಲದೆ ಕೆಕೆಆರ್‌ಡಿಬಿ ಪಟ್ಟಕ್ಕಾಗಿ ಕಲಬುರಗಿ, ರಾಯಚೂರು, ಯಾದಗಿರಿಯ ಕೆಲ ಮಾಜಿ ಶಾಸಕರು, ಹಾಲಿ ಶಾಸಕರು ತೆರೆಮರೆಯಲ್ಲಿ ಪೈಪೋಟಿ ನಡೆಸುತ್ತಿರುವುದರಿಂದ ಬಿಜೆಪಿಗೆ ಮತ್ತಷ್ಟು ಇಕ್ಕಟ್ಟು ಎದುರಾದಂತಾಗಿದೆ. ಒಟ್ಟಾರೆಯಾಗಿ ಖಾಲಿ ಇರುವ ಕೆಕೆಆರ್‌ಡಿಬಿ ಅಧ್ಯಕ್ಷ ಸ್ಥಾನ ಯಾರ ಪಾಲಾಗುತ್ತದೆ ಎಂದು ಕಾಯ್ದು ನೋಡಬೇಕಿದೆ.
ಮಠಾಧಿಧೀಶರಿಂದ ಲಾಬಿ: ಕೆಕೆಆರ್‌ಡಿಬಿ ಪಟ್ಟ ತೇಲ್ಕೂರಗೆ ನೀಡುವಂತೆ ರಾಜ್ಯದ ಪ್ರತಿಷ್ಠಿತ ಮಠಾಧಿಧೀಶರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ತೇಲ್ಕೂರಗೆ ಅಧ್ಯಕ್ಷ ಸ್ಥಾನ ನೀಡುವುದರಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಅನುದಾನ ತಂದು, ಅಭಿವೃದ್ಧಿಗೆ ಮುಂದಾಗಬಹುದು ಎನ್ನುವ ಒತ್ತಾಸೆಯನ್ನು ಸಿಎಂ ಮುಂದಿಡಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಕೆಕೆಆರ್‌ಡಿಬಿ ಪಟ್ಟಕ್ಕಾಗಿ ನಾನು ಲಾಬಿ ನಡೆಸಿಲ್ಲ. ಜನ ಮಾತಾಡಿ
ಕೊಳ್ಳುತ್ತಿದ್ದಾರೆ ಅಷ್ಟೆ. ಪಕ್ಷಕ್ಕಾಗಲಿ, ಮುಖ್ಯಮಂತ್ರಿಗಾಗಲಿ
ನಾನು ಯಾವುದೇ ಒತ್ತಡ ಹೇರಿಲ್ಲ, ಹೇರಲ್ಲ. ಯಾರಿಗೆ ಯಾವ ಸ್ಥಾನ ನೀಡಬೇಕು ಎನ್ನುವುದನ್ನು ಪಕ್ಷವೇ ತೀರ್ಮಾನಿಸುತ್ತದೆ.
ರಾಜಕುಮಾರ ಪಾಟೀಲ ತೇಲ್ಕೂರ,
ಶಾಸಕ, ಸೇಡಂ
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಆಗಬೇಕಾದರೆ ಕೆಕೆಆರ್‌ಡಿಬಿ ಅಧ್ಯಕ್ಷರನ್ನಾಗಿ ಶಾಸಕ ರಾಜಕುಮಾರ ಪಾಟೀಲ ಅವರನ್ನು ಆಯ್ಕೆ ಮಾಡಬೇಕು. ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಅವರ ಕಾರ್ಯಕ್ಕೆ ಗೌರವ ನೀಡಬೇಕು.
ಶ್ರೀಮಂತ ಅವಂಟಿ,
ಬಿಜೆಪಿ ಮುಖಂಡ
ಶಿವಕುಮಾರ ಬಿ. ನಿಡಗುಂದಾ