Advertisement

ಕೊತ್ತಲ ಬಸವೇಶ್ವರ ಜಾತ್ರೆ: ಅಗ್ನಿ ಹಾಯ್ದ ಭಕ್ತರು

11:19 AM May 02, 2019 | Naveen |

ಸೇಡಂ: ಬಿಸಿಲು ನಾಡಿನ ಆರಾಧ್ಯ ದೈವ, ಹೈದ್ರಾಬಾದ ಕರ್ನಾಟಕ ಭಾಗದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಪಟ್ಟಣದ ಐತಿಹಾಸಿಕ ಶ್ರೀ ಕೊತ್ತಲ ಬಸವೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

Advertisement

ಸಂಜೆ 6:05ಕ್ಕೆ ನಡೆದ ಶ್ರೀ ಕೊತ್ತಲ ಬಸವೇಶ್ವರ ರಥೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಪಾಲ್ಗೊಂಡು, ರಥಕ್ಕೆ ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು.

ಹಳೆ ಗಂಜ್‌ ರಸ್ತೆಯಲ್ಲಿನ ರಥ ಬೀದಿಯಲ್ಲಿ ಗಂಟೆಗೂ ಹೆಚ್ಚು ಕಾಲ ರಥ ಸಾಗಿತು. ರಥೋತ್ಸವ ಕಣ್ತುಂಬಿಕೊಳ್ಳಲು ರಸ್ತೆ ಅಕ್ಕಪಕ್ಕದ ಕಟ್ಟಡಗಳ ಮೇಲೆ ಸಾರ್ವಜನಿಕರು ಜಮಾಯಿಸಿದ್ದರು.

ಇದಕ್ಕೂ ಮುನ್ನ ಪಟ್ಟಣದಲ್ಲಿ ಅಹೋರಾತ್ರಿ ಸಂಚರಿಸಿದ ಉಚ್ಛಾಯಿ ಮೆರವಣಿಗೆ ಬೆಳಗ್ಗೆ 8:40ಕ್ಕೆ ಹಳೆ ಗಂಜ್‌ ಏರಿಯಾದಲ್ಲಿನ ಅಗ್ಗಿ ಕಟ್ಟೆಗೆ ತಲುಪಿತು. ಸಾವಿರಾರು ಭಕ್ತರು ಶ್ರೀ ಕೊತ್ತಲ ಬಸವೇಶ್ವರ ಮಹಾರಾಜ ಕೀ ಜೈ, ಓಂ ಪರಾಗ್‌, ಜೈ ಜೈ ಪರಾಗ್‌ ಎನ್ನುವ ಜಯಘೋಷ ಮೊಳಗಿಸಿದರು.

ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನದ ಸದಾಶಿವ ಸ್ವಾಮೀಜಿ ಹಾಗೂ ಸಾವಿರಾರು ಭಕ್ತರು ಇದೆ ವೇಳೆ ಅಗ್ಗಿ ಪ್ರವೇಶಿಸಿ ಭಕ್ತಿ ಸಮರ್ಪಿಸಿದರು.

Advertisement

ಪರಂಪರಾಗತವಾಗಿ ನಡೆದು ಬಂದ ಪುರವಂತರ ಸೇವೆ ನೆರೆದವರ ಗಮನ ಸೆಳೆಯಿತು. ನೂರಾರು ಅಡಿ ಉದ್ದದ ದಾರವನ್ನು ನಾಲಿಗೆಗೆ ಚುಚ್ಚಿ ಕೊಂಡು ಹೊರತೆಗೆಯುವ ದೃಶ್ಯ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು.

ಭಕ್ತರು ಅಗ್ನಿ ಕಟ್ಟೆಗೆ ಪೂಜೆ ಸಲ್ಲಿಸಿದರು. ಅಗ್ನಿಯಲ್ಲಿನ ಭಸ್ಮ ಹಣೆಗೆ ಹಚ್ಚಿಕೊಂಡರು. ಅಗ್ನಿ ಪ್ರವೇಶ ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಮನೆಗಳ ಮೇಲೆ ಹತ್ತಿ ಜನ ಕೂತಿದ್ದರು.

ಸಿಪಿಐ ಮಹ್ಮದ ಫಸಿಯೋದ್ದಿನ್‌, ಪಿಎಸ್‌ಐ ಸುನೀಲ ಮೂಲಿಮನಿ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಪುರಾತನ ಕಾಲದಿಂದಲೂ ನಡೆದುಕೊಂಡು ಬರುತ್ತಿರುವಂತೆ (ಭೋವಿ) ವಡ್ಡರ್‌ ಸಮಾಜದ ವತಿಯಂದ ತೇರು ಎಳೆಯುವ ಸೇವೆ, ತಡಕಲ್ ಪರಿವಾರದ ಕಳಸಾರೋಹಣ ಸೇವೆ, ಉದ್ಯಮಿ ಶ್ರೀನಿವಾಸ ಕಾಸೋಜು ಅವರಿಂದ ರಥ ಅಲಂಕಾರ ಸೇವೆಗಳು ನಡೆದವು.

ಶಿವಶಂಕರೇಶ್ವರ ಮಠದ ಶಿವಶಂಕರ ಸ್ವಾಮೀಜಿ, ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ, ರಾಚೋಟಯ್ಯ ಸ್ವಾಮೀಜಿ, ಜಗಶಾಂತಿ ಧಾಮದ ಮಾತಾಜಿ ಹಾಗೂ ಇನ್ನಿತರ ಶ್ರೀಗಳು ಮತ್ತಿತರರು ಇದ್ದರು.

ಗಣ್ಯರು ಭಾಗಿ: ರಾಜ್ಯಸಭಾ ಮಾಜಿ ಸದಸ್ಯ ಡಾ| ಬಸವರಾಜ ಪಾಟೀಲ ಸೇಡಂ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹಾಗೂ ಜಿಲ್ಲೆ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next